ಮಂಗಳೂರು: ತುಳು ಚಿತ್ರರಂಗದಲ್ಲಿ ಕುತೂಹಲ ಮೂಡಿಸಿರುವ ಯುವ ನಿರ್ದೇಶಕ ಭರತ್ ಶೆಟ್ಟಿ ನಿರ್ದೇಶನದ “ಪಿಲಿಪಂಜ” ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.
ಯಸ್ ಬಿ ಗ್ರೂಪ್ಸ್ ಅರ್ಪಿಸುವ ಪಿಲಿಪಂಜ ಚಿತ್ರವನ್ನು ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ಪ್ರತೀಕ್ ಪೂಜಾರಿ ನಿರ್ಮಾಣ ಮಾಡುತ್ತಿದ್ದಾರೆ. ತುಳು ಚಿತ್ರರಂಗದಲ್ಲಿ ಹೊಸ ಪ್ರಯೋಗದೊಂದಿಗೆ ವಿಭಿನ್ನವಾಗಿ ಮೂಡಿ ಬರುತ್ತಿರುವ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಡಿಪು, ಪೂಪಾಡಿಕಲ್ಲು, ವರ್ಕಾಡಿ, ನರಿಂಗಾನ, ಇರಾ ಮುಂತಾದ ಕಡೆ ನಡೆಸಲಾಗಿದೆ. ಸತತ 25 ದಿನಗಳ ಶೂಟಿಂಗ್ ಬಳಿಕ ಇದೀಗ ಬ್ರೇಕ್ ಪಡೆಯಲಾಗಿದೆ.
ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಪ್ರವೀಣ್ ಕೊಡಕ್ಕಲ್, ಶಿವಪ್ರಕಾಶ್ ಪೂಂಜ, ಪ್ರಕಾಶ್ ಶೆಟ್ಟಿ ಧರ್ಮನಗರ, ಪ್ರತೀಕ್ ಪೂಜಾರಿ, ರಕ್ಷಣ್ ಮಾಡೂರು, ರೂಪಶ್ರೀ ವರ್ಕಾಡಿ, ಜಯಶೀಲ ಮಂಗಳೂರು, ವಿಜಯಹರಿ ರೈ, ದಯಾನಂದ ರೈ ಬೆಟ್ಟಂಪಾಡಿ, ರಂಜನ್ ಬೋಳೂರು, ಹೊಸ ಪರಿಚಯ ದಿಶಾರಾಣಿ, ಭಾಸ್ಕರ್ ಮಣಿಪಾಲ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಉದಯ ಬಳ್ಳಾಲ್ ಕ್ಯಾಮರಾ ಕೈಚಳಕವಿದ್ದು, ಲಾಯ್ ವೆಲಂಟೀನ್ ಸಲ್ದಾನ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಕಲನ ಶ್ರೀನಾಥ್ ಪವಾರ್, ಸಹಾಸ ಸುರೇಶ್ ಶೆಟ್ಟಿ, ಸಹ ನಿರ್ದೇಶನದಲ್ಲಿ ಅಕ್ಷತ್ ವಿಟ್ಲ, ಸಜೇಶ್ ಪೂಜಾರಿ, ಚಿತ್ರಕಥೆ, ಸಂಭಾಷಣೆಯನ್ನು ಸುರೇಶ್ ಬಲ್ಮಠ ಬರೆದಿದ್ದಾರೆ.
ಶೀಘ್ರದಲ್ಲಿ ದ್ವಿತೀಯ ಹಂತದ ಚಿತ್ರೀಕರಣವನ್ನು ಮುಗಿಸಿ, 2025ರಲ್ಲಿ ಪಿಲಿಪಂಜ ತುಳು ಸಿನಿ ರಸಿಕರೆದುರು ಬರಲಿದೆ.