ಮುಂಬಯಿ:ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಘೋಷಿಸಿದ್ದು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ಮರಳಿದ್ದಾರೆ. ಆದರೆ, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರು ಸಂಜು ಸ್ಯಾಮ್ಸನ್ ಅವರನ್ನು ಪರಿಗಣಿಸದಿದ್ದುದಕ್ಕೆ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ.
ಗಾಯಾಳಾಗಿರುವ ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ. ತಂಡ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ಎರಡು ವಿಕೆಟ್ ಕೀಪಿಂಗ್ ಆಯ್ಕೆಗಳೊಂದಿಗೆ ಹೋಗುತ್ತಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಗೆ ಭಾರತ ತಂಡ ಪ್ರಕಟ: ರೋಹಿತ್ ನಾಯಕತ್ವದಲ್ಲಿ ಬಲಿಷ್ಠ ತಂಡ ಕಟ್ಟಿದ ಬಿಸಿಸಿಐ
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್ 2022 ರಲ್ಲಿ ತಂಡವನ್ನು ಮುನ್ನಡೆಸಿದ್ದರು, ಅಲ್ಲಿ ಅವರು ರನ್ನರ್ ಅಪ್ ಆಗಿದ್ದರು.
ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಪ್ರಮುಖ ಹೆಸರುಗಳು ನಿರೀಕ್ಷಿತ ಸಾಲಿನಲ್ಲಿ ಕಾಣಿಸಲಿಲ್ಲ ಇಬ್ಬರೂ ಇತ್ತೀಚಿನ ದಿನಗಳಲ್ಲಿ ಭಾರತ ತಂಡಕ್ಕಾಗಿ ಟಿ 20 ಕ್ರಿಕೆಟ್ ಆಡಿದ್ದಾರೆ ಆದರೆ ಟಿ 20 ವಿಶ್ವಕಪ್ ತಂಡದಲ್ಲಿ ಮತ್ತು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಟಿ 20 ಸರಣಿಗಳ ಗಳ ತಂಡಗಳಲ್ಲಿ ಸ್ಥಾನವನ್ನು ಕಂಡುಕೊಂಡಿಲ್ಲ.
ಸ್ಯಾಮ್ಸನ್ ಜಿಂಬಾಬ್ವೆ ವಿರುದ್ಧ ತನ್ನ ಕೊನೆಯ ಏಕದಿನ ಸರಣಿಯನ್ನು ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತನ್ನ ಕೊನೆಯ ಟಿ 20 ಸರಣಿಯನ್ನು ಆಡಿದ್ದರು. ಈ ವರ್ಷದ ಆರಂಭದಲ್ಲಿ ಐರ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಅವರು ತಮ್ಮ ಅತ್ಯಧಿಕ ಸ್ಕೋರ್ ಗಳಿಸಿದ್ದರು. ಭಾರತದ ಏಷ್ಯಾಕಪ್ ತಂಡದಿಂದಲೂ ಕೇರಳದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸಲಾಗಿತ್ತು.
ಟ್ವಿಟರ್ ನಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿ ನೋವನ್ನು ಹೊರ ಹಾಕಿದ್ದಾರೆ. ಸಾವಿರಾರು ಮಂದಿ ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.