ಕೆಜಿಎಫ್: ಕಳೆದ ಆರು ತಿಂಗಳ ಹಿಂದೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾದ ನಗರದ ಹೊರವಲಯದ ಬೆಮಲ್ ಕಾರ್ಖಾನೆಯ ಆಲದ ಮರದಿಂದ ಅಂಬೇಡ್ಕರ್ ಶಾಲೆಯವರೆಗಿನ ದ್ವಿಪಥ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ.
ಆಲದಮರದ ಬಳಿಯಿಂದ ಅಂಬೇಡ್ಕರ್ ಶಾಲೆಯವರೆಗೆ ಸುಮಾರು 3 ಕಿಲೋಮೀಟರ್ ಉದ್ದದ ರಸ್ತೆ ಇದಾಗಿದ್ದು, ದ್ವಿಪಥ ರಸ್ತೆಯಾಗಿರುವ ಕಾರಣ ಎರಡೂ ಕಡೆಗಳಲ್ಲಿ ಡಾಂಬರು ಅಳವಡಿಸಬೇಕಾಗಿ ರುವು ದರಿಂದ ಒಟ್ಟು 6 ಕಿಲೋ ಮೀಟರ್ ಉದ್ದವಾಗಿದೆ. ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮೂರು ತಿಂಗಳ ಮುನ್ನವೇ ರಸ್ತೆಗೆ ಡಾಂಬರು ಹಾಕಲು ಲೋಕೋ ಪಯೋಗಿ ಇಲಾಖೆ ವತಿಯಿಂದ ಅ ಧಿಕೃತವಾಗಿ ಕಾರ್ಯಾದೇಶ ನೀಡಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.
ಸಂಚರಿಸಲು ಹರಸಾಹಸ: ಕೇವಲ ಒಂದು ಬದಿಯಲ್ಲಿ ಮಾತ್ರ ಡಾಂಬರನ್ನು ಅಳವಡಿಸಿದ್ದು, ಮತ್ತೂಂದು ಬದಿಯಲ್ಲಿ ಡಾಂಬರನ್ನು ಅಳವಡಿಸದೇ ಇರುವುದರಿಂದ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಮತ್ತು ನಾಲ್ಕು ಚಕ್ರ ವಾಹನ ಸವಾರರು ಗುಂಡಿಗಳು ಬಿದ್ದು ಹಾಳಾಗಿರುವ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಸವಾರರಿಗೆ ಧೂಳಿನ ಮಜ್ಜನ: ಬೆಮೆಲ್ ನ್ಪೋರ್ಟ್ಸ್ ಕಾಂಫ್ಲೆಕ್ಸ್, ಬೆಮೆಲ್ ಪೊಲೀಸ್ ಠಾಣೆ ಮುಂಭಾಗ, ರೈಲ್ವೆ ಮೇಲ್ಸೇತುವೆ, ಬೆಮೆಲ್ ಮೈನ್ ಗೇಟ್ ಮುಂಭಾಗ ಸೇರಿದಂತೆ ಅಂಬೇಡ್ಕರ್ ಶಾಲೆಯವರೆಗೆ ಬಹುತೇಕ ರಸ್ತೆಯು ಕಿತ್ತು ಬಂದಿದ್ದು, ಬಸ್ ಇಲ್ಲವೇ ಲಾರಿಗಳಂತಹ ಬೃಹತ್ ಗಾತ್ರದ ವಾಹನಗಳು ಮುಂದೆ ಹೋದರೆ, ಅದರ ಹಿಂದೆ ಬರುವಂತಹ ವಾಹನ ಸವಾರರು ಧೂಳಿನ ಮಜ್ಜನದಲ್ಲಿ ಮಿಂದೆದ್ದಂತಾಗುತ್ತದೆ.
ಗುಂಡಿಗಳಲ್ಲಿ ಬಿದ್ದು ಗಾಯ: ಬೃಹತ್ ಗಾತ್ರದ ವಾಹನಗಳು ಸಂಚರಿಸಿದರೆ ರಸ್ತೆ ಸಂಪೂರ್ಣವಾಗಿ ಧೂಳುಮಯವಾಗುವುದರಿಂದ ಹಿಂದೆ ಬರುವ ವಾಹನ ಸವಾರರಿಗೆ ರಸ್ತೆಯು ಕಾಣದಂತಾಗುವುದರಿಂದ ಗುಂಡಿಗಳ ಆಳ ತಿಳಿಯದೇ ದ್ವಿಚಕ್ರ ವಾಹನ ಸವಾರರು ಹಲವು ಬಾರಿ ಕೆಳಗೆ ಬಿದ್ದು ಕೈ-ಕಾಲುಗಳನ್ನು ಮುರಿದುಕೊಂಡಿರುವ ಘಟನೆಗಳು ಸಾಕಷ್ಟಿವೆ ಎಂದು ಸಾರ್ವಜನಿಕರು ಮತ್ತು ವಾಹನ ಸವಾರರು ದೂರಿದ್ದಾರೆ.
ಸರ್ಕಾರ ಸಾರ್ವಜನಿಕರ ಹಿತರಕ್ಷಣೆಗೆ ಕೋಟ್ಯಂತರ ರೂ. ಖರ್ಚು ಮಾಡಿ ರಸ್ತೆಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿ ದ್ದರೂ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದರಿಂದ ವಾಹನ ಸವಾರರು ಪ್ರತಿನಿತ್ಯ ಪರದಾಡುವಂತಾಗಿದೆ. ಕೂಡಲೇ ಸಂಬಂಧ ಪಟ್ಟ ಗುತ್ತಿಗೆದಾರರಿಗೆ ನಿರ್ದೇಶನ ನೀಡಿ ಆದಷ್ಟು ಬೇಗನೇ ಕಾಮಗಾರಿ ಪೂರ್ಣ ಗೊಳಿಸಿದಲ್ಲಿ ಅನುಕೂಲವಾಗುತ್ತದೆ.
-ರಮೇಶ್‌ಕುಮಾರ್, ಪ್ರಯಾಣಿಕ
ಟೆಂಡರ್ ಗುತ್ತಿಗೆ ವ್ಯತ್ಯಾಸ ಮೊತ್ತ ಸರ್ಕಾರದಿಂದ ಅನುಮೋದನೆ ಆಗಬೇಕಾಗಿರುವುದರಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇನ್ನೊಂದು ತಿಂಗಳಲ್ಲಿ ವ್ಯತ್ಯಾಸ ಮೊತ್ತ ಅನುಮೋದನೆಯಾಗಲಿದ್ದು, ಗುತ್ತಿಗೆದಾರರಿಗೆ ಸೂಚಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
-ರವಿ, ಎಇಇ ಲೋಕೋಪಯೋಗಿ ಇಲಾಖೆ
-ನಾಗೇಂದ್ರ ಕೆ.