Advertisement

ತುಮಕೂರು ಬಳಿ ರಸ್ತೆ ಅಪಘಾತ : ಕಟೀಲು ಅರ್ಚಕ ಪುತ್ರನ ಸಹಿತ ಇಬ್ಬರ ಸಾವು

04:10 AM Jul 26, 2018 | Karthik A |

ಕಿನ್ನಿಗೋಳಿ: KSRTC ಬಸ್‌ ಮತ್ತು ಕ್ಯಾಂಟರ್‌ ನಡುವೆ ಸಿಲುಕಿದ ಕಾರಿನಲ್ಲಿದ್ದ ದಕ್ಷಿಣ ಕನ್ನಡ ಮೂಲದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ತಾಳೆಕೆರೆ ಕ್ರಾಸ್‌ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಕಟೀಲು ದುರ್ಗಾಪರಮೇಶ್ವರೀ ದೇಗುಲದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅವರ ಪುತ್ರ ಶ್ರೀನಿಧಿ ಆಸ್ರಣ್ಣ (21) ಹಾಗೂ ತುಮಕೂರಿನಲ್ಲಿ ಹೊಟೇಲ್‌ ಉದ್ಯಮಿಯಾಗಿರುವ ಗುರುಪುರ ಕೈಕಂಬ ಮೂಲದ ಗುರುಪ್ರಕಾಶ್‌ – ವಿದ್ಯಾಲಕ್ಷ್ಮೀ ದಂಪತಿಯ ಪುತ್ರ ಪ್ರಜ್ವಲ್‌ (20) ಮೃತಪಟ್ಟವರು.

Advertisement

ಶ್ರೀನಿಧಿ ಅವರು ರವಿವಾರ ಕಟೀಲಿನಿಂದ ಬೆಂಗಳೂರಿಗೆ ಹೋಗಿದ್ದರು.ಮಂಗಳವಾರ ರಾತ್ರಿ ಗೆಳೆಯ ಪ್ರಜ್ವಲ್‌ ಅವರ ಸಹೋದರ ಪ್ರತೀಕ್‌ ನನ್ನು ಪ್ರಜ್ವಲ್‌ ಅವರ ಕಾರಿನಲ್ಲಿ ತುಮಕೂರಿಗೆ ಬಿಟ್ಟು ವಾಪಸಾಗುವಾಗ ಅವಘಡ ಸಂಭವಿಸಿತು. ಶ್ರೀನಿಧಿ ಆಸ್ರಣ್ಣ ಮತ್ತು ಪ್ರಜ್ವಲ್‌ ಸ್ಥಳದಲ್ಲೇ ಸಾವನ್ನಪ್ಪಿದ್ದು ಜತೆಗಿದ್ದ ಶರತ್‌ ಉಡುಪ ಮತ್ತು ಶರತ್‌ ಭಂಡಾರಿ ಗಂಭೀರ ಗಾಯಗೊಂಡಿದ್ದಾರೆ.

ಶ್ರೀನಿಧಿ ನಿಧನದ ಪ್ರಯುಕ್ತ ಕಟೀಲು ದೇಗುಲಕ್ಕೆ ಸಂಬಂಧಿಸಿದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ರಜೆ ಸಾರಲಾಗಿತ್ತು. ಕಟೀಲು ಪೇಟೆಯ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದರು. ರಿಕ್ಷಾ, ಕಾರು ಚಾಲಕರು ಬಾಡಿಗೆ ಮಾಡದೆ ಶೋಕಾಚರಣೆಯಲ್ಲಿ ಪಾಲ್ಗೊಂಡರು. ಬುಧವಾರ ಸಂಜೆ 6 ಗಂಟೆಗೆ ಮಿತ್ತಬೈಲ್‌ ನ ಅವರ ಮನೆಯಲ್ಲಿ ಅಂತ್ಯಸಂಸ್ಕಾರ ನಡೆದಿದ್ದು, ಉಭಯ ಜಿಲ್ಲೆಗಳ ಹೆಚ್ಚಿನ ಜನ ಪ್ರತಿನಿಧಿಗಳು, ಯಕ್ಷಗಾನ ಮೇಳಗಳ ಯಜಮಾನರು, ಕಲಾವಿದರು ಭಾಗವಹಿಸಿದ್ದರು.

