Advertisement

Bantwal ಎರಡೂಕಾಲು ಎಕ್ರೆ ವಿಸ್ತೀರ್ಣ; ಅಭಿವೃದ್ಧಿ ಆಗದೇ ಜೀರ್ಣ

01:23 AM May 18, 2024 | Team Udayavani |

ಬಂಟ್ವಾಳ: ಸಾಮಾನ್ಯವಾಗಿ ಎತ್ತರದ ಪ್ರದೇಶವೆಂದರೆ ಅಲ್ಲಿ ನೀರಿಲ್ಲ, ಬರೀ ಬೋಳು ಗುಡ್ಡ ಎಂಬುದು ನಮ್ಮ ನಂಬಿಕೆ. ಆದರೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗಿರಿಗುಡ್ಡೆ ಎತ್ತರದ ಪ್ರದೇಶದಲ್ಲಿ ಈ ಬಿರು ಬೇಸಿಗೆಯಲ್ಲೂ ಜಲಸಂಪತ್ತು ಕಂಡುಬಂದಿದ್ದು, ಪ್ರಾಚೀನ ಕಾಲದಲ್ಲಿಯೇ ಇಲ್ಲಿ ಸುಮಾರು 2.25 ಎಕ್ರೆ ವಿಸ್ತೀರ್ಣದಲ್ಲಿ ಗಿರಿಗುಡ್ಡೆ ಕೆರೆ ಇತ್ತಂತೆ.

Advertisement

ಸುತ್ತಲೂ ಗಿಡ ಮರಗಳು, ಪೊದೆ ಗಳು ಹಚ್ಚ ಹಸುರಿನಿಂದ ಕೂಡಿದ್ದು, ನಗರ ಪ್ರದೇಶವಾದರೂ ಕಾನನದ ರೀತಿಯ ಕಡಿದಾದ ದಾರಿಯಲ್ಲಿ ಸಾಗಿದಾಗ ಗಿರಿಗುಡ್ಡೆ ಕೆರೆಯ ದರ್ಶನವಾಗುತ್ತದೆ. ಗಿರಿಗುಡ್ಡೆ ಕೆರೆಗೆ ಧಾರ್ಮಿಕ ಹಿನ್ನೆಲೆಯೂ ಇದೆ ಎನ್ನಲಾಗಿದ್ದು, ರಾಯರಚಾವಡಿ ದೈವಸ್ಥಾನದ ಜತೆಗೆ ಸ್ಥಳೀಯ ದೈವ ಸಾನಿಧ್ಯಗಳಿಗೂ ಇದು ಸಂಬಂಧಪಟ್ಟಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಪಾಳುಬಿದ್ದಿರುವ ಕೆರೆಯನ್ನು ಈಗ ಆಭಿವೃದ್ಧಿಗೊಳಿಸಬೇಕಿದೆ.

