Advertisement

ತುಳು ಕವನ ತುಳುವೇತರರಿಗೂ ಲಭ್ಯ! 

12:36 PM Mar 01, 2017 | Harsha Rao |

ತುಳುವಿನ 70 ಕವಿಗಳ 114 ತುಳು ಕವನಗಳು ಇಂಗ್ಲಿಷ್‌ಗೆ ಅನುವಾದ

Advertisement

ಮಂಗಳೂರು: “ಸಾರ ಎಸಲ್‌ದ ತಾಮರೆ’ ಎಂಬ ಕಯ್ಯಾರರು ಬರೆದ ತುಳು ಕವನವನ್ನು ಇನ್ನು ಮುಂದೆ ಇಂಗ್ಲಿಷ್‌ನಲ್ಲೂ ಓದಬಹುದು. ಅಮೃತ ಸೋಮೇಶ್ವರ ಅವರು ಬರೆದ “ಜೋಡು ನಂದಾದೀಪ ಬೆಳಗ್‌ಂಡ್‌’ ಕವನವೂ ಇಂಗ್ಲಿಷ್‌ನಲ್ಲಿ ಸಿಗಲಿದೆ..!

ತುಳುವಿನ ಖ್ಯಾತನಾಮ ಕವಿಗಳು ಬರೆದ ಕವನಗಳಲ್ಲಿ ಆಯ್ದವುಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿ ಸಂಪುಟದ ಮಾದರಿಯಲ್ಲಿ ಸಿದ್ದಪಡಿಸುವ ವಿಶೇಷ ಪ್ರಯತ್ನ ಈಗ ಸಾಕಾರಗೊಂಡಿದೆ. ಪ್ರಾತಿನಿಧಿಕ ತುಳು ಕವನಗಳು ದೊಡ್ಡ ಪ್ರಮಾಣದಲ್ಲಿ ಇಂಗ್ಲಿಷ್‌ಗೆ ಅನುವಾದಗೊಂಡು ಸಂಪುಟ ರೂಪದಲ್ಲಿ ಹೊರಬರುತ್ತಿರುವುದು ವಿಶೇಷ ಮತ್ತು ಇದು ಪ್ರಥಮ ಪ್ರಯತ್ನ.

ಅನುವಾದ ಸಂಪುಟಕ್ಕೆ “ಲ್ಯಾಡ್ಲ್ ಇನ್‌ ಎ ಗೋಲ್ಡನ್‌ ಬೌಲ್‌’ ಎಂದು ಹೆಸರಿಡಲಾಗಿದ್ದು, ಮಂಗಳೂರು ವಿ.ವಿ. ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ| ಬಿ.ಸುರೇಂದ್ರ ರಾವ್‌ ಮತ್ತು ಮಂಗಳೂರು ವಿ.ವಿ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ| ಕೆ.ಚಿನ್ನಪ್ಪ ಗೌಡ ಇದರ ಸಂಗ್ರಾಹಕರಾಗಿದ್ದಾರೆ. ತುಳುವಿನ 70 ಕವಿಗಳ ಸುಮಾರು 114 ತುಳು ಕವನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ 225 ಪುಟಗಳ ಈ ಸಂಪುಟದಲ್ಲಿ ನೀಡಲಾಗಿದೆ. ಮಾ.4ರಂದು ಬಲ್ಮಠ ಸಹೋದಯ ಸಭಾಂಗಣದಲ್ಲಿ ಈ ಸಂಪುಟವು ಲೋಕಾರ್ಪಣೆ ಗೊಳ್ಳಲಿದೆ. 

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ನೆಲೆಯಲ್ಲಿ ಸಾಕಷ್ಟು ಸಂಘಟನಾತ್ಮಕ ಹೋರಾಟ ನಡೆಯುತ್ತಿರುವಂತೆಯೇ, ತುಳುವೇತರರಿಗೆ ತುಳು ಭಾಷೆಯ ಸಮೃದ್ದತೆ, ಸತ್ವ, ಸಾಮರ್ಥಯತೆಯನ್ನು ವಿಸ್ತಾರ ನೆಲೆಯಲ್ಲಿ ಪ್ರಚುರಪಡಿಸಿ ಬೇಡಿಕೆಗೆ ಒಂದು ಸಮರ್ಥನೆಯನ್ನು ನೀಡುವ ಪ್ರಯತ್ನ ಇದಾಗಿದೆ. ಜತೆಗೆ ತುಳು ಭಾಷೆಯ ಕವನ ಶ್ರೀಮಂತಿಕೆ ಕೇವಲ ತುಳುನಾಡಿನವರಿಗೆ ಮಾತ್ರ ಲಭ್ಯವಾಗುವ ಬದಲು, ಅದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಧಿದಲ್ಲೂ ಗುರುತಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ.

