ಜಮ್ಮು-ಕಾಶ್ಮೀರ: ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರನ್ನು ಮಂಗಳವಾರ (ಏಪ್ರಿಲ್ 26) ಜಮ್ಮು-ಕಾಶ್ಮೀರದ ಬಾರಾಮುಲ್ಲಾದ ಪಠಾಣ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಗಾಂಜಾ ಮತ್ತಿನಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು: ಆರೋಪಿಗಳ ಬಂಧನ
ಶ್ರೀನಗರದಿಂದ ವಾಹನವೊಂದರಲ್ಲಿ ಇಬ್ಬರು ಉಗ್ರರು ಆಗಮಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ 29ನೇ ರಾಷ್ಟ್ರೀಯ ರೈಫಲ್ಸ್, ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ಮೊಬೈಲ್ ಸ್ಕ್ವಾಡ್ ಜಂಟಿಯಾಗಿ ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ತಪಾಸಣೆ ಕಾರ್ಯದಲ್ಲಿ ತೊಡಗಿದ್ದು, ಈ ಸಂದರ್ಭದಲ್ಲಿ ವೇಗವಾಗಿ ಬಂದ ಟವೇರಾ ಕಾರನ್ನು ತಡೆದು ನಿಲ್ಲಿಸಿದಾಗ, ಅದರಲ್ಲಿದ್ದ ಇಬ್ಬರು ಕಾರಿನಿಂದ ಕೆಳಕ್ಕೆ ಜಿಗಿದು ಪರಾರಿಯಾಗಲು ಯತ್ನಿಸಿದಾಗ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಪೊಲೀಸ್ ವಕ್ತಾರರೊಬ್ಬರು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಆರೋಪಿಯನ್ನು ಸೊಪೋರೆ ಜಿಲ್ಲೆಯ ಮೊಹ್ಮದ್ ಅಖೀಬ್ ಮೀರ್ ಅಲಿಯಾಸ್ ಕಿಯಾನ್ ಮೀರ್ ಅಲಿಯಾಸ್ ರಾಖೀಬ್ ಮೀರ್ ಹಾಗೂ ಸೊಪೋರೆಯ ದಾನೀಶ್ ಅಹಾದ್ ದಾರ್ ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಎರಡು ಚೀನಾ ನಿರ್ಮಿತ ಪಿಸ್ತೂಲ್, 2 ಮ್ಯಾಗಝೈನ್ಸ್, 2 ಚೀನಾ ನಿರ್ಮಿತ ಗ್ರೆನೇಡ್ಸ್ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಇವರು ಜಮ್ಮು-ಕಾಶ್ಮೀರದಲ್ಲಿ ಪಂಚಾಯತ್ ಪ್ರತಿನಿಧಿಗಳನ್ನು ಹಾಗೂ ಅಲ್ಪಸಂಖ್ಯಾತ (ಹೊರಭಾಗದ)ರನ್ನು ಗುರಿಯಾಗಿರಿಸಿಕೊಂಡು ಹತ್ಯೆಗೈಯುವ ಸಂಚು ರೂಪಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.