ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್-ಎ-ತೈಬಾ (ಎಲ್‌ಇಟಿ) ಉಗ್ರರನ್ನು ಹತ್ಯೆ ಮಾಡಲಾಗಿದೆ.
ಮೇ ತಿಂಗಳಲ್ಲಿ ಕಾಶ್ಮೀರಿ ಪಂಡಿತ ಸರ್ಕಾರಿ ನೌಕರ ರಾಹುಲ್ ಭಟ್ ಹತ್ಯೆಯಲ್ಲಿ ಭಾಗಿಯಾಗಿದ್ದ ಲತೀಫ್ ರಾಥರ್ ಸೇರಿದಂತೆ ಮೂವರು ಎಲ್‌ಇಟಿ ಭಯೋತ್ಪಾದಕರು ಎನ್‌ಕೌಂಟರ್ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದು, ಇಬ್ಬರನ್ನು ಇದುವರೆಗೆ ಕೊಲ್ಲಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಖಾನ್‌ಸಾಹಿಬ್ ಪ್ರದೇಶದ ವಾಟರ್‌ಹೇಲ್‌ನಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸರ್ಚ್ ಕಾರ್ಯಾಚರಣೆ ಆರಂಭಿಸಿವೆ ಎಂದು ಪೊಲೀಸ್ ವಕ್ತಾರರು ವಿವರಗಳನ್ನು ನೀಡಿದ್ದಾರೆ.
ಅಡಗಿದ್ದ ಉಗ್ರರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ್ದು, ಗುಂಡಿನ ಚಕಮಕಿ ನಡೆದಿದೆ. ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ಲತೀಫ್ ರಾಥರ್ ಸೇರಿದಂತೆ ಮೂವರು ಲಷ್ಕರ್ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಕಾಶ್ಮೀರ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್ ಕುಮಾರ್ ಹೇಳಿದ್ದಾರೆ.
2010-11ರಲ್ಲಿ ವಲಸಿಗರಿಗೆ ವಿಶೇಷ ಉದ್ಯೋಗದ ಪ್ಯಾಕೇಜ್ ಅಡಿಯಲ್ಲಿ ಗುಮಾಸ್ತ ಹುದ್ದೆ ಪಡೆದಿದ್ದ ರಾಹುಲ್ ಭಟ್ ಅವರನ್ನು ಮೇ 12 ರಂದು ಬುದ್ಗಾಮ್‌ನ ಚದೂರ ಪಟ್ಟಣದ ತಹಸಿಲ್ ಕಚೇರಿಯೊಳಗೆ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿದ್ದರು.ಕೆಲವು ದಿನಗಳ ನಂತರ, ಟಿವಿ ಕಲಾವಿದೆ ಅಮರೀನ್ ಭಟ್ ಅವರನ್ನು ಎಲ್‌ಇಟಿ ಭಯೋತ್ಪಾದಕರು ಚದೂರದಲ್ಲಿರುವ ಅವರ ಮನೆಯೊಳಗೆ ಗುಂಡಿಕ್ಕಿ ಕೊಂದಿದ್ದರು.