ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ನದಿ ಪಾತ್ರದ ಹಳ್ಳಿಗಳ ಜನತೆಗೆ ಕೊಪ್ಪಳ ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದೆ.
ಈ ಜಲಾಶಯದ ಸಂಗ್ರಹಣಾ ಸಾಮರ್ಥ್ಯ 133 ಟಿಎಂಸಿ ಇದ್ದು, ಡ್ಯಾಂನಲ್ಲಿ 33 ಟಿಎಂಸಿ ಹೂಳು ತುಂಬಿರುವುದರಿಂದ ಸದ್ಯಕ್ಕೆ ಡ್ಯಾಂನ ಸಂಗ್ರಹಣಾ ಸಾಮರ್ಥ್ಯ 100 ಟಿಎಂಸಿಗೆ ಬಂದು ತಲುಪಿದೆ.
ಭಾನುವಾರದ ಅಂತ್ಯಕ್ಕೆ ಡ್ಯಾಂನಲ್ಲಿ 97.777 ಟಿಎಂಸಿ ನೀರು ಸಂಗ್ರವಿದೆ. ಹೀಗಾಗಿ, ಡ್ಯಾಂ ಭರ್ತಿಗೆ ಇನ್ನು 3 ಟಿಎಂಸಿ ಮಾತ್ರವೇ ಬಾಕಿ ಇದೆ. ಡ್ಯಾಂ ಒಳ ಹರಿವು 33737 ಕ್ಯೂಸೆಕ್ಸ್ ನಷ್ಟಿದೆ.
ಹಾಗಾಗಿ ಡ್ಯಾಂ ಭರ್ತಿಗೆ ಕ್ಷಣಗಣನೆ ಶುರುವಾಗಿದ್ದು ಯಾವುದೇ ಕ್ಷಣದಲ್ಲಾದರೂ ಡ್ಯಾಂ ನಿಂದ ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುವುದು ಎಂದು ತುಂಗಭದ್ರಾ ನೀರಾವರಿ ಇಲಾಖೆ ಸೂಚನೆ ನೀಡಿದೆ.
ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿ ಆಂಧ್ರಪ್ರದೇಶದ ಜಿಲ್ಲೆಗಳ ಡಿಸಿಗಳಿಗೂ ಸೂಚನೆ ನೀಡಿದ್ದು ಯಾವುದೇ ಕ್ಷಣದಲ್ಲಾದರೂ ಡ್ಯಾಂ ನಿಂದ ನದಿ ಪಾತ್ರಕ್ಕೆ ನೀರು ಹರಿಬಿಡಲಾಗುವುದು. ಹಾಗಾಗಿ ನದಿ ಪಾತ್ರದ ಬಳಿ ಇರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಈ ಮೂಲಕ ಸೂಚನೆ ನೀಡಲಾಗಿದೆ.
ಕೊಪ್ಪಳ ಡಿಸಿ ವಿಕಾಸ್ ಕಿಶೋರ್ ಅವರು ಈಗಾಗಲೇ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 40 ಹಳ್ಳಿಗಳ ಜನರಿಗೆ ಸೂಚನೆ ನೀಡಿ, ಡಂಗೂರ ಸಾರಿಸಿದ್ದಾರೆ. ಸದ್ಯಕ್ಕೆ ನದಿ ಪಾತ್ರದ ಬಳಿ ತೆರಳದಂತೆಯೂ ಜಿಲ್ಲಾಧಿಕಾರೊಯವರು ಆದೇಶ ಹೊರಡಿಸಿದ್ದಾರೆ.