ಪ್ರತಿಭಾವಂತ ವಿದ್ಯಾರ್ಥಿ ಶ್ರೀನಿಧಿ ಆಸ್ರಣ್ಣ


ಕಟೀಲು ದೇಗುಲದ ಅರ್ಚಕ ಆಸ್ರಣ್ಣ ಹರಿನಾರಾಯಣ ದಾಸ ಆಸ್ರಣ್ಣ ಅವರ ಇಬ್ಬರು ಮಕ್ಕಳಲ್ಲಿ ಹಿರಿಯವನಾದ ಶ್ರೀನಿಧಿ ಆಸ್ರಣ್ಣ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ಕಾಲೇಜಿನಲ್ಲಿ ಪೂರೈಸಿದ್ದು ಪ್ರಸ್ತುತ ನಿಟ್ಟೆಯಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿದ್ದರು. ಬಾಲ್ಯದಲ್ಲಿಯೇ ಚುರುಕು ಸ್ವಭಾವದವರಾದ ಅವರು ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರತಿಭಾವಂತರಾಗಿದ್ದರು. ತಂದೆ ನಡೆಸುತ್ತಿದ್ದ ಶ್ರೀ ದುರ್ಗಾ ಮಕ್ಕಳ ಮೇಳದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳ ತರಬೇತಿ ಪಡೆದು ಉತ್ತಮ ಚೆಂಡೆವಾದಕ ಹಾಗೂ ಬಣ್ಣದ ವೇಷಧಾರಿಯಾಗಿದ್ದರು. ಕಬಡ್ಡಿಯಲ್ಲಿ ರಾಜ್ಯ ಮಟ್ಟದ ಆಟಗಾರರಾಗಿದ್ದರು. ಬಜಪೆಯ ಜಾಗೋ ಫ್ರೆಂಡ್ಸ್‌ ತಂಡದ ಪ್ರಮುಖ ಆಟಗಾರರಾಗಿದ್ದರು.

ಚುರುಕುಮತಿ ಪ್ರಜ್ವಲ್‌


ಮೃತ ಪ್ರಜ್ವಲ್‌ ಅವರು ಗುರುಪುರ ಕೈಕಂಬದ ಶ್ರೀರಾಮ್‌ ಹೊಟೇಲ್‌ ಮಾಲಕ ಹರಿರಾವ್‌ ಅವರ ಪುತ್ರಿ ವಿದ್ಯಾಲಕ್ಷ್ಮೀ ಅವರ ಪುತ್ರ. ಗಾಯಾಳು ಶರತ್‌ ಅವರು ಹರಿರಾವ್‌ ಅವರ ಮತ್ತೋರ್ವ ಪುತ್ರಿ ಪ್ರೇಮಲತಾ ಅವರ ಪುತ್ರ. ವಿದ್ಯಾಲಕ್ಷ್ಮೀ ಅವರನ್ನು ಪ್ರಸ್ತುತ ತುಮಕೂರಿನಲ್ಲಿ ಹೊಟೇಲ್‌ ಉದ್ಯಮಿಯಾಗಿರುವ ಮಂಜೇಶ್ವರ ಮೂಲದ ಗುರುಪ್ರಕಾಶ್‌ ಬಳ್ಳಕ್ಕುರಾಯ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಪ್ರಜ್ವಲ್‌ ಚುರುಕಿನ ವಿದ್ಯಾರ್ಥಿಯಾಗಿದ್ದು ಅಲ್ಲೇ ವಿದ್ಯಾರ್ಜನೆ ನಡೆಸುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next