Advertisement
ಮಳೆ ಕೊರತೆ, ಉತ್ತಮ ಕಲ್ಲಿದ್ದಲು ಕೊರತೆ ಸಹಿತ ಹಲವು ಸಮಸ್ಯೆ, ಸವಾಲುಗಳಿಂದಾಗಿ ಜಲ, ಪವನ ಹಾಗೂ ಉಷ್ಣ ವಿದ್ಯುತ್ ಉತ್ಪಾದನೆಗಿಂತ ಸೌರ ವಿದ್ಯುತ್ ಉತ್ಪಾದನೆಯೇ ಉತ್ತಮ ಎಂಬ ನಿಲುವು ತಳೆದಿರುವ ಸರಕಾರ, ಸೌರ ವಿದ್ಯುತ್ ಉತ್ಪಾದನೆ ಮೇಲೆ ಹೆಚ್ಚಿನ ಹೂಡಿಕೆ ಯನ್ನೂ ನಿರೀಕ್ಷಿಸುತ್ತಿದೆ.
Related Articles
ಪ್ರಸ್ತುತ ಎಲ್ಲ ಮೂಲಗಳಿಂದ 32,009 ಮೆವ್ಯಾ ವಿದ್ಯುತ್ ಉತ್ಪಾದನ ಸಾಮರ್ಥ್ಯವಿದ್ದು, 4 ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಳವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಇಂಧನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. 2022-23ರ ವರದಿ ಪ್ರಕಾರ, ನವೀಕರಿಸಬಹುದಾದ ಇಂಧನ ಮೂಲಗಳಿಂದ 24 ಗಿಗಾವ್ಯಾಟ್ (24,000 ಮೆ.ವ್ಯಾ) ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಕರ್ನಾಟಕಕ್ಕಿದೆ. ಆದರೆ 7,885 ಮೆವ್ಯಾ ಸ್ಥಾಪಿತ ಸಾಮರ್ಥ್ಯವಿದ್ದು, ಗರಿಷ್ಠ 6,644 ಮೆವ್ಯಾ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಈ ಪೈಕಿ ಪಾವಗಡ ಸೌರ ಉದ್ಯಾನದಲ್ಲಿ 2,050 ಮೆವ್ಯಾ ಸೌರವಿದ್ಯುತ್ ಉತ್ಪಾದನೆಯಾಗುತ್ತಿದೆ. ಒಟ್ಟಾರೆ ಸ್ಥಾಪಿತ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಪ್ರಸ್ತಾವನೆಗಳು ನೆರವಾಗುವ ನಿರೀಕ್ಷೆಯಿದೆ.
Advertisement
ಪಾವಗಡದಲ್ಲಿ ಹೆಚ್ಚುವರಿ 300 ಮೆವ್ಯಾತುಮಕೂರು ಜಿಲ್ಲೆ ಪಾವಗಡದ 1,396 ಎಕ್ರೆ (53 ಚ.ಕಿ.ಮೀ.)ಯಲ್ಲಿ 2,050 ಮೆವ್ಯಾ ವಿದ್ಯುತ್ ಉತ್ಪಾದಿಸುವ ಅತಿದೊಡ್ಡ ಸೌರ ವಿದ್ಯುತ್ ಉದ್ಯಾನ ಹೊಂದಿದೆ. ಇದರೊಂದಿಗೆ ಪಾವಗಡದಲ್ಲಿಯೇ 300 ಮೆವ್ಯಾ ಹೆಚ್ಚುವರಿ ಸೌರವಿದ್ಯುತ್ ಉತ್ಪಾದಿಸುವ ಉದ್ದೇಶವಿದ್ದು, 10 ಸಾವಿರ ಎಕ್ರೆ ಸ್ಥಳವನ್ನು ಇದಕ್ಕಾಗಿ ಗುರುತಿಸಲಾಗಿದೆ. 