ಹೊಸದಿಲ್ಲಿ: ಸಾಮಾಜಿಕ ಜಾಲತಾಣ ದೈತ್ಯ ಟ್ವಿಟ್ಟರ್ ತನ್ನ ಚಂದಾದಾರಿಕೆ ಸೇವೆ ಟ್ವಿಟ್ಟರ್ ಬ್ಲ್ಯೂ ನ ಪರಿಷ್ಕೃತ ಆವೃತ್ತಿಯನ್ನು ಆಪಲ್ ಬಳಕೆದಾರರಿಗೆ ಹೆಚ್ಚಿನ ಬೆಲೆಗೆ ಸೋಮವಾರ ಮರುಪ್ರಾರಂಭಿಸಲಿದೆ ಎಂದು ಕಂಪನಿಯು ಶನಿವಾರದ ಟ್ವೀಟ್ ನಲ್ಲಿ ತಿಳಿಸಿದೆ.
ಬಳಕೆದಾರರು ಟ್ವೀಟ್ ಗಳನ್ನು ಎಡಿಟ್ ಮಾಡಲು, 1080p ವೀಡಿಯೊಗಳನ್ನು ಅಪ್ ಲೋಡ್ ಮಾಡಲು ಮತ್ತು ಬ್ಲೂ ಚೆಕ್‌ಮಾರ್ಕ್ ಪೋಸ್ಟ್ ಖಾತೆ ಪರಿಶೀಲನೆಯನ್ನು ಪಡೆಯಲು ಅನುಮತಿಸುವ ಈ ಸೇವೆಗೆ ಬಳಕೆದಾರರು ಚಂದಾದಾರರಾಗಬಹುದು ಎಂದು ಕಂಪನಿ ಹೇಳಿದೆ. ವೆಬ್ ಮೂಲಕ ಬಳಕೆಗೆ ತಿಂಗಳಿಗೆ 8 ಡಾಲರ್ ಪಾವತಿಸಬೇಕು. ಆದರೆ ಆ್ಯಪಲ್ ಐಓಸ್ ಮೂಲಕ ತಿಂಗಳಿಗೆ 11 ಡಾಲರ್ ಪಾವತಿ ಮಾಡಬೇಕು ಎಂದು ಟ್ವಿಟ್ಟರ್ ಹೇಳಿದೆ.
ಆಪಲ್ ಬಳಕೆದಾರರಿಗೆ ಇತರರಿಗಿಂತ ಹೆಚ್ಚಿನ ಶುಲ್ಕವನ್ನು ಏಕೆ ವಿಧಿಸಲಾಗುತ್ತಿದೆ ಎಂಬುದನ್ನು ಟ್ವಿಟ್ಟರ್ ವಿವರಿಸಲಿಲ್ಲ. ಆದರೆ ಆಪ್ ಸ್ಟೋರ್ ನಲ್ಲಿ ವಿಧಿಸಲಾದ ಶುಲ್ಕವನ್ನು ಸರಿದೂಗಿಸಲು ಕಂಪನಿಯು ಈ ಮಾರ್ಗವನ್ನು ಆಯ್ಕೆ ಮಾಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿದೆ.
ಇದನ್ನೂ ಓದಿ:ಹಾಲು ಮಾರಾಟದಿಂದ ಸಿಎಂ ಹುದ್ದೆಯವರೆಗೆ.. ಸುಖ್‌ವಿಂದರ್ ಸಿಂಗ್ ಸುಖು ಎಂಬ ಫೈರ್ ಬ್ರ್ಯಾಂಡ್
ಇಲಾನ್ ಮಸ್ಕ್ ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸಿದ ನಂತರ ಟ್ವಿಟ್ಟರ್ ಈ ಹಣ ಪಾವತಿ ಮಾಡಿ ಬ್ಲೂ ಟಿಕ್ ನೀಡುವ ಕೆಲಸ ಆರಂಭಿಸಿತ್ತು. ಆದರೆ ಬಹಳಷ್ಟು ನಕಲಿ ಖಾತೆಗಳು ಇದನ್ನು ದುರುಪಯೋಗ ಪಡಿಸಿದ್ದವು. ನಂತರ ಇದನ್ನು ಸ್ಥಗಿತ ಮಾಡಲಾಗಿತ್ತು.