ನಾವು ಯಾವುದೇ ನಗರ, ಪಟ್ಟಣ, ಹಳ್ಳಿಗೆ ಭೇಟಿ ಕೊಟ್ಟಾಗ ಅಲ್ಲಿ ಒಂದು ವಿಶೇಷತೆ ಇದ್ದೇ ಇರುತ್ತದೆ. ಅದರಲ್ಲೂ ಕೆಲವು ನಗರಗಳು ಶುಚಿ, ರುಚಿ, ವಿಶೇಷ ತಿಂಡಿಗಳಿಂದಲೇ ಗುರುತಿಸಿಕೊಂಡಿರುತ್ತವೆ. ಅದಕ್ಕೆ ಅಲ್ಲಿನ ಹೋಟೆಲ್‌ಗಳು ಕಾರಣವಾಗಿರುತ್ತವೆ. ಕೆಲ ತಿಂಡಿ, ಊಟ ಬೇಕೆಂದ್ರೆ ನಿರ್ದಿಷ್ಟವಾದ ಹೋಟೆಲ್‌ಗೇ ಹೋಗಬೇಕು. ಇಂಥ ಹಿನ್ನೆಲೆಹೊಂದಿರುವ ಹೋಟೆಲೊಂದು ತುಮಕೂರು ನಗರದಲ್ಲಿ ಇದ್ದು, ಇದಕ್ಕೆ 60 ವರ್ಷಗಳ ಇತಿಹಾಸವೂ ಇದೆ.
ತುಮಕೂರಿನಲ್ಲಿರುವ ಹಳೆಯ ಹೋಟೆಲ್ ಎಂದರೆ ಮೊದಲು ನೆನಪಿಗೆ ಬರುವುದೇ ದ್ವಾರಕ ಹೋಟೆಲ್. ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಎಂ.ಜಿ.ರಸ್ತೆಯಲ್ಲಿರುವ ಈ ಹೋಟೆಲ್ ದೋಸೆಗೆ ಫೇಮಸ್. ಉದ್ಯಮಿಗಳು, ವ್ಯಾಪಾರಿಗಳು, ಸರ್ಕಾರಿ ಅಧಿಕಾರಿಗಳು ಇಲ್ಲಿಗೆ ಕುಟುಂಬ ಸಮೇತ ಬಂದು ಇಲ್ಲಿ ಸಿಗುವ ವಿವಿಧ ಬಗೆಯ ದೋಸೆಗಳನ್ನು ಸವಿಯುತ್ತಾರೆ.
1958ರಲ್ಲಿ, ದಿ.ವೆಂಕಟಾಚಲಯ್ಯ ಅವರು ದ್ವಾರಕ ಹೋಟೆಲ್‌ಅನ್ನು ತೆರೆದರು. ಇಂದು ಅವರ ಮಗ ಹರ್ಷ ಹೋಟೆಲ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಷ್ಟೇ ಅಲ್ಲ, ಕಳೆದ 60 ವರ್ಷಗಳಲ್ಲಿ ತಿನಿಸುಗಳಲ್ಲಿ ಸಾಕಷ್ಟು ಬದಲಾವಣೆಯಾಗಿದ್ದರೂ ಗ್ರಾಹಕರಿಗೆ ಈಗಲೂ ಹಳೆಯ ರುಚಿಯ ತಿನಿಸುಗಳನ್ನೇ ನೀಡುತ್ತಿದ್ದಾರೆ. ಶುಚಿಯನ್ನೂ ಕಾಪಾಡಿಕೊಂಡಿದ್ದಾರೆ. ಇಲ್ಲಿ ಉಳಿದುಕೊಳ್ಳು ರೂಂಗಳ ವ್ಯವಸ್ಥೆ ಕೂಡ ಇದ್ದು, ಈ ಹೋಟೆಲ್ ಇಂದಿಗೂ ಜನರನ್ನು ಆಕರ್ಷಿಸುತ್ತಿದೆ.
ಈ ಹೋಟೆಲ್‌ನಲ್ಲಿ ವಿಶೇಷವಾಗಿ ರವೆದೋಸೆ, ಈರುಳ್ಳಿ ದೋಸೆ, ಮಸಾಲೆ ದೋಸೆ, ಇಡ್ಲಿ, ವಡೆ ತುಂಬಾ ರುಚಿಯಾಗಿರುತ್ತೆ. ಹೀಗಾಗಿಯೇ ಇಲ್ಲಿಗೆ ದೋಸೆ ತಿನ್ನಲು ಜನ ಬರುತ್ತಾರೆ. ಮಧ್ಯಾಹ್ನದ ವೇಳೆಯಲ್ಲಿ ಊಟಕ್ಕೆ ಬಂದರೆ ಕಾಯುವಂತಹ ಸ್ಥಿತಿ ಇಂದಿಗೂ ಇದೆ. ಬೇರೆ ಬೇರೆ ಊರುಗಳಿಂದ ನಗರಕ್ಕೆ ಬರುವ ಅನೇಕ ಜನ ದ್ವಾರಕ ಹೋಟೆಲ್‌ಗೆ ಬಂದು ತಿಂಡಿ ತಿನ್ನುವುದು, ಇಲ್ಲವೇ ಊಟ ಮಾಡಿ ಹೋಗುವುದು ಒಂದು “ಪದ್ಧತಿಯೇ’ ಆಗಿ ಹೋಗಿದೆ.
