ಶ್ರೀನಗರ್: ಭದ್ರತಾ ಪಡೆಯ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಇಬ್ಬರು ಉಗ್ರರು ಸಾವನ್ನಪ್ಪಿರುವ ಘಟನೆ ಮಂಗಳವಾರ (ಸೆಪ್ಟೆಂಬರ್ 06) ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ರಾತ್ರಿ ಗ್ರೀನ್ ಟೀ ಕುಡಿಯುತ್ತೀರಾ?: ಆರೋಗ್ಯದ ಮೇಲೆ ಅಡ್ಡಪರಿಣಾಮ ಖಚಿತ!
ದಕ್ಷಿಣ ಕಾಶ್ಮೀರದ ಪುಷ್ಕರಿ ಕಾನಿಲ್ವಾನ್ ಗ್ರಾಮದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಇಬ್ಬರು ಹಿಜ್ಬುಲ್ ಉಗ್ರರು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಈ ಪ್ರದೇಶದಲ್ಲಿ ಹಿಜ್ಬುಲ್ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಆ ವೇಳೆಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು.
ಹತ್ಯೆಗೀಡಾದ ಉಗ್ರರನ್ನು ದಾನಿಶ್ ಭಟ್ ಮತ್ತು ಬಶರತ್ ನಬಿ ಎಂದು ಗುರುತಿಸಲಾಗಿದೆ. ಇಬ್ಬರೂ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯಲ್ಲಿದ್ದು, 2021ರಲ್ಲಿ ಯೋಧ ಸಲೀಂ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಶಾಮೀಲಾಗಿರುವುದಾಗಿ ಕಾಶ್ಮೀರ ವಲಯದ ಹೆಚ್ಚುವರಿ ಡಿಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.