ಬೆಂಗಳೂರು: ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರು ಕುಟುಂಬ ರಾಜಕಾರಣ ಕುರಿತು ಟೀಕಿಸಿದ್ದಕ್ಕೆ ಟ್ವೀಟ್ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಸುಮಲತಾ ಅವರಿಗೂ ಟ್ವೀಟ್ ಮೂಲಕವೇ ಟಾಂಗ್ ನೀಡಿದ್ದಾರೆ.
ಎಸ್‌ಎಂಕೆಗೆ ಕುಟುಕು: ಮಾನ್ಯ, ಕೃಷ್ಣ ಸಾಹೇಬರಿಗೆ ಗೌರವಯುತ ನಮಸ್ಕಾರಗಳು. ನೀವು ತುಂಬಾ ಮುಂದೆ ಹೆಜ್ಜೆ ಹಾಕಿಬಿಟ್ಟಿರುವುದರಿಂದ ನೀವು ನಡೆದು ಬಂದ ಹಾದಿ ಮರೆತುಹೋಗಿದೆ ಎಂದು ಭಾವಿಸುತ್ತೇನೆ. 50 ವರ್ಷ ಕಾಲ ನೀವು ಅಧಿಕಾರಣದ ಬೆಣ್ಣೆಯನ್ನು ಮೆದ್ದಿರಿ. ಎರಡು ಬಾರಿ ಕೇಂದ್ರ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ ಅಧಿಕಾರ ಅನುಭವಿಸಿದಿರಿ. ಇಷ್ಟೆಲ್ಲಾ ಆದ ಮೇಲೆ ನೀವು ಬಿಜೆಪಿಗೆ ಕಾಲಿಟ್ಟಾಗಲೇ ಟೀಕಿಸುವ ನೈತಿಕತೆ ಕಳೆದುಕೊಂಡಿದ್ದೀರಿ.
ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೀರಿ. ಬಹಳ ಸಂತೋಷ… ಆದರೆ, ನಮ್ಮ ಕುಟುಂಬದಲ್ಲಿ ಯಾರೂ ಹಿಂಬಾಗಿಲ ಪ್ರವೇಶ ಪಡೆದಿಲ್ಲ. ಜನ ಆರಿಸಿದಾಗ ಮಾತ್ರ ಅಧಿಕಾರ ಪಡೆದಿದ್ದಾರೆ. ಆದರೆ, ನೀವು ರಾಜ್ಯಸಭೆಗೆ ಹಿಂಬಾಗಿಲ ಮೂಲಕ ಪ್ರವೇಶ ಪಡೆಯಲು ದೇವೇಗೌಡರ ಸಹಾಯ ಪಡೆದಿದ್ದು ನೆನಪಿದೆ ಎಂದು ಭಾವಿಸುತ್ತೇನೆ ಎಂದು ಕುಟುಕಿದ್ದಾರೆ.
ಸುಮಲತಾಗೆ ಟಾಂಗ್: ಗೌರವಾನ್ವಿತ ಸುಮಲತಾ ಅವರೇ, ನಿಮ್ಮ ರೈತಪರ ಮಾತು ಓದಿ ಇನ್ನಿಲ್ಲದಷ್ಟು ಸಂತೋಷವಾಯಿತು. ನನಗಾಗಲೀ ನನ್ನ ತಂದೆಯವರಿಗಾಗಲೀ ರೈತರ ಬಗ್ಗೆ ಏನೇನೂ ಗೊತ್ತಿಲ್ಲ. ಮಣ್ಣಿನ ಮಕ್ಕಳು ಎಂದು ಈ ದೇಶದ ಜನ ಪ್ರೀತಿಯಿಂದ ಕರೆದರು. ನಮ್ಮದು ರೈತರಿಗೆ ಮಿಡಿದ ಮನ. ಆದರೆ… ಎಂದು ಟ್ವೀಟ್ ಮೂಲಕ ಸುಮಲತಾ ಆವರ ಹೇಳಿಕೆಗೆ ಅತೃಪ್ತಿ ಹೊರಹಾಕಿದ್ದಾರೆ.
ಅಧಿಕಾರ ಮದದ ಮಾತು – ಬಿಎಸ್‌ವೈ: ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಮುತ್ಸದ್ಧಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರ ಬಗ್ಗೆ ಕುಮಾರಸ್ವಾಮಿಯವರು ಅಧಿಕಾರದ ಮದದಿಂದ ಮಾಡಿರುವ ಟೀಕೆ ಮುಖ್ಯಮಂತ್ರಿ ಸ್ಥಾನಕ್ಕೆ ಶೋಭಿಸುವುದಿಲ್ಲ.
ರಾಜಕೀಯ ಅನುಭವದಲ್ಲಿ ಎಸ್.ಎಂ.ಕೃಷ್ಣ ಹಾಗೂ ಕುಮಾರಸ್ವಾಮಿಯವರಿಗೆ ಹೋಲಿಕೆಯೇ ಇಲ್ಲ. ಕುಮಾರಸ್ವಾಮಿಯವರಿಗೆ ವಿನಾಶ ಕಾಲೇ ವಿಪರೀತ ಬುದ್ದಿ ಎಂಬಂತಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಪುತ್ರನನ್ನು ಗೆಲ್ಲಿಸುವುದು ಸಾಧ್ಯವಿಲ್ಲ ಎಂಬುದು ಅರ್ಥವಾದ ಬಳಿಕ ಅವರು ತೀವ್ರ ಹತಾಶೆಗೊಂಡಿದ್ದಾರೆ. ಮಂಡ್ಯದ ಜನತೆ ಈ ಅಹಂಕಾರದ ವರ್ತನೆಗೆ ಮುಖ್ಯಮಂತ್ರಿಯವರ ಕುಟುಂಬಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.