ಬೆಲೆಯಲ್ಲೂ ಅಷ್ಟೇ, ಹೆಚ್ಚು ದುಬಾರಿಯೂ ಅಲ್ಲದ ಗ್ರಾಹಕರ ಕೈಗೆಟಕುವ ದರದಲ್ಲೇ ಊಟ ತಿಂಡಿ ಸಿಗುವುದರಿಂದ ಸಾಮಾನ್ಯ ಜನರೂ ಇಲ್ಲಿ ತಿಂಡಿ ತಿನ್ನಲು ಬರುತ್ತಾರೆ.
ಒಂದು ಕಾಲದಲ್ಲಿ ಪತ್ರಕರ್ತರ ಅಡ್ಡೆ: ಈ ಮೊದಲು ತುಮಕೂರಿನಲ್ಲಿ ಯಾವುದೇ ಸುದ್ದಿಗೋಷ್ಠಿಯಾದರೂ ದ್ವಾರಕ ಹೋಟೆಲ್‌ನಲ್ಲೇ ನಡೆಯುತ್ತಿತ್ತು. ಜಿಲ್ಲಾ ಕೇಂದ್ರದಲ್ಲಿನ ಹಿರಿಯ, ಕಿರಿಯ ಪತ್ರಕರ್ತರು ಇಲ್ಲಿ ಸೇರಿ, ತಿಂಡಿ ತಿಂದು ಚಹಾ ಕುಡಿಯದೇ ಹೋಗುತ್ತಿರಲಿಲ್ಲ. ಹಿರಿಯ ಪತ್ರಿಕೋದ್ಯಮಿ ಗುಂಡೂರಾಯರ ಪತ್ರಿಕಾ ಕಾರ್ಯಾಲಯವೂ ಇಲ್ಲೇ ಇದ್ದುದ್ದರಿಂದ ಅವರು ಕಿರಿಯ ಪರ್ತಕರ್ತರನ್ನು ಇಲ್ಲಿಗೆ ಕರೆದುಕೊಂಡು ಅವರಿಗೆಲ್ಲ ಕಾಫಿ, ತಿಂಡಿ ತಿನ್ನಿಸಿ ಮಾರ್ಗದರ್ಶನ ನೀಡುತ್ತಿದ್ದರು. ಅವರ ಮಗ ಎಚ್.ಜಿ.ವೆಂಕಟೇಶ್‌ಮೂರ್ತಿ ಸೇರಿ ಹಲವು ಹಿರಿಯ ಪತ್ರಕರ್ತರು ಈಗಲೂ ಇಲ್ಲಿ ಸೇರುತ್ತಾರೆ.
ಸಿನಿಮಾ ನಟರು ಭೇಟಿ ಕೊಟ್ಟಿದ್ದಾರೆ: ಬೆಂಗಳೂರಿನಿಂದ ಮಲೆನಾಡು, ಉತ್ತರ ಕರ್ನಾಟಕ ಭಾಗಕ್ಕೆ ಹೋಗಬೇಕಾದ್ರೆ ತುಮಕೂರು ದಾಟಿಕೊಂಡೇ ಹೋಗಬೇಕು. ಹೀಗಾಗಿ ಬೆಳಗ್ಗಿಯೇ ಬೆಂಗಳೂರು ಬಿಟ್ಟವರು ತುಮಕೂರಿನಲ್ಲಿ ತಿಂಡಿ ತಿಂದು ಮುಂದೆ ಸಾಗುವುದು ಸಾಮಾನ್ಯ. ಹಿರಿಯ ನಟರಾದ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ಸಿನಿಮಾ ನಟ ನಟಿಯರು ಇಲ್ಲಿಗೆ ಬಂದು ತಿಂಡಿ ತಿಂದು, ಊಟ ಮಾಡಿ ಹೋದ ಉದಾಹರಣೆಯೂ ಇದೆ.
* ಭೋಗೆಶ್ ಎಂ.ಆರ್/ ಚಿ.ನಿ. ಪುರುಷೋತ್ತಮ್