ಬೆಂಗಳೂರು: “ಸಾಹಿತ್ಯ ಮತ್ತು ವೈದ್ಯ ವೃತ್ತಿ ನನ್ನ ಬದುಕಿನ ಎರಡು ಕಣ್ಣುಗಳಿದ್ದಂತೆ. ಇವರೆಡನ್ನು ಜೀವನದ ಭಾಗವಾಗಿ ಸ್ವೀಕರಿಸಿಕೊಂಡಿದ್ದಕ್ಕೆ ಎರಡನ್ನೂ ಮುಂದುವರಿಸಿಕೊಂಡು ಬಂದಿದ್ದೇನೆ,’ ಎಂದು ವೈದ್ಯ ಹಾಗೂ ಸಾಹಿತಿ ಡಾ. ಎಚ್. ಗಿರಿಜಮ್ಮ ಅಬಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’ ಸಂವಾದ ಕಾರ್ಯಕ್ರಮದಲ್ಲಿ, ವೈದ್ಯ ವೃತ್ತಿಯ ಒತ್ತಡಗಳು ಮತ್ತು ಸಾಹಿತ್ಯದ ಭಾವನೆಗಳನ್ನು ಒಟ್ಟೊಟ್ಟಿಗೆ ಹೇಗೆ ನಿಭಾಯಿಸಿದಿರಿ ಎಂದು ಕೇಳಿದ್ದಕ್ಕೆ ಇದರಲ್ಲಿ ನಿಭಾಯಿಸುವ ಪ್ರಶ್ನೆ ಬರುವುದಿಲ್ಲ. ಒತ್ತಡಗಳ ಮಧ್ಯೆಯೇ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.
ನಾನು ಡಾಕ್ಟರ್ ಆಗಬೇಕು ಎಂದು ಅಮ್ಮನ ಆಸೆ ಆಗಿತ್ತು. ಅದರಂತೆ ಡಾಕ್ಟರ್ ಆದೆ. ಅಮ್ಮನಿಗೆ ಓದುವ ಆಸಕ್ತಿ ಹೆಚ್ಚಾಗಿತ್ತು, ನನ್ನನ್ನೂ ಓದಿಸುತ್ತಿದ್ದಳು, ಅಮ್ಮನಿಂದಲೇ ಸಾಹಿತ್ಯದ ಆಸಕ್ತಿ ಹುಟ್ಟಿಕೊಂಡಿತು. ಸಾಹಿತ್ಯ ಮತ್ತು ವೈದ್ಯ ವೃತ್ತಿ ನನ್ನ ಬದುಕಿನ ಎರಡು ಕಣ್ಣುಗಳಿದ್ದಂತೆ. ಇವರೆಡನ್ನು ಜೀವನದ ಭಾಗವಾಗಿ ಸ್ವೀಕರಿಸಿಕೊಂಡು ಬಂದಿದ್ದೇನೆ. ವೈದ್ಯೆ ಆಗಿದ್ದಕ್ಕೆ ನಾನು ಸಾಹಿತಿಯೂ ಆದೆ. ಡಾಕ್ಟರ್ ಆಗಿ ನಾನು ಯಾರಿಂದಲೂ ಹಣ ಪಡೆದಿಲ್ಲ.
ಹಣ ಕೇಳುವ ಮನಸ್ಸೂ ಬರುವುದಿಲ್ಲ. ಆದರೆ, ಒಂದು ಹೊತ್ತಿನ ಊಟಕ್ಕೂ ಪರದಾಡಿದ ಕುಟುಂಬ ನಮ್ಮದು. ಹಾಗಾಗಿ ನಾನು ಹಣ ಪಡೆಯದಿರುವ ಬಗ್ಗೆ ಅಮ್ಮನಿಗೆ ಬೇಸರ ತರುತ್ತಿತ್ತು. ನಾಳೆಯ ಚಿಂತೆ ಯಾಕೆ ಎಂದು ನಾನು ಅಮ್ಮನಿಗೆ ಸಂತೈಸುತ್ತಿದೆ. ನನ್ನ ಬಗ್ಗೆ ಕೀಳು ಅಪಪ್ರಚಾರ ಮಾಡಿದವರೇ ಇಂದು ಸತ್ಯದ ಅರಿವಾಗಿ ಪಶ್ಚತ್ತಾಪಡುತ್ತಿದ್ದಾರೆ ಎಂದು ಗಿರಿಜಮ್ಮ ತಮ್ಮ ಜೀವನದ ಗತವನ್ನು ಮೆಲಕು ಹಾಕಿದರು.
ಯುವಕರು ಮೊಬೈಲ್ ಬಿಡಲಿ: ಮೊಬೈಲ್ ಇಂದು ಸೃಜನಶೀಲತೆಯನ್ನು ಕೊಂದು ಹಾಕುತ್ತಿದೆ. ಹಾಗಾಗಿ ಸಾಹಿತ್ಯದಲ್ಲಿ ಆಸಕ್ತಿ ಇರುವ ಯುವಕರು ಮೊದಲು ಮೊಬೈಲ್ ಬಿಡಬೇಕು. ವಾಟ್ಸ್‌ಪ್, ಟ್ವೀಟರ್ ಇತ್ಯಾದಿ ನಮ್ಮಲ್ಲಿನ ಸಾಹಿತ್ಯದ ಕ್ರೀಯಾಶೀಲತೆಯನ್ನು ನಾಶ ಮಾಡಿ ಬಿಡುತ್ತಿವೆ. ಹಾಗಾಗಿ ಯುವಕರು ಮೊಬೈಲ್‌ನಿಂದ ದೂರ ಇರಬೇಕು ಎಂದು ಇದೇ ವೇಳೆ ಗಿರಿಜಮ್ಮ ಕಿವಿಮಾತು ಹೇಳಿದರು.