Advertisement

ಇಂದಿನಿಂದ ತಣ್ಣೀರುಬಾವಿ ಬೀಚ್‌ನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

01:43 PM Feb 10, 2024 | Team Udayavani |

ಮಹಾನಗರ: ಕಡಲತೀರದ ಸೌಂದರ್ಯಕ್ಕೆ ಮನಸೋಲದ ಮನಸ್ಸುಗಳಿಲ್ಲ. ಇದಕ್ಕೆ ಪೂರಕವಾಗಿ ಇದೀಗ ಕಡಲ ಅಲೆಗಳ ರಮಣೀಯ ದೃಶ್ಯದ ಜತೆಗೆ ಗಾಳಿಪಟ ಸೌಂದರ್ಯವನ್ನು ಆಸ್ವಾಧಿಸಬಹುದು! ಫೆ. 10, 11ರಂದು ತಣ್ಣೀರುಬಾವಿ ಕಡಲ ತೀರದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.

Advertisement

ಟೀಂ ಮಂಗಳೂರು ವತಿಯಿಂದ ಮೂರು ವರ್ಷದ ಬಳಿಕ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದ್ದು, ಈಗಾಗಲೇ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿವೆ. ಎರಡು ದಿನ ಅಪರಾಹ್ನ 3ರಿಂದ ರಾತ್ರಿ 7 ಗಂಟೆಯವರೆಗೆ ಗಾಳಿಪಟ ಹಾರಾಟ ಮತ್ತು ಪ್ರದರ್ಶನವಿರಲಿದೆ.

ಮೊದಲನೇ ದಿನವಾದ ಫೆ. 10ರಂದು ರಾತ್ರಿ 10 ಗಂಟೆಯವರೆಗೆ ವಿದ್ಯುತ್‌ ದೀಪಗಳ ಬಣ್ಣಗಳ ಬೆಳಕಿನಲ್ಲಿಯೂ ಗಾಳಿಪಟ ಹಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. “ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಸಾಮರಸ್ಯ, ಏಕತಾ ಭಾವಗಳಿಂದ ಈ ಉತ್ಸವ ಆಯೋಜನೆ ಮಾಡಲಾಗಿದೆ. ಸುಮಾರು 1,000ಕ್ಕೂ ಅಧಿಕ ವಿವಿಧ ವಿನ್ಯಾಸ, ಗಾತ್ರಗಳಿಂದ ಕೂಡಿದ ಗಾಳಿಪಟಗಳು ಹಾರಾಟ ನಡೆಸುವ ನಿರೀಕ್ಷೆ ಇದೆ. ಎಂಆರ್‌ಪಿಎಲ್‌- ಒಎನ್‌ಜಿಸಿ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ದ.ಕ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಈ ಉತ್ಸವ ನಡೆಯುತ್ತಿದೆ ಎಂದು ಟೀಂ ಮಂಗಳೂರು ತಂಡದ ಸ್ಥಾಪಕ ಬಿ. ಸರ್ವೇಶ್‌ ರಾವ್‌ ತಿಳಿಸಿದ್ದಾರೆ.

ವಿಶೇಷ ಬಸ್‌, ದೋಣಿ ವ್ಯವಸ್ಥೆ
ಪ್ರವಾಸಿಗರಿಗೆ ಅನುಕೂಲವಾಗುವಂತೆ ರಾತ್ರಿ 10 ಗಂಟೆಯವರೆಗೆ ಕೆಐಎಸಿಎಲ್‌ ಬಳಿಯಿಂದ ತಣ್ಣೀರುಬಾವಿ ಬೀಚ್‌ವರೆಗೆ ವಿಶೇಷವಾಗಿ ಆರು ಬಸ್‌ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಸುಲ್ತಾನ್‌ ಬತ್ತೇರಿಯಿಂದ ದೋಣಿಯಲ್ಲಿ ಬರುವವರಿಗೂ ರಾತ್ರಿ 10 ಗಂಟೆಯವರೆಗೆ ದೋಣಿ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂಪರ್ಕ ಕೌಂಟರ್‌, ಆ್ಯಂಬುಲೆನ್ಸ್‌, ಅಗ್ನಿಶಾಮಕ ಕೌಂಟರ್‌, ಆಹಾರ ಮಳಿಗೆ, ಗಾಳಿಪಟ ಖರೀದಿಸುವರಿಗೆ ಕೈಟ್‌ ಸ್ಟಾಲ್‌ಗ‌ಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಉಸ್ತುವಾರಿ ಸಚಿವರು ಭಾಗಿ
ಫೆ. 10ರಂದು ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನ ಸಮಾರಂಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂ ರಾವ್‌ ಅವರು ಭಾಗಿಯಾಗುವ ನಿರೀಕ್ಷೆ ಇದೆ. ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಎನ್‌ಎಂಪಿಎ ಅಧ್ಯಕ್ಷ ವೆಂಕಟ್ರಮಣ ಅಕ್ಕರಾಜು, ಮೆಡೆಕ್‌ ಮೆಡಿಕೇರ್‌ನ ದೀಪಕ್‌ ಶೆಣೈ ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸುಭಾಷ್‌ ಪೈ, ಪ್ರಾಣ್‌ ಹೆಗ್ಡೆ, ದಿನೇಶ್‌ ಹೊಳ್ಳ ಇದ್ದರು.

Advertisement

ಮಾಂಜಾ ಕೈಟ್‌ ಹಾರಾಟವಿಲ್ಲ
ಈ ಬಾರಿಯ ಗಾಳಿಪಟ ಉತ್ಸವದಲ್ಲಿ ಮಾಂಜಾ ಕೈಟ್‌ ಗಾಳಿಪಟ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಟೀಂ ಮಂಗಳೂರಿನ ವಿಶೇಷ ಗಾಳಿಪಟವಾದ ಕಥಕ್ಕಳಿ, ಯಕ್ಷ, ಗಜೇಂದ್ರ, ಭೂತಕೋಲ, ಗರುಡ, ಪುಷ್ಪಕ ವಿಮಾನ ಮತ್ತು ವಿಭೀಷಣೆ ಗಾಳಿಪಟಗಳು ಹಾರಾಡಲಿವೆ. ಎರೋಫಾಯಿಲ್‌ ಗಾಳಿಪಟ ವಿಶೇಷವಾಗಿದೆ. ಸಾಂಪ್ರದಾಯಿಕ, ಆಧುನಿಕ ಶೈಲಿಯ ಕಲಾತ್ಮಕ, ವಿನ್ಯಾಸದ ಗಾಳಿಪಟಗಳು ಭಾಗವಹಿಸುತ್ತಿದೆ ಎಂದು ಟೀಂ ಮಂಗಳೂರು ತಂಡದ ಪ್ರಶಾಂತ್‌ ಉಪಾಧ್ಯಾಯ ತಿಳಿಸಿದ್ದಾರೆ.

8 ದೇಶಗಳ ಪ್ರತಿನಿಧಿಗಳು ಭಾಗಿ
ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಮಲೇಷಿಯಾ, ಇಂಡೋನೇಷ್ಯ, ಗ್ರೀಸ್‌, ಸ್ಪೀಡನ್‌, ಉಕ್ರೇನ್‌, ಥೈಲ್ಯಾಂಡ್‌, ವಿಯೇಟ್ನಾಂ, ಇಸ್ಟೋನಿಯ ದೇಶಗಳ 13 ಮಂದಿ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಅದೇ ರೀತಿ, ಭಾರತದ
ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ ಮತ್ತು ಕೇರಳದ ಸುಮಾರು 20 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸರ್ವೇಶ್‌ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next