ಮಂಗಳೂರು: ತುಳು ಭಾಷೆ, ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಾಮಾಣಿಕ ಪ್ರಯತ್ನಗಳು ಅನಿವಾರ್ಯವಾಗಿವೆೆ. ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನಕ್ಕೆ ಧರ್ಮಸ್ಥಳದ ಡಾ| ಹೆಗ್ಗಡೆ ಕೂಡ ಕೈಜೋಡಿಸಿದ್ದು, ಜತೆಗೆ ಪ್ರಶಸ್ತಿ ಪ್ರದಾನಗಳಂತಹ ಸಮಾರಂಭಗಳು ಪೂರಕವಾಗಲಿವೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಅವರು ಶನಿವಾರ ತುಳುಭವನದಲ್ಲಿ ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತ ನಾಡಿದರು. ಶಾಸಕ ಜೆ.ಆರ್. ಲೋಬೊ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿ’ಸೋಜಾ, ರಾಜ್ಯ ಅಲ್ಪಸಂಖ್ಯಾಕ ನಿಗಮದ ಅಧ್ಯಕ್ಷ ಗಫೂರ್, ಬ್ಲೋಸಂ ಫೆರ್ನಾಂಡಿಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಿ.ಎಂ. ರವಿಕುಮಾರ್ ಉಪಸ್ಥಿತರಿದ್ದರು.
ಮುದ್ದು ಮೂಡುಬೆಳ್ಳೆ (ತುಳು ಸಾಹಿತ್ಯ), ಕೆ. ಆನಂದ ಶೆಟ್ಟಿ (ತುಳು ನಾಟಕ), ತಮ್ಮ ಲಕ್ಷ್ಮಣ (ತುಳು ಸಿನೆಮಾ) ಅವರಿಗೆ ಗೌರವ ಪ್ರಶಸ್ತಿ ಹಾಗೂ ಯೋಗೀಶ್ ರಾವ್ ಚಿಗುರುಪಾದೆ ಅವರ “ಒಯಿಲ್’ (ತುಳು ಕವನ), ಶಶಿರಾಜ್ ಕಾವೂರು ಅವರ “ಬರ್ಬರಿಕ’ (ತುಳು ನಾಟಕ ವಿಭಾಗ) ಕೃತಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ, 3 ವರ್ಷ ಅಕಾಡೆಮಿ ಯಲ್ಲಿ ದುಡಿದು, 27 ಪುಸ್ತಕಗಳ ಪ್ರಕಾಶನ, 12 ಮದಿಪು ಸಂಚಿಕೆ ಯನ್ನು ನಮ್ಮ ಈ ಸಮಿತಿ ಹೊರ ತಂದಿದೆ. ತುಳು ಮಿನದನ, ಲಿಪಿ, ವಿಕಿಪೀಡಿಯ, ತುಳು ಪಠ್ಯಗಳ ಮೂಲಕ ಭಾಷೆಯ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದೇವೆ ಎಂದರು.
ಸದಸ್ಯರಾದ ಮೋಹನ್ ಕೊಪ್ಪಳ, ಕೆ.ಟಿ. ವಿಶ್ವನಾಥ, ಡಿ.ಎಂ. ಕುಲಾಲ್, ರಘು ಇಡಿRದು ಹಾಗೂ ರೂಪಕಲಾ ಆಳ್ವ ಸಮ್ಮಾನ ಪತ್ರ ವಾಚಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಸದಸ್ಯ ದುರ್ಗಾ ಪ್ರಸಾದ್ ರೈ ಕುಂಬ್ರ ಕಾರ್ಯಕ್ರಮ ನಿರ್ವಹಿಸಿದರು.