Advertisement

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

02:37 AM Nov 08, 2024 | Team Udayavani |

ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ವಾಯುಮಾಲಿನ್ಯ ತೀವ್ರಗೊಂಡಿದ್ದು, ಗಾಳಿಯ ಗುಣಮಟ್ಟ ಸೂಚ್ಯಂಕವು ಅತ್ಯಂತ ಕಳಪೆಮಟ್ಟದಲ್ಲಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಎರಡು ದಿನಗಳ ಹಿಂದೆಯಷ್ಟೇ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ನಿರ್ವಹಣೆಗೆ ಸಂಬಂಧಿಸಿದಂತೆ ಛೀಮಾರಿ ಹಾಕಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ‌ ಕೃಷಿ ತ್ಯಾಜ್ಯ ಸುಡುವ ರೈತರಿಗೆ ದುಪ್ಪಟ್ಟು ದಂಡ ವಿಧಿಸುವ ನಿರ್ಧಾರವನ್ನು ಕೈಗೊಂಡಿದೆ.

Advertisement

ದೀಪಾವಳಿ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ ಪಟಾಕಿ ಮೇಲಿನ ನಿಷೇಧ ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ಮತ್ತು ನೆರೆ ರಾಜ್ಯಗಳಲ್ಲಿ ರೈತರು ನಿರ್ಬಂಧದ ಹೊರತಾಗಿಯೂ ತಮ್ಮ ಹೊಲಗಳಲ್ಲಿ ಕಳೆ ಸುಡುವುದನ್ನು ಮುಂದುವರಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌ ದಿಲ್ಲಿ ಮತ್ತು ಕೇಂದ್ರ ಸರಕಾರ‌ಗಳೆರಡನ್ನೂ ತರಾಟೆಗೆ ತೆಗೆದುಕೊಂಡಿತ್ತಲ್ಲದೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಗಾಳಿಯ ಗುಣಮಟ್ಟ ಸುಧಾರಣೆಗಾಗಿ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆಯೂ ತಾಕೀತು ಮಾಡಿತ್ತು. ಇದೇ ವೇಳೆ ದಿಲ್ಲಿ ಮತ್ತು ಆಸುಪಾಸಿನ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ(ಎಕ್ಯುಐ) 367ಕ್ಕೆ ಕುಸಿದಿದ್ದು ಅತ್ಯಂತ ಕಳಪೆ ಮಟ್ಟದಲ್ಲಿಯೇ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಚಳಿ ತೀವ್ರಗೊಳ್ಳಲಿದ್ದು, ಎಕ್ಯುಐ 400 ಗಡಿ ದಾಟಿ ತೀವ್ರ ಕಳಪೆ ಹಂತವನ್ನು ತಲುಪಲಿದೆ. ಒಂದು ವೇಳೆ ಎಕ್ಯುಐ 450 ಗಡಿ ದಾಟಿದಲ್ಲಿ ಆ ಪರಿಸ್ಥಿತಿಯನ್ನು ಅತ್ಯಂತ ಅಪಾಯಕಾರಿ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಕೊನೆಗೂ ಕೇಂದ್ರ ಸರಕಾರ‌ ರಾಜಧಾನಿ ಪ್ರದೇಶದ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದಿಷ್ಟು ಕಠಿಣ ನಿರ್ಧಾರವನ್ನು ಕೈಗೊಂಡಿದೆ.

ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ರೈತರು ತಮ್ಮ ಹೊಲಗದ್ದೆಗಳಲ್ಲಿ ಕಳೆ, ತ್ಯಾಜ್ಯಗಳನ್ನು ರಾಶಿ ಹಾಕಿ ಸುಡುವುದರಿಂದ ದಟ್ಟ ಹೊಗೆ ದೇಶದ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಆವರಿಸಿಕೊಳ್ಳುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಬಗ್ಗೆ ದಿಲ್ಲಿ ಸರಕಾರ‌ ಮತ್ತು ಈ ಎರಡು ರಾಜ್ಯಗಳ ಸರಕಾರ‌ಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಬಂದಿದ್ದು, ಸುಪ್ರೀಂಕೋರ್ಟ್‌ ಮತ್ತು ಕೇಂದ್ರ ಸರಕಾರ‌ದ ನಿರ್ದೇಶನದಂತೆ ತ್ಯಾಜ್ಯ ಸುಡುವಿಕೆಗೆ ಈ ರಾಜ್ಯಗಳ ಗಡಿಭಾಗದಲ್ಲಿ ನಿರ್ಬಂಧ ವಿಧಿಸಲಾಗಿದೆ.

ಆದರೆ ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದ ಪರಿಣಾಮ ಇದೊಂದು ವಾರ್ಷಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈಗ ಕೇಂದ್ರ ಸರಕಾರ‌ ಈ ನಿರ್ಬಂಧವನ್ನು ಉಲ್ಲಂ ಸುವ ರೈತರಿಗೆ ವಿಧಿಸಲಾಗುತ್ತಿರುವ ದಂಡದ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಿದ್ದು ಆ ಮೂಲಕವಾದರೂ ರೈತರ ಈ ಚಾಳಿಗೆ ಕಡಿವಾಣ ಬಿದ್ದು ರಾಜಧಾನಿಯಲ್ಲಿನ ವಾತಾವರಣ ಒಂದಿಷ್ಟು ಸುಧಾರಿಸಲಿದೆ ಎಂಬ ದೂರದ ಆಶಾಭಾವ ದಿಲ್ಲಿಯ ನಿವಾಸಿಗಳಲ್ಲಿ ಮೂಡಿದೆ.

Advertisement

ದಿಲ್ಲಿ ಮತ್ತು ಅಕ್ಕಪಕ್ಕದ ಪ್ರದೇಶಗಳ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ದಿಲ್ಲಿ ಸರಕಾರ‌ ಇನ್ನಷ್ಟು ಬಿಗಿಕ್ರಮಗಳನ್ನು ಕೈಗೊಳ್ಳಬೇಕು. ನಿಷೇಧ, ದಂಡದ ಜತೆಜತೆಯಲ್ಲಿ ಈ ಸಮಸ್ಯೆಗೆ ಇತರ ಕಾರಣಗಳಾದ ತೈಲೋತ್ಪನ್ನ ಚಾಲಿತ ವಾಹನಗಳು ಓಡಾಟಕ್ಕೆ ಕಡಿವಾಣ, ದಟ್ಟ ಹೊಗೆ ಹೊರಸೂಸುವ ಕೈಗಾರಿಕೆಗಳನ್ನು ನಗರದ ಹೊರಭಾಗಕ್ಕೆ ಸ್ಥಳಾಂತರಿಸುವ ಸಂಬಂಧ ನಿರ್ದಿಷ್ಟ ಮಾರ್ಗಸೂಚಿಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾದ ತುರ್ತು ಅನಿವಾರ್ಯತೆ ಇದೆ. ಹೀಗಾದಾಗ ರಾಜಧಾನಿಯ ವಾಯುಮಾಲಿನ್ಯ ಸಮಸ್ಯೆಯ ತೀವ್ರತೆ ಕಡಿಮೆಯಾಗಬಹುದು. ಈ ದಿಸೆಯಲ್ಲಿ ಕೇಂದ್ರ ಮತ್ತು ದಿಲ್ಲಿ ಸರಕಾರ‌ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಪ್ರದರ್ಶಿಸದೇ ಹೋದಲ್ಲಿ ವಾಯುಮಾಲಿನ್ಯದ ಸಮಸ್ಯೆಯಿಂದ ದಿಲ್ಲಿ ಮುಕ್ತಗೊಳ್ಳುವುದು ಕಷ್ಟಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next