Advertisement

Desi Swara:ತಾಯ್ನಾಡಿನ ಪರಂಪರೆಯನ್ನು ಉಳಿಸುತ್ತಿರುವ ಯು.ಎ.ಇ. ಕನ್ನಡಿಗರು

03:28 PM Jan 13, 2024 | Team Udayavani |

ಸಂಪಾದನೆ ಮತ್ತು ಸಾಧನೆಗಳ ಸಾಧ್ಯತೆಗಳನ್ನು ಹರಸುತ್ತಾ ತಾಯ್ನಾಡಾದ ಕರ್ನಾಟಕದಿಂದ ಯು.ಎ.ಇ.ಯಲ್ಲಿ ನೆಲೆಸಿರುವವರಾಗಿದ್ದಾರೆ ಯು.ಎ.ಇ. ಕನ್ನಡಿಗರು. ಅರಬ್‌ ರಾಷ್ಟ್ರ ಮತ್ತು ಭಾರತದ ಸಂಬಂಧವು ಬಹಳ ಹಳೆಯದ್ದೇ ಆಗಿದೆ. ಯು.ಎ.ಇ.ಯಲ್ಲಿ ಕ್ರಿ.ಶ. 1970ರ ಅನಂತರದಲ್ಲಾದ ಅತೀವೇಗದ ಅಭಿವೃದ್ಧಿಯ ಬದಲಾವಣೆಯಿಂದಾಗಿ ಈ ರಾಷ್ಟ್ರಕ್ಕೆ ಉದ್ಯೋಗವನ್ನು ಹರಸುತ್ತಾ ವಿಶ್ವದ ನಾನಾ ಭಾಗದಿಂದ ಜನರು ಆಗಮಿಸುತ್ತಿದ್ದಾರೆ. ಅದರಲ್ಲಿ ಬಹುತೇಕ ಮಂದಿ ಭಾರತೀಯರೇ ಆಗಿದ್ದಾರೆ.

Advertisement

ಅಧಿಕೃತ ಮಾಹಿತಿ ಪ್ರಕಾರ ಸುಮಾರು ಶೇಕಡ 38ಕ್ಕಿಂತಲೂ ಅಧಿಕ ನಾಗರಿಕರು ಭಾರತೀಯರಾಗಿದ್ದಾರೆ. 34,20,000 ನಾಗರಿಕರೊಂದಿಗೆ ಯು.ಎ.ಇ.ಯಲ್ಲಿ ಭಾರತದ ಡಯಾನ್ಪೋರಾವೂ 2ನೇ ಸ್ಥಾನದಲ್ಲಿದೆ. ಯು.ಎ.ಇ.ಯಲ್ಲಿ ಭಾರತೀಯರ ಪೈಕಿ ಮೊದಲ ಸ್ಥಾನದಲ್ಲಿ ಮಲಯಾಳಿಗಳಾದರೆ ಮೂರನೇ ಅಥವಾ ನಾಲ್ಕನೇ ಸ್ಥಾನದಲ್ಲಿ ಕನ್ನಡಿಗರಿದ್ದಾರೆ.

ಅದಾಗ್ಯೂ ಸಂಘಟಿತ ಕಾರ್ಯಗಳಲ್ಲಿ ಕನ್ನಡಿಗರು ಸೈ ಎನಿಸಿಕೊಂಡಿದ್ದಾರೆ. ಬೇರೆ ಬೇರೆ ನಾಮದಡಿ ಅಬುಧಾಬಿ, ದುಬೈ, ಅಲ್‌ಐನ್‌, ಶಾರ್ಜಾ ಕಡೆಗಳಲ್ಲಿ ಕನ್ನಡಿಗರು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಮುಂದಿದ್ದಾರೆ. ಇದರಿಂದಾಗಿ ಊರಲ್ಲಿ ನಡೆಯುವ ಪ್ರತೀ ಉತ್ಸವಗಳನ್ನೂ ಇಲ್ಲಿಯೂ ಅದೇ ಉತ್ಸಾಹದೊಂದಿಗೆ ಯು.ಎ.ಇ. ಕನ್ನಡಿಗರು ಆಚರಿಸಲು ಸಾಧ್ಯವಾಗುತ್ತಿದೆ.

