Advertisement

ಸೋಂಕಿತರ ಚಿಕಿತ್ಸೆಗಾಗಿ ಅರ್ಧದಷ್ಟು ಹಾಸಿಗೆ ನೀಡಲು ಒಪ್ಪಿದ ನಗರದ 2 ಖಾಸಗಿ ಆಸ್ಪತ್ರೆಗಳು

10:31 PM Jul 20, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ರೋಗಿಗಳಿಗೆ ಯಾವುದೇ ಕಾರಣಕ್ಕೂ ಹಾಸಿಗೆಗಳ ಕೊರತೆಯಾಗದಂತೆ ರಾಜ್ಯ ಸರಕಾರ ಸಾಕಷ್ಟು ಎಚ್ಚರಿಕೆ ವಹಿಸುತ್ತಿದೆ.

Advertisement

ಇದೀಗ ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳಿಂದ ನಿಗದಿತ ಶೇ.50ರಷ್ಟು ಹಾಸಿಗೆಗಳನ್ನು ಪಡೆಯುವ ನಿಟ್ಟಿನಲ್ಲಿ ಲಭ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಲ್ಲಿಯೂ ರಾಜ್ಯ ಸರಕಾರ ಯಶಸ್ವಿಯಾಗಿದೆ.

ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರಂದು ನಗರದ ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್ ಗೆ ಭೇಟಿ ನೀಡಿ ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿರುವ ಖಾಸಗಿ ಆಸ್ಪತ್ರೆಗಳ ಮಾಲಕರು, ವ್ಯವಸ್ಥಾಪಕರ ಜತೆ ಮಾತುಕತೆ ನಡೆಸಿದರಲ್ಲದೆ, ಕೂಡಲೇ ಹಾಸಿಗೆಗಳನ್ನು ನೀಡುವಂತೆ ಮನವೊಲಿಸಿದರು.

ಅನಿರೀಕ್ಷಿತವಾಗಿ ಕೋವಿಡ್ ಸೋಂಕು ಎದುರಾಗಿದ್ದು ಯುದ್ಧದಂಥ ಸನ್ನಿವೇಶ ಬಂದಿದೆ. ಪ್ರತಿಯೊಬ್ಬರೂ ವಿಪತ್ತಿನ ಸಂದರ್ಭದಲ್ಲಿ ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತೇವೆಯೋ ಅಷ್ಟೇ ಹೊಣೆಗಾರಿಕೆಯಿಂದ ಎಲ್ಲರೂ ಸಹಕಾರ ನೀಡಬೇಕಾಗಿದೆ.

ಇದರ ಜತೆಯಲ್ಲೇ ಸರಕಾರ ಸಾಕಷ್ಟು ಮುನ್ನಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಅಕ್ಟೋಬರ್ ಹೊತ್ತಿಗೆ ಸೋಂಕು ಮತ್ತಷ್ಟು ವ್ಯಾಪಿಸಲಿದೆ ಎಂದು ಐಸಿಎಂಆರ್ ಈಗಾಗಲೇ ಎಚ್ಚರಿಕೆ ನೀಡಿದೆ. ಹೀಗಾಗಿ ಸರಕಾರ ಎಲ್ಲ ರೀತಿಯಲ್ಲೂ ಸನ್ನದ್ಧಗೊಳ್ಳಲೇಬೇಕು.

Advertisement

ಆದ್ದರಿಂದ ಎರಡೂ ಕ್ಷೇತ್ರಗಳಲ್ಲಿರುವ ಖಾಸಗಿ ಆಸ್ಪತ್ರೆಗಳು ಕೂಡಲೇ ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇ. 50ರಷ್ಟನ್ನು ಸರಕಾರಕ್ಕೆ ನೀಡಲೇಬೇಕು ಎಂದು ಡಿಸಿಎಂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಮನವರಿಕೆ ಮಾಡಿದರು.


ಈಗಾಗಲೇ ಹಾಸಿಗೆಗಳನ್ನು ಸರಕಾರದ ವಶಕ್ಕೆ ನೀಡಬೇಕಾಗಿತ್ತು, ತುಂಬಾ ತಡವಾಗಿದೆ. ನಾಳೆ ಹೊತ್ತಿಗೆ ಎಲ್ಲಾ ಆಸ್ಪತ್ರೆಗಳು ಈ ಕೆಲಸವನ್ನು ಮಾಡಲೇಬೇಕು. ತಪ್ಪಿದರೆ ಐಎಎಸ್ ಅಧಿಕಾರಿಗಳು ನಿಮ್ಮ ಆಸ್ಪತ್ರೆಗಳಿಗೆ ತಪಾಸಣೆಗೆ ಬರಲಿದ್ದಾರೆ.

ಒಂದು ವೇಳೆ ಆಗ ಸಿಕ್ಕಿಬಿದ್ದರೆ ಕೂಡಲೇ ಆಸ್ಪತ್ರೆಯ ಪರವಾನಗಿಯೇ ರದ್ದಾಗುತ್ತದೆ. ಇಂಥ ಕ್ರಮಕ್ಕೆ ಅವಕಾಶ ಮಾಡಿಕೊಡಬೇಡಿ. ಯಾವುದೇ ನೆಪ ಹೇಳದೇ ತಕ್ಷಣವೇ ಹಾಸಿಗೆಗಳನ್ನು ಸರಕಾರದ ವಶಕ್ಕೆ ನೀಡಿ ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

ಈಗಾಗಲೇ ಹಲವು ಸಲ ಮನವಿ ಮಾಡಿದ್ದೇವೆ. ಇದಕ್ಕೆ ಕೆಲವರು ಕಿವಿಗೊಡದೇ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸರಕಾರ ಸಹಿಸುವುದಿಲ್ಲ. ಮುಖ್ಯಮಂತ್ರಿಯವರು ಈಗಾಗಲೇ ಈ ಬಗ್ಗೆ ಸ್ಷಷ್ಟ ಆದೇಶ ನೀಡಿದ್ದಾರೆ.

ಸರಕಾರದ ಆದೇಶ ಪಾಲಿಸಿದ ಆಸ್ಪತ್ರೆಗಳಿಗೆ ಕೂಡಲೇ ನೀರು ಮತ್ತು ವಿದ್ಯುತ್ ಸರಬರಾಜು ನಿಲ್ಲಿಸುವುದೂ ಸೇರಿದಂತೆ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ನೀವು ಚಿಕಿತ್ಸೆ ನೀಡುವ ಕೋವಿಡ್ ರೋಗಿಗಳ ಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳು ತಮ್ಮ ವೃತ್ತಿ ಧರ್ಮದಿಂದ ಪಲಾಯನ ಮಾಡಬಾರದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next