ಚಿತ್ರದುರ್ಗದ ಮುರುಘಾಮಠವು, ಪ್ರತಿವರ್ಷ ಶರಣ ಸಂಸ್ಕೃತಿ ಉತ್ಸವ ನಡೆಸುತ್ತದೆ. ಹತ್ತುದಿನಗಳ ಆ ಉತ್ಸವದಲ್ಲಿ ಒಂದು ದಿನ, ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಜಾನಪದ ಕಲಾಮೇಳವು, ಮಠದಿಂದ ಕೋಟೆಯ ತಪ್ಪಲಿನವರೆಗೆ ನಡೆಯುತ್ತದೆ. ಆ ದಿನ ಮೆರವಣಿಗೆಯಲ್ಲಿ ಮಠದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಒಂದೊಂದು ರೂಪಕವನ್ನು ಪ್ರದರ್ಶಿಸಬೇಕು. ನಾನೂ ಮಠದ ವತಿಯಿಂದ ನಡೆಯುತ್ತಿದ್ದ ಕಾಲೇಜಿನ ವಿದ್ಯಾರ್ಥಿ ಆಗಿದ್ದೆ. ನಮ್ಮ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನ ವತಿಯಿಂದ “ವರದಕ್ಷಿಣೆಯ ಪಿಡುಗು’ ಎಂಬ ವಿಷಯದ ಮೇಲೆ ಒಂದು ಕಿರು ರೂಪಕವನ್ನು ಸಿದ್ಧಪಡಿಸಿದ್ದೆವು.
ಆ ರೂಪಕದಲ್ಲಿ ಅಮ್ಮ, ಅತ್ತೆ ಹಾಗೂ ವಧು, ಹೀಗೆ ಮೂರು ಹೆಣ್ಣು ಪಾತ್ರಗಳು ಬರುತ್ತವೆ. ನಮ್ಮ ಕಾಲೇಜಿನಲ್ಲಿ ಆಗ ಹೆಣ್ಣುಮಕ್ಕಳ ಸಂಖ್ಯೆ ಬಹಳ ಕಡಿಮೆ ಇತ್ತು. ಈ ಪಾತ್ರಗಳಲ್ಲಿ ಅಭಿನಯಿಸಲು ಯಾವ ಹೆಣ್ಣುಮಕ್ಕಳೂ ಮುಂದೆ ಬರದೇ ಹೋದಾಗ ಒಬ್ಬ ಹಿರಿಯ ವಿದ್ಯಾರ್ಥಿಯನ್ನು ಅತ್ತೆ ಪಾತ್ರ ನಿರ್ವಹಿಸಲು ಹಾಗೂ ತೆಳ್ಳಗೆ ಬೆಳ್ಳಗೆ ಇದ್ದ ನನ್ನನ್ನು ವಧುವಿನ ಪಾತ್ರಕ್ಕೆ ಬಲವಂತವಾಗಿ ಒಪ್ಪಿಸಿದರು. ಅಮ್ಮನ ಪಾತ್ರಕ್ಕೆ ಯಾರೂ ಸಿಗದೇ ಹೋದ್ದರಿಂದ ವಧುವಿಗೆ ಅಮ್ಮ ಇಲ್ಲವೆನ್ನುವ ರೀತಿಯಲ್ಲಿ ರೂಪಕವನ್ನು ಸಿದ್ಧಪಡಿಸಿದೆವು.
ಮೂರುನಾಲ್ಕು ದಿನಗಳ ತಾಲೀಮು ಮಾಡಿ, ಕೊನೆಯ ದಿನ ಅಕ್ಕನ ಸೀರೆಯೊಂದಿಗೆ ಕಾಲೇಜಿಗೆ ಬಂದೆ. ರಿಹರ್ಸಲ್ ವೇಳೆ, ಸೀರೆ ಧರಿಸಿರಲಿಲ್ಲ. ಹಾಗಾಗಿ ಸೀರೆ ಉಡಲು ಅಭ್ಯಾಸವೂ ಆಗಿರಲಿಲ್ಲ. ಇವತ್ತೇ ನಾಟಕದ ದಿನ. ಆದರೆ, ಸೀರೆ ಉಡಲು ಬರುತ್ತಿಲ್ಲ. ಏನ್ಮಾಡೋದು ಎಂದು ತಿಳಿಯದೆ ಪೇಚಾಡುತ್ತಿದ್ದಾಗ, ಕಾಲೇಜಿನ ಎದುರಿನ ಹೂದೋಟದಲ್ಲಿ ಕೆಲಸ ಮಾಡುತ್ತಿದ್ದ ಹನುಮಜ್ಜಿ ಕಾಣಿಸಿದರು. ಅವರಿಗೆ ವಿಷಯ ತಿಳಿಸಿ, ಅವರಿಂದಲೇ ಸೀರೆ ಉಡಿಸಿಕೊಂಡೆವು. ಎಲ್ಲಾ ರೆಡಿಯಾಗಿ ಟ್ರ್ಯಾಕ್ಟರ್‌ಅನ್ನು ಏರಬೇಕೆನ್ನುವಷ್ಟರಲ್ಲಿ, ಮೆರವಣಿಗೆಯು ಆರರಿಂದ ಏಳು ತಾಸು ನಡೆಯುವುದರಿಂದ ಮೂತ್ರ ವಿಸರ್ಜನೆ ಕೆಲಸ ಮುಗಿಸಿಬಿಡೋಣ ಎಂದು ಶೌಚಾಲಯದ ಒಳಹೊಕ್ಕೆ. ಅಲ್ಲಿದ್ದ ಹುಡುಗರೆಲ್ಲ ಕೇಕೆ ಹಾಕುತ್ತ ಜೋರಾಗಿ ಕೂಗಿಕೊಂಡರು! ಹುಡುಗಿಯೊಬ್ಬಳು ಪುರುಷರ ಶೌಚಾಲಯ ಹೊಕ್ಕಳು ಎಂಬುದು ಆ ಕೇಕೆಗೆ ಕಾರಣ ಆಗಿತ್ತು. ಅವರ ಕಿರುಚಾಟ ಕೇಳಿ ಗಾಬರಿಯಾಯಿತು. ತಕ್ಷಣವೇ “ಲೇ, ನಾನ್ ಕಣೊÅà ಕಿಟ್ಟ’ ಎಂದುಬಿಟ್ಟೆ ಅಷ್ಟೆ; ಎಲ್ಲರೂ ಇನ್ನೂ ಜೋರಾಗಿ ನಗತೊಡಗಿದರು.
