Advertisement

ಮೇಯರ್‌ ಗಾದಿಗೆ ಇಬ್ಬರಲ್ಲಿ ಮೊದಲ್ಯಾರು?

12:54 PM Apr 10, 2017 | |

ದಾವಣಗೆರೆ: ಮಹಾನಗರಪಾಲಿಕೆ ಮೇಯರ್‌ ಸ್ಥಾನಕ್ಕೆ ಏ.13ರಂದು ಚುನಾವಣೆ ನಡೆಯಲಿದ್ದು, ಬಿಸಿಎಂ ಬಿ ಮಹಿಳಾ ವರ್ಗಕ್ಕೆ ಮೀಸಲಾಗಿರುವ ಈ ಬಾರಿ ಮೇಯರ್‌ಗಿರಿಗೆ ಇಬ್ಬರು ರೇಸ್‌ನಲ್ಲಿದ್ದಾರೆ. ಒಟ್ಟು 41 ಸದಸ್ಯರನ್ನು ಹೊಂದಿರುವ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ನ 39 ಸದಸ್ಯರಿದ್ದಾರೆ. ಬಿಜೆಪಿ, ಸಿಪಿಐ ತಲಾ ಓರ್ವ ಸದಸ್ಯರಿದ್ದಾರೆ. 

Advertisement

ಎದುರಾಳಿಯೇ ಇಲ್ಲದ ಪರಿಸ್ಥಿತಿಯಲ್ಲಿ ರೇಸ್‌ನಲ್ಲಿರುವ ಕಾಂಗ್ರೆಸ್‌ನ ಇಬ್ಬರು ಸದಸ್ಯೆಯರಲ್ಲಿ ಮೊದಲು ಯಾರು ಹುದ್ದೆ ಅಲಂಕರಿಸಲಿದ್ದಾರೆ ಎಂಬುದಷ್ಟೇ ಈಗ ಒಂದಿಷ್ಟು ಕುತೂಹಲ. ಮೇಯರ್‌ ಹುದ್ದೆಗೆ ಮೀಸಲು ನಿಗದಿಯಾಗಿರುವ ಬಿಸಿಎಂ ಬಿ ಮಹಿಳಾ ವರ್ಗದಲ್ಲಿ 39ನೇ ವಾರ್ಡ್‌ನ ನಾಗರತ್ನಮ್ಮ, 11ನೇ ವಾರ್ಡ್‌ನ ಅನಿತಾಬಾಯಿ ಡಿ. ಮಾಲತೇಶ್‌ ರೇಸ್‌ ನಲ್ಲಿದ್ದಾರೆ.

ಪಾಲಿಕೆ ಕಾಂಗ್ರೆಸ್‌ ತೆಕ್ಕೆಗೆ ಬಂದ ಮೇಲೆ ಸತತ ಮೂರನೇ ಬಾರಿಯೂ ಮಹಿಳೆಯೇ ಮೇಯರ್‌ ಸ್ಥಾನ ಅಲಂಕರಿಸಲಿರುವುದು ವಿಶೇಷ. ಹಿಂದಿನ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಮೇಯರ್‌ ಸ್ಥಾನಕ್ಕೆ ಅಶ್ವಿ‌ನಿ ವೇದಮೂರ್ತಿ, ರೇಖಾ ನಾಗರಾಜ್‌, ನಾಗರತ್ನಮ್ಮ ಈ ಮೂವರು ಪ್ರಬಲ ಆಕಾಂಕ್ಷಿಗಳಾಗಿದ್ದರು.

ಪಕ್ಷದ ವರಿಷ್ಠರು ಅಶ್ವಿ‌ನಿ ವೇದಮೂರ್ತಿ ಮತ್ತು ರೇಖಾ ನಾಗರಾಜ್‌ ಮಧ್ಯ ತಲಾ 6 ತಿಂಗಳ ಅವಧಿ ಅಧಿಕಾರ ಹಂಚಿದರು. ಇದರಿಂದ ನಾಗರತ್ನಮ್ಮ ಅವಕಾಶ ವಂಚಿತರಾಗಬೇಕಾಯಿತು. ಈ ಬಾರಿ ಬಿಸಿಎಂ ಬಿ ಮಹಿಳಾ  ಮೀಸಲಾತಿ ಕೋಟಾದಡಿ ಅವರು ಮೇಯರ್‌ ಹುದ್ದೆಗೆ ಹಕ್ಕು ಮಂಡಿಸಲಿದ್ದಾರೆ.

