ಬೆಂಗಳೂರು: ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಹೆಚ್ಚು-ಕಡಿಮೆ 6 ತಿಂಗಳ ನಂತರ “ನಮ್ಮ ಮೆಟ್ರೋ’ ಸುರಂಗ ಮಾರ್ಗದ ಡೇರಿ ವೃತ್ತದಿಂದ ವೆಲ್ಲಾರ ಜಂಕ್ಷನ್ ನಡುವೆ ಕಾಮಗಾರಿಗೆ ಚಾಲನೆ ದೊರಕಿದೆ. ಈ ಮೂಲಕ ಇಡೀ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಶುರುವಾಗಿದೆ. ಕೋವಿಡ್ 19 ಹಾವಳಿ ನಡುವೆಯೂ ಲಭ್ಯವಿರುವ ಸುಮಾರು 200 ಕಾರ್ಮಿಕರ ನೆರವಿನಿಂದ ಡೇರಿ ವೃತ್ತದಿಂದ ವೆಲ್ಲಾರ ಜಂಕ್ಷನ್ (ಪ್ಯಾಕೇಜ್-1) ನಡುವೆ ನೆಲದಡಿ ಬರುವ 2 ನಿಲ್ದಾಣ ನಿರ್ಮಾಣ ಭರದಿಂದ ಸಾಗಿದೆ.
ಮುಂದಿನ 40 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಡೇರಿ ವೃತ್ತ, ಲಕ್ಕಸಂದ್ರ (ಮೈಕೊ ಇಂಡಸ್ಟ್ರೀಸ್) ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ಜಾಗದಲ್ಲಿನ ಕಟ್ಟಡ ತೆರವು ಬಹುತೇಕ ಪೂರ್ಣಗೊಂಡಿದ್ದು, ನಿಲ್ದಾಣಗಳಿಗಾಗಿ ಭೂಮಿ ಅಗೆಯುವ ಕೆಲಸ ಶುರುವಾಗಿದೆ. ಇದಕ್ಕೂ ಮುನ್ನ ಪೈಲಿಂಗ್ ನಿರ್ಮಾಣ ನಡೆದಿದೆ. ಪ್ರತಿ ನಿಲ್ದಾಣಗಳಲ್ಲಿ ತಲಾ 600-700 ಪೈಲಿಂಗ್ ನಿರ್ಮಿಸಲಾಗುತ್ತದೆ. ಇವು ಸುಮಾರು 20 ಮೀಟರ್ ಆಳ ಅಗೆಯುವ ಭೂಮಿಗೆ ಪೂರಕವಾಗಿರಲಿದೆ.
ನೆಲದಡಿ ಇಳಿಯಲಿವೆ 2 ಟಿಬಿಎಂ: ಈ ಮಧ್ಯೆ ಡೇರಿ ವೃತ್ತದ ಬಳಿಯ ಸೌತ್‌ರ್‍ಯಾಂಪ್‌ನಲ್ಲಿ ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಕೆಳಗಿಳಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇಲ್ಲಿ ಒಟ್ಟಿಗೆ 2 ಯಂತ್ರಗಳನ್ನು ಕೆಳಗಿಳಿಸಲು ಉದ್ದೇಶಿಸಲಾಗಿದೆ. ಇವೆರಡೂ ಸೌತ್ ರ್‍ಯಾಂಪ್‌ನಿಂದ ಡೇರಿ ವೃತ್ತ, ಅಲ್ಲಿಂದ ಲಕ್ಕಸಂದ್ರ, ಲ್ಯಾಂಗ್‌ಫೋಡ್ ìವರೆಗೆ (ಸುಮಾರು 2.68 ಕಿ.ಮೀ.) ಸುರಂಗ ಮಾರ್ಗ ನಿರ್ಮಿಸಲಿವೆ.
ಇದಕ್ಕೆ ಪರ್ಯಾಯವಾಗಿ ವೆಲ್ಲಾರ ಜಂಕ್ಷನ್‌ನಿಂದ 1 ಟಿಬಿಎಂ ಲ್ಯಾಂಗ್ ಫೋರ್ಡ್ ಕಡೆಗೆ ಬರಲಿದೆ. ಇಡೀ ಮಾರ್ಗ ಸುಮಾರು 3.655 ಕಿ.ಮೀ. ಇದೆ. ಆದರೆ, ಈ ಯಂತ್ರ ವರ್ಷಾಂತ್ಯಕ್ಕೆ ಬಂದಿಳಿಯಲಿವೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. ಅಂದಹಾಗೆ, ಪ್ಯಾಕೇಜ್-1 ಅನ್ನು ಮುಂಬೈನ ಎಎಫ್ಕಾನ್ಸ್ ಇನ್ ಫ್ರಾಸ್ಟ್ರಕ್ಚರ್ ಲಿ., ಗುತ್ತಿಗೆ ಪಡೆದಿದೆ. ಡೇರಿ ವೃತ್ತದ ಸೌತ್‌ರ್‍ಯಾಂಪ್ ನಂತರ ಬರುವ ಸ್ವಾಗತ್ ರಸ್ತೆಯ ಎತ್ತರಿಸಿದ ಮಾರ್ಗದಿಂದ ವೆಲ್ಲಾರ ಜಂಕ್ಷನ್ ವರೆಗೆ .655 ಕಿ.ಮೀ. ಉದ್ದದಲ್ಲಿ 1,526.33 ಕೋಟಿ ವೆಚ್ಚದಲ್ಲಿಸುರಂಗ ನಿರ್ಮಾಣಗೊಳ್ಳುತ್ತಿದೆ.