ಟ್ರ್ಯಾಕ್ಟರ್ ಹತ್ತಿ ರೂಪಕ ಶುರುವಾದ ಮೇಲೂ ಹುಡುಗರ ಕಾಟ ತಪ್ಪಲಿಲ್ಲ. ರೂಪಕದಲ್ಲಿ ಗಂಡ ಮತ್ತು ಅತ್ತೆ ನನ್ನನ್ನು, ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹೊಡೆಯುವಾಗ ಅಲ್ಲೇ ಕೆಳಗಿದ್ದ ಹುಡುಗರು, “ನಿನ್ನ ಗಂಡ ಸರಿ ಇಲ್ಲ, ನನ್ನನ್ನು ಮದುವೆಯಾಗ್ತಿàಯಾ?’ ಎಂದು ಕಿಚಾಯಿಸುವುದು, ಹಿಂದಿನಿಂದ ಸೆರಗು ಹಿಡಿದು ಎಳೆಯುವುದು, ಕಣ್ಣು ಹೊಡೆಯುವುದು, ಕಾಗದದ ಉಂಡೆ ಮಾಡಿ ನನ್ನ ಮೇಲೆ ಎಸೆಯುವುದು, ಹೀಗೆಲ್ಲಾ ಮಾಡುತ್ತಿದ್ದರು. ಮತ್ತೂಂದು ಕಡೆಯಲ್ಲಿ, ಟ್ರ್ಯಾಕ್ಟರ್ ಬೇರೆ ಎತ್ತಾಕುತ್ತಿತ್ತು. ಗಂಡ ಮತ್ತು ಅತ್ತೆಯ ಪಾತ್ರಧಾರಿಗಳ ತಳ್ಳಾಟದಲ್ಲಿ, ಅಜ್ಜಿ ಉಡಿಸಿದ್ದ ಸೀರೆಯೆಲ್ಲಾ ಸಡಿಲವಾಗಿ ಸೊಂಟದ ಮೇಲೆ ನಿಲ್ಲದಂತಾಯಿತು. ಏನು ಮಾಡಬೇಕೆಂದು ತಿಳಿಯದೆ ಒಂದು ಕ್ಷಣ ಗಾಬರಿಯಾದೆ. ನಂತರ ಒಂದು ಉಪಾಯ ಹೊಳೆದು, ಅಲ್ಲೇ ಇದ್ದ ಸೆಳೇದುರಿ ತೆಗೆದುಕೊಂಡು ಸೀರೆಯನ್ನು ಹಾಗೇ ಸುಮ್ಮನೆ ಸುತ್ತಿಕೊಂಡು ಗಟ್ಟಿಯಾಗಿ ಕಟ್ಟಿ ರೂಪಕವನ್ನು ಮುಂದುವರಿಸಿದೆವು. ಎಲ್ಲಾ ಮುಗಿಯುವದರೊಳಗೆ ಸಂಜೆಯಾಗಿತ್ತು.
ಸದ್ಯ ಮುಗಿಯಿತಲ್ಲ ಎಂದು ಸ್ನೇಹಿತನ ರೂಮ್‌ಗೆ ಹೋಗಿ ಬಟ್ಟೆ ಬದಲಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ಆಗ ಸ್ನೇಹಿತರು ಹುಡುಕಿಕೊಂಡು ಬಂದು- “ಏ, ನೀ ಇಲ್ಲಿದ್ದೀಯ? ನಮ್ಮ ರೂಪಕಕ್ಕೆ ಮೂರನೇ ಬಹುಮಾನ ಬಂದಿದೆ ಬಾ’ ಎಂದಾಗ, ಬೆಳಗ್ಗೆಯಿಂದ ಸೀರೆ ಉಟ್ಟು ಅನುಭವಿಸಿದ್ದ ಸಂಕಟವೆಲ್ಲ ಮಾಯವಾಯಿತು.
ಸ್ವಾನ್ ಕೃಷ್ಣಮೂರ್ತಿ