Advertisement
ಇದೆಲ್ಲದರ ನಡುವೆ ಉದ್ಯಮಿ ರಾಹುಲ್ ಬಜಾಜ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೇ ನೇರವಾಗಿ ಈ ಪ್ರಶ್ನೆಯನ್ನು ಕೇಳುವ ಮೂಲಕ ಇದೀಗ ದೇಶದ ಗಮನವನ್ನು ಸೆಳೆದಿದ್ದಾರೆ. ಮತ್ತು ರಾಹುಲ್ ಬಜಾಜ್ ಅವರ ಈ ವಿಡಿಯೋ ಕ್ಲಿಪ್ಪಿಂಗ್ ಇದೀಗ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.
ಆ ಸಂದರ್ಭದಲ್ಲಿ ಎದ್ದು ನಿಂತು ಮಾತನಾಡಿದ ಬಜಾಜ್ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಹುಲ್ ಬಜಾಜ್ ಅವರು, ‘ದೇಶದಲ್ಲಿ ಸದ್ಯ ಭಯದ ವಾತಾವರಣ ಇದೆ. ಸರಕಾರವನ್ನು ಪ್ರಶ್ನೆ ಮಾಡುವುದಕ್ಕೆ ಜನರು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ ಮಾತ್ರವಲ್ಲದೇ ಹೀಗೆ ಸರಕಾರವನ್ನು ಟೀಕೆ ಮಾಡಿದರೆ ಅಂತಹ ವ್ಯಕ್ತಿಗಳಿಗೆ ಪ್ರಶಂಸೆ ಸಿಗುತ್ತದೆ ಎನ್ನುವ ವಿಶ್ವಾಸವೇ ಇಲ್ಲ’ ಎಂದು ಹೇಳಿದರು.
Related Articles
Advertisement
ಮಾತ್ರವಲ್ಲದೇ ಸಕಾರದ ತಪ್ಪು ನೀತಿಗಳ ವಿರುದ್ಧ ದೇಶದ ಉದ್ಯಮಿಗಳೂ ಧ್ವನಿ ಎತ್ತುತ್ತಿಲ್ಲ ಎಂದು ರಾಹುಲ್ ಬಜಾಜ್ ಅವರು ಸಮಾರಂಭದಲ್ಲಿದ್ದ ತನ್ನ ಉದ್ಯಮ ಮಿತ್ರರ ಕಾಲನ್ನೂ ಎಳೆದರು. ‘ನಮ್ಮೆಲ್ಲರ ಮನಸ್ಸಿನಲ್ಲಿ ಹಲವಾರು ವಿಚಾರಗಳಿವೆ, ಆದರೆ ಇವರ್ಯಾರೂ ಆ ಬಗ್ಗೆ ಮಾತನಾಡಲಾರರು, ಆದರೆ ನಾನು ಮಾತನಾಡುತ್ತೇನೆ’ ಎಂದು ರಾಹುಲ್ ಬಜಾಜ್ ಹೇಳಿದರು.
ಆದರೆ ರಾಹುಲ್ ಬಜಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ ಅವರು ದೇಶದಲ್ಲಿ ಆ ರೀತಿಯ ವಾತಾವರಣ ಇದೆ ಎಂಬುದನ್ನು ತಳ್ಳಿಹಾಕಿದರು. ‘ಯಾವುದರ ಬಗ್ಗೆಯೂ ಭಯಪಡುವ ಅಗತ್ಯವಿಲ್ಲ. ನರೇಂದ್ರ ಮೋದಿ ಸರಕಾರವನ್ನು ಮಾಧ್ಯಮಗಳಲ್ಲಿ ಪ್ರತಿನಿತ್ಯ ಟೀಕಿಸಲಾಗುತ್ತಿದೆ. ಆದರೆ ನೀವು ಹೇಳುವಂತೆ ಆ ರೀತಿಯ ವಾತಾವರಣ ಇದೆ ಎಂದಾದರೆ ನಾವದರ ಕುರಿತು ಖಂಡಿತಾ ಗಮನ ಹರಿಸಲಿದ್ದೇವೆ’ ಎಂದು ಅಮಿತ್ ಶಾ ಅವರು ಹಿರಿಯ ಉದ್ಯಮಿಯ ಮಾತಿಗೆ ಭರವಸೆಯ ಪ್ರತಿಕ್ರಿಯೆಯನ್ನು ನೀಡಿದರು.