ಬಂಟ್ವಾಳ: ವಿಶ್ವದ ಪ್ರತಿಷ್ಠಿತ ಬ್ರಿಟಿಷ್ ಮ್ಯೂಸಿಯಂನ ಕ್ಯುರೇಟರ್ ಡಾ| ಡಾನಿಯಲ್ ಡಿ. ಸಿಮೊನ್ ಅವರು ಸೋಮವಾರ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಎಲ್ಲ ವಿಭಾಗಗಳನ್ನು ವೀಕ್ಷಿಸಿದ ಅವರು ತುಳು ಬದುಕನ್ನು ಸಮಗ್ರ ವಾಗಿ ಕಟ್ಟಿಕೊಡುವ ಅದ್ಭುತ ಸಂಗ್ರಹಾಲಯವೆಂದು ಶ್ಲಾಘಿಸಿದರು. ಈ ಸಂಗ್ರಹಾಲಯದಲ್ಲಿರುವ ಪ್ರತಿಯೊಂದು ಟೆರ್ರಕೋಟ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ನಡೆಸಿದರು. ಸುಮಾರು 400 ವರ್ಷಗಳ ಇತಿಹಾಸವಿರುವ ಪಂಜುರ್ಲಿ ದೈವದ
ಮಣ್ಣಿನ ಮೂರ್ತಿಗಳನ್ನು ಪರಿಶೀಲಿಸಿ ದರು. ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು ಅಳುಪರ ಕುರಿತ ವಿವರಣೆ ಇರುವ ಭಾಸ್ಕರಾನಂದ ಸಾಲೆತ್ತೂರರ “ಏನ್ಶಿಯಂಟ್ ಕರ್ನಾಟಕ ಹಿಸ್ಟ್ರಿ ಆಫ್ ತುಳುವಾಸ್’ ಹಾಗೆಯೇ ಪಾದೂರು ಗುರುರಾಜ ಭಟ್ಟರ ಮತ್ತು ಡಾ| ಕೆ.ವಿ. ರಮೇಶರ ಗ್ರಂಥಗಳನ್ನು ವಿಮರ್ಶಿಸಿದರು.
ವಿದ್ಯಾರ್ಥಿ-ವಿದ್ವಾಂಸರೊಂದಿಗೆ ಸಂವಾದ ಈ ಸಂದರ್ಭ ಕೇಂದ್ರದೊಂದಿಗೆ ಒಡಂಬಡಿಕೆ (ಎಂಒಯು) ಹೊಂದಿರುವ ಉಜಿರೆ ಎಸ್‌ಡಿಎಂ ಕಾಲೇಜು, ಪುತ್ತೂರು ವಿವೇಕಾನಂದ ಕಾಲೇಜು, ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜು, ಹಾಗೂ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಗಳೊಂದಿಗೆ “ರಿಲೆವೆನ್ಸ್ ಆಫ್ ರಿಜಿನಲ್ ಮ್ಯೂಸಿಯಮ್ಸ್’ ಎಂಬ ವಿಷಯದ ಮೇಲೆ ಸಂವಾದ ನಡೆಸಿದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿ ದ್ದರು. ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ್ ರೈ ಮತ್ತು ಡಾ| ಎಂ. ಪ್ರಭಾಕರ ಜೋಶಿ ಭಾಗವಹಿಸಿದ್ದರು. ಕೇಂದ್ರದ ಅಧ್ಯಕ್ಷ ಪ್ರೊ| ತುಕಾರಾಮ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ| ಆಶಾಲತಾ ಸುವರ್ಣ ವಂದಿಸಿದರು.