Advertisement

ಅವಶೇಷಗಳಡಿಯಲ್ಲಿ ನಿಲ್ಲದ ಆಕ್ರಂದನ!

01:01 AM Feb 09, 2023 | Team Udayavani |

ಇಸ್ತಾಂಬುಲ್‌: ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿರುವ ಜೀವಗಳ ಆಕ್ರಂದನ, ಕಾಪಾಡುವ ಮನಸ್ಸಿದ್ದರೂ ಕೈಚಾಚಲಾಗದ ಅಸಹಾಯಕತೆ. ಇದೆಲ್ಲದರ ನಡುವೆಯೂ ಕಾರ್ಯಾಚರಣೆಗಳ ಮೂಲಕ ಕಾಪಾಡಿದ ಜೀವಗಳು ಕಣ್ಣೆದುರು ಬಂದಾಗ, ಸಂಬಂಧಗಳನ್ನೂ ಮೀರಿ ಜನರು ಕಂಬನಿ ಮಿಡಿಯುತ್ತಿದ್ದಾರೆ.

Advertisement

ವಿಶ್ವವನ್ನೇ ಬೆಚ್ಚಿಬೀಳಿಸಿದ ಟರ್ಕಿ-ಸಿರಿಯಾದಲ್ಲಿ ಅವಶೇಷಗಳ ಅಡಿಯಲ್ಲಿ ಎಷ್ಟೋ ಜೀವಗಳ ಉಸಿರು ನಿಂತರೆ, ಮತ್ತೆಷ್ಟೋ ಜೀವಗಳು ಮರುಜೀವ ಪಡೆದುಕೊಂಡಿವೆ.

2 ದಿನದ ಬಳಿಕ ಕುಟುಂಬ ಪಾರು: ಸಿರಿಯಾದ ಬಿಸಿನಿಯಾ ಗ್ರಾಮದ ಕಟ್ಟಡವೊಂದು ಕುಸಿದು ಇಡೀ ಕುಟುಂಬ ಅವಶೇಷಗಳ ಅಡಿಯಲ್ಲಿ ಸಿಲುಕಿತ್ತು. ಸತತ 2 ದಿನಗಳ ಕಾರ್ಯಾಚರಣೆ ಬಳಿಕ ಕುಟುಂಬವನ್ನು ಜೀವಂ ತವಾಗಿ ಹೊರತೆಗೆಯಲಾಗಿದ್ದು, ಕುಟುಂಬದಲ್ಲಿದ್ದ ಮಗುವನ್ನು ಎತ್ತಿ ಹಿಡಿದು ರಕ್ಷಣ ತಂಡ ಸಂತಸ ವ್ಯಕ್ತ ಪಡಿಸಿದೆ.

55 ಗಂಟೆ ಅನಂತರ ಶ್ವಾನದ ರಕ್ಷಣೆ: ಭೂಕಂಪವಾದ 55 ಗಂಟೆಗಳ ಬಳಿಕ ಟರ್ಕಿಯ ಹ್ಯಾತೆನಲ್ಲಿ ಅವಶೇಷಗಳಡಿ ಸಿಲುಕಿಕೊಂಡಿದ್ದ ಶ್ವಾನವನ್ನು ಜೀವಂತವಾಗಿ ರಕ್ಷಿಸಲಾಗಿದೆ.ಶ್ವಾನಕ್ಕೆ ಚಿಕಿತ್ಸೆಯನ್ನೂ ಸಿಬಂದಿ ನೀಡಿದ್ದಾರೆ.

100 ಬಾರಿ ಭೂಕಂಪ: ಕಳೆದ 2 ದಿನಗಳಲ್ಲಿ ಟರ್ಕಿಯಲ್ಲಿ 100 ಬಾರಿ ಭೂಕಂಪವಾಗಿದ್ದು, 81 ಬಾರಿ 4ರ ತೀವ್ರತೆ ಯಲ್ಲಿ, 20 ಬಾರಿ 5ರ ತೀವ್ರತೆಯಲ್ಲಿ ಭೂಕಂಪ ಸಂಭವಿಸಿವೆ.

Advertisement

ಶವಗಳ ಗುರುತಿಗೂ ಪರದಾಟ: ಹ್ಯಾತೆ ಆಸ್ಪತ್ರೆಯ ಹೊರಾಂಗಣದಲ್ಲಿ ನೂರಾರು ಶವಗಳನ್ನು ಇರಿಸಲಾಗಿದ್ದು, ಸಂಬಂಧಿಕರು ತಮ್ಮ ಕುಟುಂಬದವರ ಶವ ಹುಡಕಲು ಪರದಾಡುವಂತಾಗಿದೆ.

45 ಗಂಟೆ ಬಳಿಕ ಬಾಲಕ ಪಾರು
ಸಿರಿಯಾ ಮೂಲದ ಬಾಲಕ ಮೊಹಮ್ಮದ್‌ ಕಟ್ಟಡದ‌ಡಿ ಸಿಲುಕಿದ್ದು, 45 ಗಂಟೆಗಳ ಬಳಿಕ ಆತನನ್ನು ಹೊರತೆಗೆಯಲಾಗಿದೆ. ಅದಕ್ಕೂ ಮುನ್ನ ರಕ್ಷಣ ತಂಡ ಮಗುವಿಗೆ ಬಾಟಲ್‌ ಕ್ಯಾಪ್‌ನಲ್ಲಿ ನೀರು ಕುಡಿಸಿದ್ದು ಈ ದೃಶ್ಯ ಎಲ್ಲ ಕರುಳು ಹಿಂಡಿದಂತಾಗಿದೆ.

ತಂದೆಯನ್ನು ಬದುಕಿಸಿ ಎಂದಳು: ಕಟ್ಟಡದ ಅಡಿ ಸಿಲುಕಿದ್ದ ಬಾಲಕಿಯೊಬ್ಬಳನ್ನು ಸಿಬಂದಿ ರಕ್ಷಿಸಿದ್ದು ಆಕೆ ಹೊರಬರುತ್ತಿದ್ದಂತೆ ತನ್ನ ತಂದೆಯನ್ನು ಬದುಕಿಸಿ ಎಂದು ಕೇಳಿದ್ದಾಳೆ.ಆಕೆಯ ತಂದೆಯನ್ನೂ ಸಿಬಂದಿ ಹೊರತೆಗೆದಿದ್ದಾರೂ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ತಂದೆ-ಮಗಳು ಇಬ್ಬರೂ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next