ನಗರದ ಹಳೆಭಾಗದಿಂದ ಈ ಹಿಂದೆ ರೇಣುಕಾಬಾಯಿ ವೆಂಕಟೇಶ್‌ನಾಯ್ಕ, ಎಚ್‌.ಬಿ. ಗೋಣೆಪ್ಪ ತಲಾ ಒಂದು ವರ್ಷ ಮೇಯರ್‌ ಆಗಿ ಅಧಿಕಾರ ನಡೆಸಿದ್ದಾರೆ. ಆದರೆ, ಹೊಸ ಭಾಗದ ಸದಸ್ಯರಿಬ್ಬರು (ಅಶ್ವಿ‌ನಿ ವೇದಮೂರ್ತಿ, ರೇಖಾ ನಾಗರಾಜ್‌) ಒಂದು ವರ್ಷದ ಅವಧಿ ಹಂಚಿಕೊಂಡಿದ್ದಾರೆ.

Advertisement

ಈ ಬಾರಿ ಮತ್ತೆ ಹೊಸಭಾಗದ ನಾಗರತ್ನಮ್ಮನವರನ್ನು ಮೇಯರ್‌ ಗಾದಿಯಲ್ಲಿ ಕೂರಿಸಬೇಕೆಂಬ ಮಾತು ಸಹ ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿವೆ. ಆದರೆ, ಬಿಸಿಎಂ ಎಂ ಮಹಿಳಾ ವರ್ಗಕ್ಕೆ ಸೇರಿದ ಅನಿತಾಬಾಯಿ ಮಾಲತೇಶ್‌ ಸಹ ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಮತ್ತೆ ಅಧಿಕಾರ ಹಂಚಿಕೆ ಸೂತ್ರ ಅಳವಡಿಕೆ ಅನಿವಾರ್ಯವಾಗಲಿದೆ. 

ಒಂದು ವೇಳೆ ಅಧಿಕಾರ ಹಂಚಿಕೆ ಮಾಡುವುದಾದರೆ ಮೊದಲ ಅವಕಾಶ ನಾಗರತ್ನಮ್ಮನವರಿಗೆ ನೀಡಬೇಕು ಎಂಬ ಅಭಿಪ್ರಾಯ ಸಹ ಮೂಡಿ ಬರುತ್ತಿವೆ. ಇನ್ನು ಜಾತಿ ಸಮೀಕರಣದ ಲೆಕ್ಕಾಚಾರದಲ್ಲೂ ಸಹ ನಾಗರತ್ನಮ್ಮನವರ ಮೊದಲ ಆಯ್ಕೆ ಅನಿವಾರ್ಯವಾಗಿದೆ. ಕಾಂಗ್ರೆಸ್‌ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿದು ಮೂರು ವರ್ಷ ಪೂರ್ಣಗೊಂಡಿವೆ.

ಈ ಮೂರು ವರ್ಷದ ಅವಧಿಯಲ್ಲಿ ಬಹುದೊಡ್ಡ ಜನಸಂಖ್ಯೆ ಹೊಂದಿರುವ ಸಾದರ ಲಿಂಗಾಯತರಿಗೆ ಇದುವರೆಗೆ ಮೇಯರ್‌ ಸ್ಥಾನ ದಕ್ಕಿಲ್ಲ. ಇಬ್ಬರು ಉಪ ಮೇಯರ್‌ ಆಗಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಪಂಚಮಸಾಲಿ ಸಮಾಜದ ಅಶ್ವಿ‌ನಿಯವರಿಗೆ ಅವಕಾಶ ನೀಡಲಾಗಿದೆ.

ಈ ಬಾರಿ ಅಧಿಕಾರ ಅವಧಿ ಹಂಚಿಕೆಯಾದಲ್ಲಿ ಮೊದಲ ಅವಕಾಶ ನಾಗರತ್ನಮ್ಮರಿಗೆ ಸಿಗಬಹುದೆಂಬ ಲೆಕ್ಕಾಚಾರ ಕೆಲವರದ್ದು. ಉಪ ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ಆಗಿರುವುದರಿಂದ ಆಕಾಂಕ್ಷಿಗಳ ದಂಡೇ ಇದೆ. ಮೇಯರ್‌ ಸ್ಥಾನದಲ್ಲಿ ಅನನುಭವಿ ಮಹಿಳೆ ಕುಳಿತಾಗ ಉಪ ಮೇಯರ್‌ ಸ್ಥಾನಕ್ಕೆ ಹಿರಿಯ, ಅನುಭವಿ, ಚಾಣಾಕ್ಷ ಸದಸ್ಯರನ್ನು ಆಯ್ಕೆ ಮೊರೆ ಹೋಗಬಹುದು.

ಸಹ ಉಪ ಮೇಯರ್‌ ಆಯ್ಕೆ ಈ ನಿಟ್ಟಿನಲ್ಲೇ ನಡೆಯಲಿದೆ. ಈ ಎಲ್ಲಾ ಕುತೂಹಲಕ್ಕೆ ಏ.13ರಂದು ತೆರೆಬೀಳಲಿದೆ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಾಸಕ ಶಾಮನೂರು ಶಿವಶಂಕರಪ್ಪನವರು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂಬುದು ಜಗಜಾಹೀರ ಸತ್ಯ.  

Advertisement

Udayavani is now on Telegram. Click here to join our channel and stay updated with the latest news.

Next