ಹರಪನಹಳ್ಳಿ: ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹರಪನಹಳ್ಳಿ ತಾಲೂಕಿನ ನಾನಾ ಗ್ರಾಮಗಳ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಬಹು ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಆದರೆ ಪ್ರಸ್ತುತ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಯೋಜನೆ ಘೋಷಣೆ ಮಾಡಿರುವುದರಿಂದ ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬರಡು ಭೂಮಿ ಹಸಿರಾಗಿಸುವುದು, ಅಂತರ್ಜಲ ವೃದ್ಧಿಸುವುದು, ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ತಾಲೂಕಿನ 50 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರುತುಂಬಿಸಲು 256 ಕೋಟಿ ರೂ. ಯೋಜನೆಗೆ ಇದೀಗ ಗ್ರೀನ್‌ಸಿಗ್ನಲ್ ಸಿಕ್ಕಿದೆ. ಆರಂಭದಲ್ಲಿ 2007- 08 ಸಾಲಿನಲ್ಲಿ 60 ಕೆರೆಗಳಿಗೆ ನೀರು ತುಂಬಿಸಲು ಒಟ್ಟು 131 ಕೋಟಿ ರೂ. ಕ್ರಿಯಾಯೋಜನೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಯಿತು.
2010-11ಸಾಲಿನಲ್ಲಿ ಪರಿಷ್ಕರಣೆಗೊಂಡು 151 ಕೋಟಿ ರೂ. ಪುನಃ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ನಂತರ 2011ರಲ್ಲಿ ಯೋಜನಾ ವರದಿ ತಯಾರಿಸಲು ಹಾಗೂ ಕೆರೆಗಳ ಸರ್ವೇಗೆ ಟೆಂಡರ್ ಕರೆಯಲಾಯಿತು. 2015ರಲ್ಲಿ ಸಭೆ ನಡೆದು ತತ್ವರಿತವಾಗಿ ಯೋಜನೆ ಕೆಲಸ ಮುಗಿಸುವಂತೆ ಸರ್ಕಾರ ಸೂಚಿಸಿದೆ. ಆರಂಭದಲ್ಲಿ 60 ಕೆರೆಗಳು ಎಂದು ನಮೂದಿಸಲಾಗಿತ್ತೇ ಹೊರತು ಕೆರೆಗಳ ಹೆಸರು ದಾಖಲಿಸಿದ್ದಿಲ್ಲ.
ಹಾಗಾಗಿ ಅಂತಿಮವಾಗಿ ಕೆರೆಗಳ ಸರ್ವೇ ನಡೆದು ಒಟ್ಟು 50 ಕೆರೆಗಳ 256 ಕೋಟಿ ರೂ. ನಿಗದಿಧಿಗೊಳಿಸಲಾಗಿದೆ. ತಾಲೂಕಿನ ಹಲುವಾಗಲು-ಗರ್ಭಗುಡಿ ಬಳಿ ಹರಿಯುವ ತುಂಗಭದ್ರಾ ನದಿ ಪಾತ್ರದ ಚಿಕ್ಕಬಿದರಿ ಗ್ರಾಮದ ಬಳಿ ಜಾಕ್ವೆಲ್ ನಿರ್ಮಿಸಿ, ಅಲ್ಲಿಂದ ಪೈಪ್‌ಲೈನ್ ಮೂಲಕ 20 ಕಿ.ಮೀ ವ್ಯಾಪ್ತಿಯ ಗುಂಡಗತ್ತಿ ಗ್ರಾಮದ ಬಳಿ ನೀರು ಶೇಖರಣೆ ಘಟಕ ನಿರ್ಮಿಸಿ ಅಲ್ಲಿಂದ ಹರಪನಹಳ್ಳಿ ಬಳಿ ಶೇಖರಣೆಯಾಗುತ್ತದೆ. ನಂತರ ಇಲ್ಲಿಂದ ಕಂಚಿಕೇರಿ ಸೇರಿದಂತೆ ವಿವಿಧ ಭಾಗಗಳಿಗೆ ನೀರು ಹರಿಸುವ ಉದ್ದೇಶವಿದೆ.
