Advertisement

ಅಮೆರಿಕದಲ್ಲಿ  ತುಳು ಭಾಷಿಕರ ಕೂಟ ಆಟ

01:29 PM May 05, 2021 | Team Udayavani |

ತುಳುನಾಡಿನಿಂದ ವಲಸೆ ಬಂದು ಉತ್ತರ ಅಮೆರಿಕದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ತುಳು ಭಾಷಿಕರು ಎ. 14ರಂದು ಸೌರಮಾನ ಯುಗಾದಿ ಹಬ್ಬದ ಸಂದರ್ಭದಲ್ಲಿ ‘ಆಟ’ಎಂಬ ಸಂಘಟನೆಯ ಉದ್ಘಾಟನ ಸಮಾರಂಭದಲ್ಲಿ ಸಂಭ್ರಮ ಸಡಗರದಿಂದ ಪಾಲ್ಗೊಂಡರು.

Advertisement

ಅಮೆರಿಕದಲ್ಲಿ ನೆಲೆಸಿರುವ ಮುಂದಿನ ತಲೆಮಾರಿನವರಿಗೂ ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ಮತ್ತು ಅಭಿಮಾನ ಉಳಿಸಿ ಬೆಳೆಸುವ ಸದುದ್ದೇಶದಿಂದ ಹುಟ್ಟು ಹಾಕಿರುವ ಈ ಸಂಘಟನೆಯ ಪೂರ್ಣ ಹೆಸರು “ಅಖೀಲ ಅಮೆರಿಕೊದ ತುಳುವೆರೆ ಅಂಗಣ (All American Tulu Association)’.

ಪ್ರಸ್ತುತ ಕೋವಿಡ್‌ ಪರಿಸ್ಥಿತಿಯಿಂದಾಗಿ ಜೂಮ್‌ ಮೂಲಕ ವರ್ಚುವಲ್‌ ಆಗಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಸಂಸ್ಥಾಪನಾ ಅವಧಿಗೆ (ದ್ವೆ „ವಾರ್ಷಿಕ) ನೇಮಕಗೊಂಡ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಅವರ ಕುಟುಂಬದವರಲ್ಲದೇ, ನಿರ್ದೇಶಕ ಮಂಡಳಿ, ಪ್ರಾದೇಶಿಕ ರಾಯಭಾರಿ ಮತ್ತು ಸಲಹಾ ಮಂಡಳಿಯ ಸದಸ್ಯರೆಲ್ಲರೂ ತಮ್ಮ ತಮ್ಮ ಮನೆಯ ಚಾವಡಿಯಿಂದಲೇ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮನೆಯ ದೇವರ ಮಂಟಪದೆದುರು ದೀಪ ಬೆಳಗುವ ಮೂಲಕ ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಯನ್ನು ಧ್ಯೇಯೋದತ್ತವಾಗಿರಿಸಿಕೊಂಡ “ಆಟ’ದ ಉದ್ಘಾಟನೆಗೆ ಸಾಕ್ಷಿಯಾದರು.

ಜಾಗತಿಕ ಪಿಡುಗಿನ ಸಂಕಷ್ಟದ ಸಮಯದಲ್ಲಿ ಸಂಪೂರ್ಣ ವಿಶ್ವವೇ ಆತಂಕದ ಕಾರ್ಮೋಡದಡಿಯಲ್ಲಿ ಬದುಕುತ್ತಿರುವಾಗ ತುಳು ಭಾಷೆ, ಸಂಸ್ಕೃತಿ, ಭೌಗೋಳಿಕಮೂಲದ ಜನರನ್ನೆಲ್ಲ  ಒಗ್ಗೂಡಿಸಿ ಜತೆಯಲ್ಲೇ ತುಳುನಾಡಿನ ಹಿರಿಮೆ ಒಳಿತಿಗೆ ದೂರದ ಅಮೆರಿಕದಿಂದ ಶ್ರಮಿಸಲು ಅಧ್ಯಕ್ಷ ಭಾಸ್ಕರ ಶೇರಿಗಾರ್‌ ಅವರ ದೂರದರ್ಶಿತ್ವ ಮತ್ತು ಕಲ್ಪನೆಯೇ ಕಾರಣ. ಅದಕ್ಕೆ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ಕಾರ್ಯಕಾರಿ ಸಮಿತಿ, ನಿರ್ದೇಶಕ ಮಂಡಳಿ, ಪ್ರಾದೇಶಿಕ ರಾಯಭಾರಿ ಮತ್ತು ಸಲಹಾ ಸಮಿತಿಯ ಸದಸ್ಯರದ್ದು.