ಕೆರೆಯ ಒಂದು ಬದಿಯಲ್ಲಿ ಕಲ್ಲುಕಟ್ಟಿ ಕಾಲುವೆಯ ಮಾದರಿ ಮಾಡಿ ಅದಕ್ಕೆ ಸಣ್ಣ ಪೈಪು ಇಡಲಾಗಿದ್ದು, ಕಣಿಯ ಮೂಲಕ ಕೆರೆಯಿಂದ ನೀರು ಕೆಳಗಿನ ಪ್ರದೇಶದ ಕೃಷಿ ಭೂಮಿಗಳಿಗೆ ಹೋಗುತ್ತಿತ್ತು ಎನ್ನಲಾಗಿದೆ. ಈಗಲೂ ಸಣ್ಣ ಹೊಂಡದಲ್ಲಿ ಪೈಪುಗಳು ಇದ್ದು, ಹೀಗಾಗಿ ಹೆಚ್ಚು ನೀರಿರುವ ಸಂದರ್ಭ ಈಗಲೂ ನೀರು ಕೆಳಗಿನ ಭಾಗಕ್ಕೆ ಹರಿಯುತ್ತದಂತೆ.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ (ಬೂಡಾ)ವು ಗಿರಿಗುಡ್ಡೆ ಕೆರೆಯ ಅಭಿವೃದ್ಧಿಗೆ ಶ್ರಮಿಸಿತ್ತು. ಅನುದಾನವನ್ನು ಸಣ್ಣ ನೀರಾವರಿ ಇಲಾಖೆಗೆ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿವೆ. ಬೂಡಾದ ಬಳಿ ಹೆಚ್ಚುವರಿ ಅನುದಾನವಿಲ್ಲ. ಹಾಗಾಗಿ ಪಾಳು ಬಿದ್ದಂತಾಗಿದೆ. ಈ ಕೆರೆ ಅಭಿವೃದ್ಧಿಗೊಂಡರೆ ಸುತ್ತಲಿನ ಪ್ರದೇಶದ ಅಂತರ್ಜಲ ವೃದ್ಧಿಗೊಳ್ಳಲಿದೆ. ಬೇಸಗೆಯಲ್ಲೂ ಸುತ್ತಲಿನ ನಿವಾಸಿಗಳಿಗೆ ಹಾಗೂ ಕೆಳಗಿನ ಕೃಷಿ ಪ್ರದೇಶಕ್ಕೂ ಕೆರೆಯಿಂದ ನೀರು ಕೊಡಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಸಣ್ಣ ಹೊಂಡದಲ್ಲಿ ಈಗಲೂ ನೀರು!
ಎಲ್ಲೆಡೆಯೂ ಬಿರು ಬೇಸಗೆಯ ಪರಿಣಾಮದಿಂದ ನೀರು ಬತ್ತಿ ಹೋಗುತ್ತಿದ್ದರೂ, ಅತ್ಯಂತ ಎತ್ತರದ ಪ್ರದೇಶವಾದ ಗಿರಿಗುಡ್ಡ ಕೆರೆಯ ಒಂದು ಬದಿಯ ಸಣ್ಣ ಹೊಂಡದಲ್ಲಿ ಈಗಲೂ ನೀರಿದೆ. ಕೆರೆಯ ಅನತಿ ದೂರದಲ್ಲಿರುವ ದೈವ ಸಾನಿಧ್ಯದಲ್ಲಿ ಪುಷ್ಕರಣಿಯೊಂದನ್ನು ಮಾಡಲಾಗಿದ್ದು, ಅದರಲ್ಲೂ ನೀರಿದೆ. ಗಿರಿಗುಡ್ಡೆ ಕೆರೆಯು ಸಾಕಷ್ಟು ವಿಸ್ತೀರ್ಣವಿದೆ. ಪ್ರಸ್ತುತ ಕೆರೆಯಲ್ಲಿ ಪೂರ್ತಿ ಹೂಳು ತುಂಬಿದ್ದು, ಮಣ್ಣು ಮೃದುವಾಗಿರುವುದರಿಂದ ಆಳದಲ್ಲಿ ನೀರಿರುವುದು ಸ್ಪಷ್ಟವಾಗಿದೆ. ಮಣ್ಣು ಮೇಲೆ ಹುಲ್ಲು ಬೆಳೆದಿದ್ದು, ಹಚ್ಚ ಹಸುರಿನಿಂದ ಕೂಡಿದೆ. ಕೆರೆಯ ಸುತ್ತಲೂ ಕುಂಟಾಲ್‌ ಹಣ್ಣಿನ ಗಿಡಗಳ ಜತೆಗೆ ಬಳ್ಳಿಯ ರೀತಿಯ ಗಿಡಗಳು ಬೆಳೆದಿವೆ.

Advertisement

ಅನುದಾನ ಹೊಂದಿಸಲು ಪ್ರಯತ್ನ
ಕೆರೆಯ ವಿಸ್ತೀರ್ಣ ದೊಡ್ಡದಿದ್ದು, ಸಣ್ಣ ನೀರಾವರಿ ಇಲಾಖೆಯವರು ಹೆಚ್ಚಿನ ಅನುದಾನ ಕೇಳುತ್ತಿದ್ದಾರೆ. ಆದರೆ ಅಷ್ಟು ಅನುದಾನ ನೀಡುವುದು ಬೂಡಾ ದಿಂದ ಸಾಧ್ಯವಿಲ್ಲ. ಕೆರೆಯ ಅಭಿವೃದ್ಧಿ ಬಾಕಿಯಾಗಿದ್ದು, ಅನುದಾನ ಹೊಂದಿಸಲು ಪ್ರಯತ್ನ ನಡೆದಿದೆ.
-ಅಭಿಲಾಷ್‌, ಸದಸ್ಯ ಕಾರ್ಯದರ್ಶಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ.

ಕೆರೆಯು ಅಭಿವೃದ್ಧಿಗೊಂಡಲ್ಲಿ ಬಂಟ್ವಾ ಳದ ಅಂತರ್ಜಲ ವೃದ್ಧಿಗೊಳ್ಳಲಿದ್ದು, ಜತೆಗೆ ಬೇಸಗೆಯಲ್ಲೂ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದು. ಬೂಡಾದಿಂದ ಈ ಹಿಂದೆಯೂ ಕೆರೆಯ ಅಭಿವೃದ್ಧಿಗೆ ಪ್ರಯತ್ನ ನಡೆದರೂ ಅದು ಈತನಕ ಕೈಗೂಡಿಲ್ಲ.
-ಗಂಗಾಧರ ಪೂಜಾರಿ,
ಪುರಸಭಾ ಸದಸ್ಯರು, ಬಂಟ್ವಾಳ

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next