ನವದೆಹಲಿ:ಮಿಗ್ 21 ತರಬೇತು ಲಘು ವಿಮಾನ ಅಪಘಾತಕ್ಕೀಡಾಗಿ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್ ಗಳು ಸಾವನ್ನಪ್ಪಿರುವ ಘಟನೆ ಗುರುವಾರ (ಜುಲೈ28) ರಾತ್ರಿ ರಾಜಸ್ಥಾನದ ಬರ್ಮರ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಸಿ.ಎಂ. ಬೊಮ್ಮಾಯಿ, ಗೃಹ ಮಂತ್ರಿ ಅರಗ ಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹ
ಮಿಗ್ 21 ವಿಮಾನವು ಉತರ್ಲೈ ವಾಯು ನೆಲೆಯಿಂದ ಹೊರಟಿದ್ದು, ರಾತ್ರಿ 10ಗಂಟೆ ಹೊತ್ತಿಗೆ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸಾವನ್ನಪ್ಪಿರುವುದಾಗಿ ಐಎಎಫ್ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಸೋವಿಯತ್ ಮೂಲದ ಮಿಗ್ 21 ಹಳೆಯ ಮಾಡೆಲ್ ಆಗಿದೆ. ಅಪಘಾತದಿಂದ ಮತ್ತೊಮ್ಮೆ ಮಿಗ್ 21 ಬಳಕೆಯ ಚರ್ಚೆ ಮುನ್ನಲೆಗೆ ಬಂದಿದೆ. 1960ರಲ್ಲಿ ಮೊದಲ ಬಾರಿ ಮಿಗ್ 21 ಹಾರಾಟ ಆರಂಭಿಸಿದ್ದ ನಂತರ ಈವರೆಗೆ ಸುಮಾರು 200 ಅಪಘಾತ ಸಂಭವಿಸಿರುವುದಾಗಿ ವರದಿ ವಿವರಿಸಿದೆ.
ಯಾವ ಕಾರಣದಿಂದ ಅಪಘಾತ ಸಂಭವಿಸಿದೆ ಎಂಬ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಐಎಎಫ್ ತಿಳಿಸಿದೆ. ಮಿಗ್ 21 ದುರಂತದ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ವಿ.ಆರ್. ಚೌಧರಿ ಜೊತೆ ಮಾತನಾಡಿ ವಿವರ ಪಡೆದಿರುವುದಾಗಿ ವರದಿ ಹೇಳಿದೆ.