2025ರ ಅಕ್ಟೋಬರ್ ವೇಳೆಗೆ ಈ ವಿಸ್ತರಿತ ಕಾಮಗಾರಿ ಸಿದ್ಧಗೊಂಡು ವಿದ್ಯುತ್ ಉತ್ಪಾದನೆ ಆರಂಭಿಸಬೇಕೆಂಬ ಗುರಿಯನ್ನು ಕರ್ನಾಟಕ ಸೌರ ವಿದ್ಯುತ್ ಅಭಿವೃದ್ಧಿ ನಿಗಮ ಇಟ್ಟುಕೊಂಡಿದೆ. ಕಲಬುರಗಿಯಲ್ಲಿ 100 ಮೆವ್ಯಾ ಸೌರೋದ್ಯಾನ
ಕಲಬುರಗಿಯಲ್ಲಿರುವ ಪಿಸಿಕೆಎಲ್‌ನ 551.13 ಎಕ್ರೆ ಜಾಗದಲ್ಲಿ 100 ಮೆವ್ಯಾ ಸೌರವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸುವ ಉದ್ದೇಶ ಹೊಂದಿದ್ದು, ವಿದ್ಯುತ್ ದರದ ಆಧಾರದ ಮೇಲೆ ಟೆಂಡರ್ ಕರೆಯಲು ನಿರ್ಧರಿಸಿದೆ. ಅಲ್ಲದೆ, ಪ್ರತಿ ಎಕ್ರೆಗೆ ವಾರ್ಷಿಕ 22 ಸಾವಿರ ರೂ. ದರ ನಿಗದಿಪಡಿಸಿದ್ದು, ಎರಡು ವರ್ಷಕ್ಕೊಮ್ಮೆ ಶೇ.5ರಷ್ಟು ದರ ಹೆಚ್ಚಿಸುವ ಪ್ರಸ್ತಾವನೆಯೂ ಇದೆ. ಇಲ್ಲಿ ಉತ್ಪಾದಿತವಾಗುವ ವಿದ್ಯುತ್ ಅನ್ನು ಬೆಸ್ಕಾಂ ಖರೀದಿಸುವುದಾಗಿ ತಿಳಿಸಿದೆ. ಅ.1ರಿಂದ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿ, 2024ರ ನವೆಂಬರ್ ವೇಳೆಗೆ ಕಾಮಗಾರಿ ಶುರುವಾಗಲಿದೆ. ಔರಾದ್‌ನಲ್ಲಿ 500 ಮೆವ್ಯಾ ಸೌರೋದ್ಯಾನ
ಬೀದರ್‌ನ ಔರಾದ್ ತಾಲೂಕಿನಲ್ಲಿ 500 ಮೆವ್ಯಾ ಸೌರವಿದ್ಯುತ್ ಪಾರ್ಕ್ ಸ್ಥಾಪಿಸುವ ಯೋಜನೆಗೆ ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಅನುಮೋದನೆ ದೊರೆತಿದೆ. ಪ್ರತಿ ಮೆವ್ಯಾ ವಿದ್ಯುತ್ ಉತ್ಪಾದನೆಗೆ ಆಗುವ ಖರ್ಚಿನಲ್ಲಿ ಶೇ.30 ಅಂದರೆ, 20 ಲಕ್ಷ ರೂ.ಗಳ ನೆರವು ಸಿಗಲಿದೆ. ಉಳಿದ ಮೊತ್ತವನ್ನು ಸೌರ ವಿದ್ಯುತ್ ಘಟಕ ಸ್ಥಾಪಿಸುವ ಸಂಸ್ಥೆಯೇ ಭರಿಸಬೇಕು. ಈ ಹಿಂದೆ ಔರಾದ್ ತಾಲೂಕಿನ ಅಯಡಾ ಗ್ರಾಮದಲ್ಲಿ 10 ಮೆವ್ಯಾ ಸಾಮರ್ಥ್ಯದ ಸೌರವಿದ್ಯುತ್ ಸ್ಥಾವರ ಸ್ಥಾಪಿಸಲು ಹಿಮಗಿರಿ ಸೋಲಾರ್ ಊರ್ಜಾ ಸಂಸ್ಥೆಗೆ ಕೊಟ್ಟಿದ್ದ ಟೆಂಡರ್‌ನ್ನು 