ಕುಟುಂಬ ಸಮೇತ ಇಲ್ಲಿ ನೆಲೆಸಿರುವವರು ಮತ್ತು ಕುಟುಂಬ ಹಾಗೂ ಬಂಧುಮಿತ್ರಾದಿಗಳನ್ನು ತೊರೆದು ನೆಲೆಸಿರುವವರೆಲ್ಲರೂ ಸಹ ಯುಗಾದಿ, ಕ್ರಿಸ್ಮಸ್‌, ದೀಪಾವಳಿ, ಈದ್‌, ಕನ್ನಡ ರಾಜ್ಯೋತ್ಸವ ಮುಂತಾದ ಎಲ್ಲ ಹಬ್ಬಗಳಲ್ಲಿ ಪಾಲ್ಗೊಂಡು ನಮ್ಮೂರ ಪರಂಪರೆಯನ್ನು ಉಳಿಸುವ ಧನಾತ್ಮಕ ಪ್ರವೃತಿ ಆಗುತ್ತಿದೆ. ಪ್ರಾಚೀನ ಗ್ರೀಕ್‌ ತತ್ತ್ವಜ್ಞಾನಿ ಅರಿಸ್ಟಾಟಲ್‌ ಹೇಳಿರುವಂತೆ ಮಾನವನು ಸಮಾಜ ಜೀವಿಯಾಗಿದ್ದಾನೆ. ಸಮೂಹ ಜೀವಿಗಳು ಪರಸ್ಪರ ಒಗ್ಗಟ್ಟಿನಿಂದ ಇರಬೇಕಾಗಿರುವುದು ಅನಿವಾರ್ಯ.

ಆದಿ ಯುಗದ ಪಳಯುಳಿಯುವಿಕೆಯಾಗಿ ಬಂದಿರುವ ಸಂಘಟನಾತ್ಮಕ ಅಲೆಮಾರಿ ಚಿಂತನೆ ಈಗಲೂ ವಿಭಿನ್ನ ರೂಪದಲ್ಲಿ ಪ್ರತ್ಯಕ್ಷವಾಗುತ್ತಿದೆ. ಇಂತಹ ಸಂಘದಲ್ಲಿ ದುಬೈ ಹೆಮ್ಮೆಯ ಕನ್ನಡಿಗರು ಸಂಘವು ಒಂದು ಪ್ರಮುಖ ಸಂಘಟನೆಯಾಗಿ ಖ್ಯಾತಿ ಪಡೆದಿದೆ. ಪ್ರತೀ ವರ್ಷವು ಸಮಾಜಮುಖಿ ಚಿಂತನೆಗಳಿರುವ ನಾಯಕರನ್ನು ಈ ಸಂಘದ ಪದಾಧಿಕಾರಿಯಾಗಿ ನೇಮಿಸಿ ನವೀನ ಪದ್ಧತಿಗಳೊಂದಿಗೆ ಇದನ್ನು ಅವರು ಮುನ್ನಡೆಸುತ್ತಿದ್ದಾರೆ.

Advertisement

ಕೇವಲ ಹಬ್ಬಾಚರಣೆಗಳಿಗೆ ಮಾತ್ರ ಸೀಮಿತವಾಗಿರಿಸಿದೆ ದುಬೈ ಹೆಮ್ಮೆಯ ಕನ್ನಡಿಗರ ಕೂಟವು ದುಃಖತಪ್ತರಾಗಿರುವ ಯು.ಎ.ಇ. ಕನ್ನಡಿಗರ ಕಣ್ಣೀರೊರೆಸುವ ಸಾಂತ್ವನ ಕಾರ್ಯದಲ್ಲೂ ಮುಂದಿದೆ. ರಕ್ತದಾನ, ಯಾರಾದರೂ ಮರಣ ಹೊಂದಿದರೆ ಮೃತ ಶರೀರವನ್ನು ತಾಯ್ನಾಡಿಗೆ ಮರಳಿಸುವ, ಊರಿಂದ ಉದ್ಯೋಗಕ್ಕೆಂದು ಏಜೆಂಟರು ಕರೆತಂದು ವಂಚನೆಗೊಳಪಟ್ಟವರ ಬಿಡುಗಡೆಗೊಳಿಸುವ… ಇತ್ಯಾದಿ ಸಾಮಾಜಿಕ ಸಾಂತ್ವನ ಕಾರ್ಯಗಳಲ್ಲೂ ಮಾದರಿಯಾಗಿ ಬೆಳೆದು ನಿಂತಿದೆ.