2.68 ಕಿ.ಮೀ. ಉದ್ದದಲ್ಲಿ ಡೇರಿ ವೃತ್ತ, ಮೈಕೋ ಇಂಡಸ್ಟ್ರೀಸ್ ಮತ್ತು ಲ್ಯಾಂಗೊರ್ಡ್ ಟೌನ್ ಎಂಬ 3 ಸುರಂಗ ನಿಲ್ದಾಣ ಬರಲಿವೆ. ಟಿಬಿಎಂ ಸೇರಿ ಎಲ್ಲಲ್ಲಾ ವೆಚ್ಚವನ್ನೂ ಇದು ಒಳಗೊಂಡಿದೆ. ಟೆಂಡರ್ ಪೂರ್ಣಗೊಳ್ಳುತ್ತಿದ್ದಂತೆಯೇ ಗುತ್ತಿಗೆದಾರರಿಗೆ ಜಾಗ ಹಸ್ತಾಂತರಿಸಬೇಕಾಗುತ್ತದೆ. ಆದರೆ, 6 ತಿಂಗಳು ಕಳೆದರೂ ಲ್ಯಾಂಗ್‌ಫೋರ್ಡ್ ನಿಲ್ದಾಣಕ್ಕೆ ಅಗತ್ಯವಿರುವ ಜಾಗ ಕಗ್ಗಂಟಾಗಿಯೇ ಉಳಿದಿದ್ದು, ನಿಗಮಕ್ಕೆ ತಲೆನೋವಾಗಿ ಪರಿಣಮಿಸಿದೆ. ಸ್ವತಃ ಸಿಎಂ ಬಿಎಸ್‌ವೈ ಮೆಟ್ರೋ ಪ್ರಗತಿ ಪರಿಶೀಲನೆ ನಡೆಸಿ, ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಉಳಿದ 3 ಪ್ಯಾಕೇಜ್‌ಗಳಲ್ಲೂ ಸುರಂಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಟ್ಯಾನರಿ ರಸ್ತೆಯಿಂದ ನಾಗವಾರವರೆಗೆ 4.59 ಕಿ.ಮೀ. ಉದ್ದದಲ್ಲಿ 1,771.25 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಗೊಳ್ಳುತ್ತಿದೆ. ಅದೇ ರೀತಿ, ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರ 1,329.14 ಕೋಟಿ ಹಾಗೂ ಶಿವಾಜಿನಗರ-ಟ್ಯಾನರಿ ರಸ್ತೆ ನಡುವಿನ ಸುರಂಗ ಮಾರ್ಗ 1,299 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಒಟ್ಟಾರೆ ಇಡೀ ಮಾರ್ಗವನ್ನು 2024ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. 2014-15ರಲ್ಲಿ ಇದಕ್ಕೆ ಅನುಮೋದನೆ ದೊರಕಿತ್ತು.
ಯಂತ್ರಗಳಿಗಿಲ್ಲ ಅಡ್ಡಿ: ಭಾರತ-ಚೀನಾ ನಡುವಿನ ಸಂಘರ್ಷ ಟಿಬಿಎಂ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ತುಂಬಾ ಕಡಿಮೆ. ಏಕೆಂದರೆ, ಈ ಒಪ್ಪಂದ ಸುಮಾರು ದಿನಗಳ ಹಿಂದೆಯೇ ಆಗಿದೆ. ಈ ಸಂಬಂಧ ಎರಡೂ ದೇಶಗಳ ನಡುವೆ ಒಡಂಬಡಿಕೆ ಆಗಿದ್ದು, ಇದರಲ್ಲಿ ಅವನಿ ಮತ್ತು ಊರ್ಜಾ ಎಂಬ ಎರಡು ಟಿಬಿಎಂಗಳೂ ಬಂದಿಳಿದಿವೆ. ವಿಂಧ್ಯಾ ಮತ್ತು ಲವಿ ಬರಲಿವೆ. ಈಗಾಗಲೇ ಒಡಂಬಡಿಕೆ ಸಾಕಷ್ಟು ಮುಂದುವರಿದಿರುವುದರಿಂದ ಯಾವುದೇ ಪರಿಣಾಮ ಬೀರದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
* ವಿಜಯಕುಮಾರ್ ಚಂದರಗಿ