Advertisement

ತುಳು ಭಾಷೆ, ತುಳು ನಾಡು, ನುಡಿ, ಸಾಮಾಜಿಕ ಕಾಳಜಿ, ಇಲ್ಲಿನ ಪ್ರತಿಭಟನೆಯ ರೂಪ, ಸ್ತ್ರೀ ಸಂವೇದನೆ ಸೇರಿದಂತೆ ನವೋದಯ, ನವ್ಯ, ಬಂಡಾಯಕ್ಕೆ ಒತ್ತು ನೀಡಿದ ಕವನಗಳನ್ನು ಇದರಲ್ಲಿ ಆಯ್ಕೆ ಮಾಡಲಾಗಿದೆ. ಕಂಬಳ, ಯಕ್ಷಗಾನ, ಕೋಳಿ ಅಂಕ ಇವೆಲ್ಲವುಗಳನ್ನು ಕವನದಲ್ಲಿ ಪ್ರಸ್ತುತಪಡಿಸಲಾಗಿದೆ. ವಿಶೇಷವೆಂದರೆ ತುಳುವಿನಲ್ಲಿ ಪಾರಿಭಾಷೆಯಲ್ಲಿ ಬಳಕೆಯಾಗುವ ಎಲ್ಲಾ ಪದಗಳನ್ನು, ಗಾದೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಅವುಗಳ ಕೆಳಗಡೆ ಅದರ ವಿವರಣೆಯ ಟಿಪ್ಪಣಿ ನೀಡಲಾಗಿದೆ. ತುಳು ಕವನಗಳ ಉಗಮ, ಬಳಿಕದ ಚಾರಿತ್ರಿಕ ಘಟ್ಟಗಳು ಇವೆಲ್ಲವನ್ನೂ ಉಲ್ಲೇಖೀಸಲಾಗಿದೆ. 

ತುಳುವಿನ ಶ್ರೀಮಂತಿಕೆಯ ದಿಗ್ದರ್ಶನ
“ಪತ್ತಾವತಾರ’ ಎಂದು ವಾದಿರಾಜರು ಬರೆದ ತುಳುವಿನ ಮೊದಲ ಕವನ ಸೇರಿದಂತೆ ಆ ಬಳಿಕ ಬಹುತೇಕ ಕವಿಗಳ ಆಯ್ದ ಕವನಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಲಾಗಿದೆ. ಕಯ್ನಾರ ಕಿಂಞಣ್ಣ ರೈ, ಅಮೃತ ಸೋಮೇಶ್ವರ ಸೇರಿದಂತೆ ಎನ್‌.ಎಸ್‌.ಕಿಲ್ಲೆ, ಮೋನಪ್ಪ ತಿಂಗಳಾಯ, ದೂಮಪ್ಪ, ಪಾಲ್ತಾಡಿ ರಾಮಕೃಷ್ಣ ಆಚಾರ್‌, ಸುಬ್ರಾಯ ಚೊಕ್ಕಾಡಿ, ನಾ.ಮೊಗಸಾಲೆ, ಕೆ.ಟಿ.ಗಟ್ಟಿ, ಡಿ.ಕೆ.ಚೌಟ, ವಾಮನ ನಂದಾವರ ಸೇರಿದಂತೆ 70 ಖ್ಯಾತ ಕವಿಗಳ ಕವನಗಳು ಈ ಸಂಪುಟದಲ್ಲಿದೆ. “ಪೂ ಅರಿ ಪಾಡೆರೆ ದುಂಬು’, “ಕೋರಿದ ಕಟ್ಟ’, “ಅಜಿಪ ಆನಗ’ ಸೇರಿದಂತೆ 114 ಕವನಗಳೂ ಸಂಪುಟದಲ್ಲಿ ಗಮನಸೆಳೆಯುತ್ತದೆ. ತುಳು ಭಾಷೆ ಸಮೃದ್ಧ ಭಾಷೆ ಎಂದು ಹೇಳುವ ನಾವು ತುಳುವೇತರರಿಗೂ ತುಳುವಿನ ಸಾಹಿತ್ಯ ಸಂಪತ್ತನ್ನು ವಿಸ್ತರಿಸುವ, ಆ ಮೂಲಕ ತುಳುವಿನ ಶ್ರೀಮಂತಿಕೆ ಬೆಳೆಸುವ ವಿಶೇಷ ಪ್ರಯತ್ನ ಇದಾಗಿದೆ ಎಂದು ಡಾ | ಕೆ.ಚಿನ್ನಪ್ಪ ಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next