Advertisement

ತುಮಕೂರು ನಗರ: ಬಿಜೆಪಿ-ಕಾಂಗ್ರೆಸ್‌ನಲ್ಲಿ ಪೈಪೋಟಿ ಜೋರು

01:27 AM Mar 06, 2023 | Team Udayavani |

ತುಮಕೂರು: ಶೈಕ್ಷಣಿಕ ನಗರದಲ್ಲಿ ಟಿಕೆಟ್‌ ಫೈಟ್‌ ಜೋರು ಜೋರಾಗಿದೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಉದ್ದನೆಯ ಪಟ್ಟಿ ಇದೆ. ಆದರೆ ಜೆಡಿಎಸ್‌ ಪಕ್ಷದಲ್ಲಿ ಅಭ್ಯರ್ಥಿಯ ಘೋಷಣೆ ಯಾಗಿದೆ, ಬಿಜೆಪಿಯಲ್ಲಿ ಹಾಲಿ ಶಾಸಕರ ವಿರುದ್ಧವೇ ಮಾಜಿ ಸಚಿವರು ಟಿಕೆಟ್‌ ನನಗೇ ಬೇಕು ಎಂದು ಪಕ್ಷದಲ್ಲಿ ಪಟ್ಟು ಹಿಡಿದಿದ್ದಾರೆ.

Advertisement

ಕಾಂಗ್ರೆಸ್‌ನಲ್ಲಿ 7 ಜನ ಆಕಾಂಕ್ಷಿಗಳು: ತುಮಕೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಎರಡು ಲಕ್ಷ ಹಣ ಕಟ್ಟಿ ಟಿಕೆಟ್‌ಗಾಗಿ ಏಳು ಜನ ಅರ್ಜಿ ಹಾಕಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಾಜಿ ಶಾಸಕ ಡಾ.ಎಸ್‌.ರಫೀಕ್‌ ಅಹಮದ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶಶಿಹುಲಿಕುಂಟೆ ಮಠ್ , ಕೆಪಿಸಿಸಿ ಮಾಜಿ ಕಾರ್ಯದರ್ಶಿ ಯಕ್ಬಾಲ್‌ ಅಹಮದ್‌, ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್‌ ಅಹಮದ್‌, ಕಾಂಗ್ರೆಸ್‌ ಆರೋಗ್ಯ ಘಟಕದ ಅಧ್ಯಕ್ಷೆ ಡಾ.ಫ‌ಹ್ರಾನಾ ಬೇಗಂ, ಲಾಯರ್‌ ಬಾಬು ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಜೆಡಿಎಸ್‌ ಟಿಕೆಟ್‌ ಪಡೆಯಲು ಯತ್ನಿಸಿ ವಿಫ‌ಲರಾಗಿರುವ ಅಟಿಕಾ ಬಾಬು ಕಾಂಗ್ರೆಸ್‌ ಟಿಕೆಟ್‌ ತರುತ್ತೇನೆ ಎಂದು ಪ್ರಚಾರ ಮಾಡುತ್ತಿದ್ದಾರೆ.

ಇವರಲ್ಲಿ ಮಾಜಿ ಶಾಸಕ ಡಾ.ಎಸ್‌.ರಫೀಕ್‌ ಅಹಮದ್‌, ಅತೀಕ್‌ ಅಹಮದ್‌, ಯಕ್ಬಾಲ್‌ ಅಹಮದ್‌, ಶಶಿಹುಲಿಕುಂಟೆ ಮಠ್ , ಮತ್ತು ಎಚ್‌.ಸಿ.ಹನುಮಂತಯ್ಯ ಜೊತೆಗೆ ಅಟ್ಟಿಕಾ ಬಾಬು ಟಿಕೆಟ್‌ಗಾಗಿ ತೀವ್ರವಾಗಿ ಸೆಣಸುತ್ತಿದ್ದಾರೆ. ಯಾರಿಗೆ ಟಿಕೆಟ್‌ ಸಿಗುತ್ತದೆ ಎನ್ನುವುದು ಕುತೂಹಲವಾಗಿದ್ದು ಅಟಿಕಾ ಬಾಬು ನನಗೇ ಟಿಕೆಟ್‌, ನಾನೇ ತುಮಕೂರು ಎಂಎಲ್‌ಎ ಎಂದು ಪ್ರಚಾರ ಮಾಡುತ್ತಿದ್ದಾರೆ, ಇದರಿಂದ ಕಾಂಗ್ರೆಸ್‌ನವರು ಯಾರು ಈ ಅಟಿಕಾ ಬಾಬು? ನಮ್ಮ ಪಕ್ಷದ ಸದಸ್ಯರೇ ಅಲ್ಲ ಎಂದು ಹೇಳ ತೊಡಗಿದ್ದಾರೆ.

ಬಿಜೆಪಿಯಲ್ಲಿಯೂ ತೀವ್ರಗೊಂಡ ಟಿಕೆಟ್‌ ಫೈಟ್‌: ಇನ್ನು ಬಿಜೆಪಿಯಲ್ಲಿಯೂ ಟಿಕೆಟ್‌ ಫೈಟ್‌ ಜೋರಾಗಿ ಇದೆ. ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮತ್ತು ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ಇಬ್ಬರೂ ಟಿಕೆಟ್‌ಗಾಗಿ ಕಾದಾಟ ಆರಂಭಿಸಿದ್ದಾರೆ. ಬಿಜೆಪಿ ಮುಖಂಡರಲ್ಲಿ ಈ ಇಬ್ಬರೂ ನಾಯಕರೂ ನಮಗೇ ಟಿಕೆಟ್‌ ನೀಡಿ ಎಂದು ಒತ್ತಡ ಹೇರುತ್ತಿದ್ದಾರೆ. ಈ ನಡುವೆ ಹಿಂದುಳಿದ ನಾಯಕರಾಗಿ ಗುರುತಿಸಿಕೊಂಡಿರುವ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎಂ.ಆರ್‌ ಹುಲಿನಾಯ್ಕರ್‌ ಮತ್ತು ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಉದ್ಯಮಿ ಎನ್‌.ಎಸ್‌.ಜಯಕುಮಾರ್‌ ಕೂಡಾ ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ.

ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ನಾನು ಜನಸಂಘದಿಂದ ಬಂದವನು, ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋದವನು, ಅಂದಿನಿಂದ ಇಂದಿನ ವರೆಗೂ ಸಂಘ ಪರಿವಾರದಲ್ಲಿ ಇದ್ದು ಬಿಜೆಪಿಯನ್ನು ಜಿಲ್ಲೆಯಲ್ಲಿ ಕಟ್ಟಲು ಶ್ರಮಹಾಕಿದ್ದೇನೆ. ತುಮಕೂರು ಶಾಸಕನಾಗಿ, ಸಚಿವನಾಗಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ, ಪಕ್ಷದ ವರಿಷ್ಟರಲ್ಲಿ ಟಿಕೆಟ್‌ ಕೇಳುತ್ತಿದ್ದೇನೆ. ಟಿಕೆಟ್‌ ನನಗೇ ನೂರಕ್ಕೆ ನೂರರಷ್ಟು ದೊರಕುತ್ತದೆ, ಒಂದು ಪಕ್ಷ ಪಕ್ಷದ ಟಿಕೆಟ್‌ ದೊರಕದಿದ್ದರೂ ನಾನು ಜೋಳಿಗೆ ಹಾಕಿಕೊಂಡು ಮತದಾರರ ಮನೆ ಬಾಗಿಲಿಗೆ ಹೋಗುವುದು ಖಚಿತ ಎಂದು ಹೇಳುತ್ತಿದ್ದಾರೆ.

Advertisement

ಅದೇ ರೀತಿ ನಾನು ಹಾಲಿ ಶಾಸಕ ಜನಪರ ಕೆಲಸ ಮಾಡಿದ್ದೇನೆ. ಸರಕಾರಕ್ಕೆ ಪಕ್ಷಕ್ಕೆ ಮುಜುಗರ ಆಗುವಂತಹ ನಡವಳಿಕೆ ನನ್ನದಲ್ಲ. ಕ್ಷೇತ್ರದ ಮತದಾರರ ಒಲವೂ ನನ್ನ ಪರ ಇದೆ. ಪಕ್ಷ ನನ್ನನ್ನು ಗುರುತಿಸಿ ಟಿಕೆಟ್‌ ನೀಡುತ್ತದೆ ಎನ್ನುವ ವಿಶ್ವಾಸ ಹೊಂದಿದ್ದಾರೆ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌.

ಜೆಡಿಎಸ್‌ನಿಂದ ಎನ್‌. ಗೋವಿಂದರಾಜ್‌: ಜೆಡಿಎಸ್‌ನಲ್ಲಿ ಯಾವುದೇ ವಿವಾದ ಇಲ್ಲದೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಗೆಳೆಯರ ಬಳಗದ ಎನ್‌.ಗೋವಿಂದರಾಜ್‌ ಅವರ ಹೆಸರನ್ನು ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಘೋಷಣೆ ಮಾಡಿದ್ದು ಅವರು ಈಗಾಗಲೇ ಪ್ರಚಾರ ಆರಂಭ ಮಾಡಿದ್ದಾರೆ.

ಬಿಜೆಪಿಯಲ್ಲಿ ಸೊಗಡು ಎಸ್‌. ಶಿವಣ್ಣ ಬಂಡಾಯ ಸಾಧ್ಯತೆ?
ಬಿಜೆಪಿ-ಕಾಂಗ್ರೆಸ್‌ನಲ್ಲಿ ಟಿಕೆಟ್‌ ಫೈಟ್‌ ಜೋರಾಗಿದ್ದರೂ, ಕಾಂಗ್ರೆಸ್‌ನಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಬಂಡಾಯ ಏಳುವುದು ಕಡಿಮೆ ಇದೆ. ಆದರೆ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಬಿಜೆ ಪಿಯಲ್ಲಿ ಬಂಡಾಯದ ಸುಳಿವು ಕಾಣಿಸುತ್ತಿದೆ. ಹಾಲಿ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ನಾನು ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದೇನೆ, ನನಗೇ ಟಿಕೆಟ್‌ ಎನ್ನುತ್ತಿದ್ದಾರೆ. ಅದೇ ರೀತಿ ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ನಾನು 20 ವರ್ಷ ಶಾಸಕನಾಗಿ ಸಚಿವನಾಗಿ ಕೆಲಸ ಮಾಡಿದ್ದೇನೆ ನನಗೇ ಟಿಕೆಟ್‌ ಎಂದು ಹೇಳಿ ಇಬ್ಬರೂ ಪ್ರಚಾರ ಆರಂಭ ಮಾಡಿದ್ದಾರೆ. ಶಿವಣ್ಣ ಅವರಿಗೆ ಟಿಕೆಟ್‌ ಸಿಗದಿದ್ದರೆ ಬಂಡಾಯ ಹೇಳವ ಸಾಧ್ಯತೆ ಇದೆ ಎನ್ನಲಾಗಿದೆ.

-ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next