2022ರಲ್ಲಿ ರದ್ದುಪಡಿಸಿತ್ತು. ಸದ್ಯಕ್ಕೆ ಈ ಯೋಜನೆಗಾಗಿ ಡೋಂಗಾರಗಾಂವ್, ಮಾಳೇಗಾಂವ್, ಭಂಡಾರಕುಮಟಾ ಮತ್ತು ಚೆಮ್ಮಿಂಗಾವ್‌ನಲ್ಲಿನ 2,500 ಎಕ್ರೆ ಭೂಮಿ ಗುರುತಿಸಲಾಗಿದ್ದು, ಮಾಳೆಗಾಂವ್‌ನಲ್ಲಿ ವಿದ್ಯುತ್ ಪ್ರಸರಣಕ್ಕೆ ಅಗತ್ಯವಾದ 756 ಕಿಲೋವ್ಯಾಟ್ ವಿದ್ಯುತ್ ಮಾರ್ಗ, ಉಪಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ವಿದ್ಯುತ್ಛಕ್ತಿ ಪ್ರಾಧಿಕಾರ (ಸಿಇಎ) ಅನುಮೋದನೆ ನೀಡಿದೆ. ಆರ್‌ಇಸಿ ವಿದ್ಯುತ್ ಅಭಿವೃದ್ಧಿ ಮತ್ತು ಕನ್ಸಲ್ಟೆನ್ಸಿ ಸಂಸ್ಥೆಯು ಟೆಂಡರನ್ನೂ ಕರೆದಿದೆ. ಸೌರ ಉದ್ಯಾನ ಸ್ಥಾಪಿಸಲು ಬೇಕಿರುವ ಭೂಮಿಯನ್ನು ಸರಕಾರ ವಶಕ್ಕೆ ಪಡೆಯಬೇಕಿದ್ದು, ಭೂಮಾಲಕರನ್ನು ಒಪ್ಪಿಸುವ ಹೊಣೆ ಜಿಲ್ಲಾಧಿಕಾರಿಯದ್ದಾಗಿದೆ. 2024ರ ನವೆಂಬರ್ ವೇಳೆಗೆ ಕಾಮಗಾರಿ ಆರಂಭಿಸಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಕೆಆರ್‌ಇಡಿಎಲ್‌ಗೆ 175 ಕೋ. ರೂ. ಆದಾಯ
ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿಎಲ್) ಹಾಗೂ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿಎಲ್)ಗಳು ಕೈಗೆತ್ತಿಕೊಳ್ಳಲಿರುವ 2000 ಮೆವ್ಯಾ (2 ಗಿಗಾವ್ಯಾಟ್) ಸಾಮರ್ಥ್ಯದ ನವೀಕರಿಸಬಹುದಾದ ವಿದ್ಯುತ್ ಯೋಜನೆಗಳಿಗೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೆಆರ್‌ಇಡಿಎಲ್ ವಹಿಸಿಕೊಳ್ಳಲಿದೆ. ಪಾವಗಡ ಬಳಿಯ ರ್ಯಾಪ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ 10 ಸಾವಿರ ಎಕ್ರೆ ಸ್ಥಳ ನೀಡಲು ಮುಂದೆ ಬಂದಿದ್ದು, ಪ್ರತಿ ಯುನಿಟ್‌ಗೆ 25 ಪೈಸೆಯನ್ನು ಕೆಆರ್‌ಇಡಿಎಲ್‌ಗೆ ಐಒಸಿಎಲ್, ಎನ್‌ಟಿಪಿಸಿಎಲ್‌ನಿಂದ ಅಪೇಕ್ಷಿಸಿದೆಯಲ್ಲದೆ, ವಾರ್ಷಿಕ 175 ಕೋಟಿ ರೂ. ಆದಾಯ ನಿರೀಕ್ಷಿಸಿದೆ. ಶೇಷಾದ್ರಿ ಸಾಮಗ