ಅಮೆರಿಕದಲ್ಲಿ ಅಥವಾ ವಿದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ತುಳು ಭಾಷಿಗರನ್ನು ಸಾಧ್ಯವಾದಷ್ಟು ಮಟ್ಟಿಗೆ ತುಳು ಭಾಷೆಯಲ್ಲಿಯೇ ಮಾತಾಡಲು ಪ್ರೇರಣೆ ಮಾಡುವ ಮೂಲ ಉದ್ದೇಶವಿಟ್ಟುಕೊಂಡು, ತುಳು ಸಂಸ್ಕೃತಿ ಮತ್ತು ಓದು ಬರಹದತ್ತ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಗುರಿಯನ್ನು ಸಂಘದ ಸದಸ್ಯರು ಅನುಮೋದಿಸಿದ್ದು ಉದ್ಘಾಟನ ಸಂಜೆಯ “ಪಟ್ಟಾಂಗ’ ಅವಧಿಯಲ್ಲಿ  ವ್ಯಕ್ತವಾಯಿತು. ಮುಂಬರುವ ದಿನಗಳಲ್ಲಿ  ಅಮೆರಿಕದ ಉದ್ದಗಲಕ್ಕೂ ಹರಡಿರುವ ತುಳುನಾಡು ಮೂಲದವರನ್ನೆಲ್ಲ “ಆಟ’ದ ಸದಸ್ಯತ್ವ ಪಡೆಯಲು ಪ್ರೋತ್ಸಾಹಿಸಿ ಸಂಘದ ಮೂಲ ಉದ್ದೇಶವನ್ನು ಈಡೇರಿಸುವತ್ತ ಗಮನಹರಿಸಲು ನಿರ್ಧರಿಸಲಾಯಿತು.

Advertisement

ಪದಾಧಿಕಾರಿಗಳ ನೇಮಕ

ಮೊದಲ ದ್ವೈ ವಾರ್ಷಿಕ ಅವಧಿಗೆ ಅಧ್ಯಕ್ಷರಾಗಿ “ಆಟ’ ಸಂಸ್ಥಾಪನೆಗೆ ನಾಂದಿ ಹಾಡಿದ ಭಾಸ್ಕರ ಶೇರಿಗಾರ (ಬಾಸ್ಟನ್‌), ಉಪಾಧ್ಯಕ್ಷರಾಗಿ ಶಿರೀಶ್‌ ಶೆಟ್ಟಿ (ಅಟ್ಲಾಂಟ), ಕಾರ್ಯದರ್ಶಿಯಾಗಿ ಪ್ರಕಾಶ ಉಡುಪ (ಆಸ್ಟಿನ್‌), ಜಂಟಿ ಕಾರ್ಯದರ್ಶಿಯಾಗಿ ಪೂಜಾ ಶೆಟ್ಟಿ (ಬಾಸ್ಟನ್‌), ಖಜಾಂಚಿಯಾಗಿ ಸುಭಾಸ್‌ ಶೆಟ್ಟಿ (ಕ್ಯಾಲಿಫೋರ್ನಿಯಾ), ಜಂಟಿ ಖಜಾಂಚಿಯಾಗಿ ಫ್ರೆಡ್ರಿಕ್‌ ಫೆರ್ನಾಂಡಿಸ್‌ (ಬಾಸ್ಟನ್‌) ಮತ್ತು ನಿರ್ದೇಶಕ ಮಂಡಳಿಯ ಅಧ್ಯಕ್ಷರಾಗಿ ಶ್ರೀಧರ ಆಳ್ವ (ಕ್ಯಾಲಿಫೋರ್ನಿಯಾ) ಇವರು ನೇಮಕಗೊಂಡರು.

