Advertisement
375 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆ ಪುತ್ತೂರಿಗೆ ಸಿದ್ಧಗೊಂಡಿದ್ದು, ಇದಕ್ಕೆ ಬೇಕಾದ ನೀರನ್ನು ಬಂಟ್ವಾಳ ತಾಲೂಕಿನ ಎಎಂಆರ್ ಅಣೆಕಟ್ಟಿನಿಂದ ಪಡೆಯಲು ಉದ್ದೇಶಿಸಲಾಗಿದೆ. ಭವಿಷ್ಯದಲ್ಲಿ ಇದು ಸಾಕಾಗದು ಎಂಬ ದೂರದೃಷ್ಟಿ ಇಟ್ಟುಕೊಂಡು ಪುತ್ತೂರು ತಾಲೂಕಿನಲ್ಲೇ 2 ಕಿಂಡಿ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
Related Articles
3 ತಾಲೂಕುಗಳಿಗೆ ಲಾಭ
Advertisement
ಉದ್ದೇಶಿತ 2 ಅಣೆಕಟ್ಟು ಯೋಜನೆ ಪೂರ್ಣ ಗೊಂಡ ಬಳಿಕ ಪುತ್ತೂರು, ಕಡಬ ಮತ್ತು ಬೆಳ್ತಂಗಡಿ ತಾಲೂಕಿನ 20ಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರು ಸಿಗಲಿದೆ. ಇದರೊಂದಿಗೆ ನದಿ ಪಾತ್ರದ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟವೂ ಏರಲಿದೆ.
500 ಮೀಟರ್ ಉದ್ದದ ಸೇತುವೆ
ಪುತ್ತೂರು – ಉಪ್ಪಿನಂಗಡಿ ರಸ್ತೆಯಲ್ಲಿ ಸಿಗುವ ದಾರಂದಕುಕ್ಕು ಎಂಬಲ್ಲಿಂದ ಕವಲೊಡೆದ ರಸ್ತೆ ಕಟಾರ ನದಿ ದಡಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯನ್ನು ಈಗಾಗಲೇ ಗ್ರಾಮಾಂತರ ಮಟ್ಟದಿಂದ ಜಿಲ್ಲಾ ಮುಖ್ಯ ರಸ್ತೆ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗಿದೆ. ಇದರಂತೆ ಈ ರಸ್ತೆ ಅಭಿವೃದ್ಧಿಯಾಗುತ್ತದೆ. ಕಟಾರದಲ್ಲಿ ಕುಮಾರಧಾರಾ ನದಿಯು ಅರ್ಧ ಕಿ.ಮೀ. (500 ಮೀಟರ್) ಅಗಲವಿದ್ದು, ಇಷ್ಟೂ ಉದ್ದದ ಸೇತುವೆ- ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತದೆ. ಈ ಸೇತುವೆ ಮೂಲಕ ಕೊಯಿಲ, ಹಿರೇಬಂಡಾಡಿ ಭಾಗಕ್ಕೆ ಸುಲಭ ಸಂಪರ್ಕ ಸಾಧ್ಯವಾಗಲಿದೆ. ಭವಿಷ್ಯದಲ್ಲಿ ಪುತ್ತೂರು ಕಡೆಯಿಂದ ಕೊಯಿಲ ಜಾನುವಾರು ತಳಿ ಸಂವರ್ಧನ ಕೇಂದ್ರ, ಕೊಯಿಲದ ಪಶುವಿದ್ಯಾಲಯಕ್ಕೆ ತೆರಳಲು ಸುಲಭ ರಸ್ತೆ ಯಾಗಲಿದೆ. ಉಪ್ಪಿನಂಗಡಿ ಪೇಟೆಗೆ ಹೋಗಿ ಸುತ್ತಿ ಬಳಸಿ ಹೋಗುವ ಅನಿವಾರ್ಯತೆ ತಪ್ಪಲಿದೆ. ಅದೇ ರೀತಿ ಆಲಂಕಾರು, ಕೊಯಿಲ ಭಾಗದವರಿಗೆ ಪುತ್ತೂರಿಗೆ ಬರಲು ಇದು ಹತ್ತಿರದ ಮಾರ್ಗವಾಗಲಿದೆ.
ಪಶ್ಚಿಮ ವಾಹಿನಿ ಯೋಜನೆ
ದ.ಕ. ಜಿಲ್ಲೆಯ ಅಂತರ್ಜಲ ಸಂರಕ್ಷಣೆ ಮತ್ತು ನೀರು ಲಭ್ಯತೆಗಾಗಿ ಸರಣಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಸರಕಾರ ಪ್ರತೀ ವರ್ಷ ಪಶ್ಚಿಮ ವಾಹಿನಿ ಯೋಜನೆಯಲ್ಲಿ 500 ಕೋಟಿ ರೂ. ನೀಡುತ್ತಿದೆ. ಇದರಡಿಯಲ್ಲಿ ಉಪ್ಪಿನಂಗಡಿ ಮತ್ತು ಕಟಾರ ಅಣೆಕಟ್ಟು ಯೋಜನೆ ಜಾರಿಗೆ ಬರಲಿದೆ. ಕುಮಾರಧಾರಾ, ನೇತ್ರಾವತಿಗಳು ಪುತ್ತೂರು ತಾಲೂಕಿನಲ್ಲಿ ಹರಿದರೂ ಎಲ್ಲ ಬೃಹತ್ ಅಣೆಕಟ್ಟುಗಳು ಬಂಟ್ವಾಳ ತಾಲೂಕಿನಲ್ಲೇ ಇವೆ. ಪುತ್ತೂರಿನ ಹಳ್ಳಿಗಳಿಗೆ ನೀರು ಒದಗಿಸುವ 375 ಕೋಟಿ ರೂ.ಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಗೂ ಬಂಟ್ವಾಳದ ಎಎಂಆರ್ ಅಣೆಕಟ್ಟಿನಿಂದ ನೀರು ಪಡೆಯಲಾಗುತ್ತದೆ. ಇದನ್ನೆಲ್ಲ ಮನಗಂಡು ಭವಿಷ್ಯದ ಗುರಿಯಿಟ್ಟುಕೊಂಡು ಉಪ್ಪಿನಂಗಡಿ, ಕಟಾರ ಯೋಜನೆ ಸಿದ್ಧಪಡಿಸಲಾಗಿದೆ. –ಸಂಜೀವ ಮಠಂದೂರು ಶಾಸಕರು, ಪುತ್ತೂರು