ಯಾವ ಯಾವ ಕೆರೆಗಳಿಗೆ ನೀರು?: ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಹರಪನಹಳ್ಳಿ ಹಿರೇಕೆರೆ, ತಿಪ್ಪನಾಯಕನಹಳ್ಳಿ, ಮುತ್ತಿಗಿ, ಹರಪನಹಳ್ಳಿ ಸಣ್ಣಕೆರೆ, ಯಲ್ಲಾಪುರ, ಮಾದಾಪುರ, ಅಲ್ಮರಸಿಕೆರೆ, ಮಾಡ್ಲಿಗೇರೆ, ಚಿಕ್ಕಳ್ಳಿ, ವಡ್ಡಿನದಾದಾಪುರ, ಶೃಂಗಾರದೋಟ, ಬಾಗಳಿ, ಕಲ್ಲಹಳ್ಳಿ, ಯಲ್ಲಾಪುರತಾಂಡಾ, ತೋಗರಿಕಟ್ಟೆ, ಹುಲಿಕಟ್ಟಿ, ಕನ್ನನಾಯಕನಹಳ್ಳಿ, ಚಿರಸ್ತಹಳ್ಳಿ, ಅಲಗಿಲವಾಡ, ನೀಲಗುಂದ, ಕುಂಚೂರು,
ಹಲುವಾಗಲು, ತಲವಾಗಲು, ಗುಂಡಗತ್ತಿ, ಯಡಿಹಳ್ಳಿ, ಬೆಣ್ಣೆಹಳ್ಳಿ, ಕ್ಯಾರಕಟ್ಟಿ, ತೌಡೂರು, ಬೆಂಡಿಗೆರೆ, ಬಿಕ್ಕಿಕಟ್ಟಿ, ಕಂಚಿಕೆರೆ, ಹಳ್ಳಿಕೆರೆ, ಕನಕನಬಸಾಪುರ, ಅರಸೀಕೆರೆ, ನಿಚ್ಚವ್ವನಹಳ್ಳಿ, ಹಿಕ್ಕಿಂಗೆರೆ, ಮಜ್ಜಿಗೆರೆ, ಕೆ.ಕಲ್ಲಹಳ್ಳಿ, ಉದ್ದಗಟ್ಟಿ, ಬೇವಿನಹಳ್ಳಿ, ಸತ್ತೂರು, ತೆಲಿಗಿ, ನಾರಾಯಣಪುರ, ಕಾನಹಳ್ಳಿ, ಅರಸನಾಳು, ಮದರಿಕಟ್ಟೆಕೆರೆ, ನಾಗಲಾಪುರ ಸೇರಿದಂತೆ ವಿವಿಧ ಕೆರೆಗಳು ಮೈದುಂಬಲಿವೆ.
ಸತತ ಬರಕ್ಕೆ ತುತ್ತಾಗುತ್ತಿರುವ ಹರಪನಹಳ್ಳಿ ತಾಲೂಕು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ಅಂತರ್ಜಲ ಪಾತಾಳ ಸೇರಿದೆ. ಬೇಸಿಗೆಯಲ್ಲಷ್ಟೆ ಅಲ್ಲ, ಮಳೆಗಾಲದಲ್ಲೂ ನೀರಿಗೆ ಪರದಾಟ ನಡೆಸುವಂತಾಗಿದೆ. ಹೇರಳ ಕೃಷಿ ಭೂಮಿ ಇದ್ದರೂ ಏನನ್ನೂ ಬೆಳೆಯಲಾಗದ ಪರಿಸ್ಥಿತಿಯಿದೆ.
ಒಂದರ ಮೇಲೊಂದು ಕೊಳವೆಬಾವಿ ಕೊರೆಯಿಸಿ ಲಕ್ಷಾಂತರ ರೂ. ವ್ಯಯಿಸಿದ್ರೂ ನೀರು ಸಿಗುತ್ತಿಲ್ಲ. ಕೆರೆಗೆ ನೀರು ತುಂಬಿರೋದ್ರಿಂದ ದನ ಕರುಗಳಿಗೆ ನೀರು, ಬತ್ತಿದ್ದ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಹೆಚ್ಚಳವಾಗುತ್ತದೆ. ಇದರಿಂದ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ದೊರೆಯುತ್ತದೆ.
* ಎಸ್.ಎನ್.ಕುಮಾರ್ ಪುಣಬಗಟ್ಟಿ