ಕನ್ನಡ ಕಿರುತೆರೆ ಲೋಕ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರನ್ನು ಹೊಂದಿರುವುದು ನಿಮಗೆ ಗೊತ್ತಿರಬಹುದು. ಪ್ರತಿದಿನ ಧಾರಾವಾಹಿ, ರಿಯಾಲಿಟಿ ಶೋ ಹೀಗೆ ಕಿರುತೆರೆಯ ಹತ್ತಾರು ಕೆಲಸಗಳು ನಡೆಯುತ್ತಲೇ ಇರುತ್ತವೆ. ಸಾವಿರಾರು ಕಲಾವಿದರು, ತಂತ್ರಜ್ಞರು ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಕಿರುತೆರೆ ಲೋಕ ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನೂ ಸೃಷ್ಟಿಸಿದೆ.
ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮಗಳು ಮತ್ತು ಅವುಗಳ ಬಗ್ಗೆ ಒಂದಷ್ಟು ಮಾಹಿತಿ, ಪ್ರೇಕ್ಷಕರಿಗೆ ಮತ್ತು ಅದರಲ್ಲಿ ತೊಡಗಿಸಿಕೊಂಡವರಿಗೆ ಇದ್ದೇ ಇರುತ್ತದೆಯಾದರೂ, ಅದರ ಹಿಂದಿನ ಅದೆಷ್ಟೋ ವಿಷಯಗಳ ಬಗ್ಗೆ ಅದರಲ್ಲಿ ತೊಡಗಿಕೊಂಡವರಿಗೂ ಇರುವುದಿಲ್ಲ. ಇದನ್ನು ತಿಳಿಸುವ ಸಲುವಾಗಿಯೇ “ಕರ್ನಾಟಕ ಟಿ.ವಿ ಅಸೋಸಿಯೇಷನ್’ ಹೊಸ ಹೆಜ್ಜೆಯನ್ನಿಟ್ಟಿದೆ.
ಕಿರುತೆರೆ ಲೋಕದ ಆಗು ಹೋಗುಗಳ ಬಗ್ಗೆ ಮಾಹಿತಿ ನೀಡಲು “ಕರ್ನಾಟಕ ಟಿ.ವಿ ಅಸೋಸಿಯೇಷನ್’ ತನ್ನ ನೇತೃತ್ವದಲ್ಲಿ “ಟಿವಿ ಠೀವಿ’ ಮಾಸಿಕ ಪತ್ರಿಕೆಯನ್ನು ಹೊರತರುತ್ತಿದೆ. ಜೊತೆಗೆ ತನ್ನ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ “ಕೆಟಿವಿಎ ವೆಬ್ ಸೈಟ್’ ಮತ್ತು “ಕೆಟಿವಿಎ ಆ್ಯಪ್’ ಕೂಡಾ ಬಿಡುಗಡೆ ಮಾಡುತ್ತಿದೆ. ಇದೇ ಜು. 9 ರ ಭಾನುವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಹಕಾರ ಸಚಿವ ಕೆ. ಎನ್ ರಾಜಣ್ಣ “ಟಿವಿ ಠೀವಿ’ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ “ಕೆಟಿವಿಎ ವೆಬ್‌ಸೈಟ್’ ಅನ್ನು ಮತ್ತು ಹಿರಿಯ ನಟಿ
ಉಮಾಶ್ರೀ “ಕೆಟಿವಿಎ ಆ್ಯಪ್’ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ. ದೊಡ್ಡರಂಗೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್, ನಿರ್ಮಾಪಕ ಮತ್ತು ನಿರ್ದೇಶಕ ಮಿಲನಾ ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಹಾಜರಾಗಲಿದ್ದಾರೆ.
ಇತ್ತೀಚೆಗೆ ಪತ್ರಿಕಾಗೋಷ್ಟಿ ನಡೆಸಿದ “ಕರ್ನಾಟಕ ಟಿ.ವಿ ಅಸೋಸಿಯೇಷನ್’ನ ಅಧ್ಯಕ್ಷ ರವಿ. ಆರ್ ಗರಣಿ, ಉಪಾಧ್ಯಕ್ಷ ಗಣೇಶ್ ರಾವ್ ಕೇಸರ್ಕರ್, ಸಂಘಟನಾ ಕಾರ್ಯದರ್ಶಿ ರಾಮಸ್ವಾಮಿ ಗೌಡ, ಪದಾಧಿಕಾರಿಗಳಾದ ವೀಣಾ ಸುಂದರ್, ಪದ್ಮಾವಾಸಂತಿ, ಬುಕ್ಕಾಪಟ್ಟಣ ವಾಸು ಮತ್ತಿತರರು. “ಕರ್ನಾಟಕ ಟಿ.ವಿ ಅಸೋಸಿಯೇಷನ್’ನ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.