ಇದೇ ಅವಧಿಗೆ ಆಯ್ಕೆಗೊಂಡ ನಿರ್ದೇಶಕ ಮಂಡಳಿಯಲ್ಲಿ ಅಜಿತ್‌ ಭಾಸ್ಕರ್‌ ಶೆಟ್ಟಿ (ನ್ಯೂಯಾರ್ಕ್‌), ಡಾ| ಕೆ.ಪಿ. ಮೋಹನಚಂದ್ರ (ಕ್ಯಾಲಿಫೋರ್ನಿಯಾ), ಪ್ರಶಾಂತ ಕುಮಾರ್‌ (ಮಿಚಿಗನ್‌), ಪ್ರೀತಿ ಶೆಟ್ಟಿ (ಮಿನಿಯಾಪೊಲಿಸ್‌), ಡಾ| ರತ್ನಾಕರ ಶೇರಿಗಾರ್‌ (ವರ್ಜಿನಿಯಾ), ಶ್ರೀವತ್ಸ ಬಲ್ಲಾಳ (ಫಿಲಿಡೆಲ್ಫಿಯಾ), ಡಾ| ಸುಧಾಕರ್‌ ರಾವ್‌ (ಬಾಸ್ಟನ್‌) ಮತ್ತು ಉಮೇಶ್‌ ಅಸೈಗೋಳಿ (ನಾರ್ಥ್ ಕ್ಯಾರೊಲಿನಾ) ಇವರು ಸೇವೆ ಸಲ್ಲಿಸಲಿದ್ದಾರೆ.

ಸಲಹಾ ಸಮಿತಿಯ ಸದಸ್ಯರಾಗಿ ಡಾ| ಭೀಮ ಭಟ್‌ (ಫಿಲಡೆಲ್ಫಿಯಾ), ಡಾ| ಗುರುಪ್ರಸಾದ್‌ (ಫ್ಲೋರಿಡಾ), ಶ್ರೀಶ ಜಯ (ಚಿಕಾಗೊ), ಶ್ರೀವತ್ಸ ಜೋಶಿ (ವರ್ಜಿನಿಯಾ) ಮತ್ತು ಸುಧೀರ್‌ ಪ್ರಭು (ಬಾಸ್ಟನ್‌) ನೇಮಕವಾಗಿದ್ದಾರೆ. ಇದಲ್ಲದೆ ಪ್ರಾದೇಶಿಕ ರಾಯಭಾರಿಗಳಾಗಿ ಅನಿತಾ ನಾಯ್ಕ, ಅವಿಲ್‌ ಡಿ’ಸೋಜಾ, ಕುಮಾರ್‌ ಶೆಟ್ಟಿ , ಪವಿತ್ರಾ ಶೆಟ್ಟಿ , ಪ್ರಜ್ವಲ್‌ ಶೆಟ್ಟಿ , ಪ್ರಸನ್ನ ಲಕ್ಷ್ಮಣ್‌, ರಿತೇಶ್‌ ಶೆಟ್ಟಿ , ಸಂತೋಷ್‌ ಶೆಟ್ಟಿ , ಶ್ರೀವಲ್ಲಿ ರಾಯ್‌, ಸಿದ್ಧಾರ್ಥ ಶೆಟ್ಟಿ  ಮತ್ತು ಉಮಾಶಂಕರ್‌ ಕಡಂಬಾರ್‌ ಸಹ ನೇಮಕಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next