ಪ್ರತೀ ವರ್ಷ ಕರ್ನಾಟಕದ ಕ್ರೀಡಾ ಸಾಧಕರನ್ನು ಪರಿಗಣಿಸಿ ದುಬೈ ಕ್ರೀಡಾ ರತ್ನ ಪ್ರಶಸ್ತಿ, ಕನ್ನಡಿಗ ಸಂಗೀತ ಕಲೆಗಾರರನ್ನು ಗೌರವಿಸಿ ಅವರಿಗೂ ವೇದಿಕೆಗಳನ್ನು ಒದಗಿಸಿ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಉದ್ಯೋಗವನ್ನು ಹರಸಿ ಬಂದ ತಾಯ್ನಾಡಿನ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಮೇಳವನ್ನು ಸಂಘಟಿಸಿ ಅವರಿಗೆ ಅಸರೆಯಾಗಿ ಬೆಳೆದಿದೆ. ಕನ್ನಡಿಗ ವ್ಯಾಪಾರಸ್ಥರಿಗಾಗಿ ಕನ್ನಡಿಗ ವ್ಯಾಪಾರಸ್ಥ ವೇದಿಕೆಯನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಇವೆಲ್ಲವೂ ಹುಟ್ಟಿ ಇನ್ನೂ ಹತ್ತು ವರ್ಷ ಪೂರ್ತಿಯಾಗದ ದುಬೈ ಹೆಮ್ಮೆಯ ಕನ್ನಡಿಗರು ಸಂಘದ ಮಹತ್ತರ ಸಾಧನೆಯಾಗಿದೆ. ಇದು ಇಲ್ಲಿ ನೆಲೆಸಿರುವ ಕನ್ನಡಿಗರ ಶಕ್ತಿಯನ್ನು ತೋರಿಸುತ್ತದೆ. ಮಾತ್ರವಲ್ಲದೆ ದಶಮಾನೋತ್ಸವದ ಹೊಸ್ತಿಲಲ್ಲಿರುವ ದುಬೈ ಹೆಮ್ಮೆಯ ಕನ್ನಡಿಗರು ಸಂಘವು ಹಸುಗೂಸಿನ ಪ್ರಾಯದಲ್ಲೇ ಯು.ಎ.ಇ.ಯಲ್ಲಿರುವ ಕನ್ನಡಿಗರ ಅಧಿಕೃತ ಶಬ್ಧವಾಗಿ ಬೆಳೆದು ನಿಂತಿದೆ.

ಅದೇ ರೀತಿ ವಿಶ್ವದಲ್ಲೇ ಖ್ಯಾತಿ ಪಡೆದಿರುವ ಶಾರ್ಜಾ ಪುಸ್ತಕ ಮೇಳದಲ್ಲಿ ಕನ್ನಡದ ಹೆಸರಾಂತ ಪ್ರಕಾಶಮಾನವಾದ ಶಾಂತಿ ಪ್ರಕಾಶನವು ಅವಕಾಶ ಪಡೆದು ಕನ್ನಡಿಗರ ಪ್ರತಿನಿಧಿಯಾಗಿ ಕನ್ನಡದ ಕಂಪನ್ನು ಪಸರಿಸುತ್ತಿದೆ. ಇವುಗಳ ಹೊರತಾಗಿ ವಾಣಿಜ್ಯ ಕ್ಷೇತ್ರ, ವೈದ್ಯಕೀಯ, ಶೈಕ್ಷಣಿಕ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಕನ್ನಡಿಗರು ಸಾಧನೆ ಮಾಡುತ್ತಿದ್ದಾರೆ.

*ಮಹಮ್ಮದ್‌ ಫೈಸಲ್‌ ಎ.ಕೆ., ಯುಎಇ

 

Advertisement

Udayavani is now on Telegram. Click here to join our channel and stay updated with the latest news.

Next