Advertisement

ಜುಲೈ 2ರಿಂದ ಕ್ಷಯರೋಗ ಪತ್ತೆ-ಚಿಕಿತ್ಸಾ ಆಂದೋಲನಕ್ಕೆ ಚಾಲನೆ

11:10 AM Jun 09, 2018 | |

ವಿಜಯಪುರ: ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಜುಲೈ 2ರಿಂದ 13ರವರೆಗೆ ಪರಿಣಾಮಕಾರಿ ಆಂದೋಲನ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಪೂರ್ವಭಾವಿ ಸಭೆ, ಖಾಸಗಿ ವಲಯದ ಪಾಲುದಾರರ ಸಭೆ, ಎಚ್‌ಐವಿ ಏಡ್ಸ್‌, ಎಚ್‌ಐವಿ-ಟಿಬಿ, ರಕ್ತಭಂಡಾರ ಸನ್ನದ್ಧತಾ ಪಡೆಯ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಅಂಗವಾಗಿ ತೀವ್ರತರ ಕ್ಷಯ ಕಾಯಿಲೆ ಪತ್ತೆ ಹಚ್ಚಬೇಕು. ಕ್ಷಯ ಹರಡುವ ಸ್ಥಳಗಳಲ್ಲಿ ಜನಜಾಗೃತಿ ಮತ್ತು ಕಫ ಸಂಗ್ರಹಣೆ ಚಟುವಟಿಕೆ ಕೈಗೊಳ್ಳಬೇಕು. ಆರೋಗ್ಯ ಪರೀಕ್ಷೆಗಳಿಂದ ದೂರ ಉಳಿದ ರೋಗಿಗಳನ್ನು ಗುರುತಿಸಿ ತೀವ್ರ ಪರೀಕ್ಷೆ-ತ್ವರಿತ ಚಿಕಿತ್ಸೆ ಒದಗಿಸಬೇಕು.

ಸಾಮಾಜಿಕವಾಗಿ, ಪ್ರಾಯೋಗಿಕವಾಗಿ ಹಾಗೂ ಭೌಗೋಳಿಕವಾಗಿ ದುರ್ಬಲ ಜನರನ್ನು ಗುರುತಿಸಿ ಟಿಬಿ ಸ್ಕ್ರೀನಿಂಗ್‌ ಮಾಡಿಸಬೇಕು. ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ನೈಜವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಥಮ ಹಂತವಾಗಿ ಕ್ರಿಯಾಯೋಜನೆಯಲ್ಲಿ ಸಮಗ್ರ ಯೋಜನೆ ಅಳವಡಿಸಬೇಕು. ಟಿಬಿ ಗುರುತಿಸುವ ಚಟುವಟಿಕೆ ಪರಿಣಾಮಕಾರಿಯಾಗಿ ನಡೆಯಬೇಕು. ಕ್ಷಯರೋಗ ಮತ್ತು ಎಚ್‌ ಐವಿ ಸೋಂಕಿತರಿಗೆ ಸಾಮಾಜಿಕ ಸೇವಾ ಸೌಲಭ್ಯ
ಕಲ್ಪಿಸಲು ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ರೋಗಗಳ ಹರಡುವಿಕೆ ತಪ್ಪಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

Advertisement

ಜಿಲ್ಲೆಯ ಔದ್ಯೋಗಿಕ ಪ್ರದೇಶಗಳಲ್ಲಿನ ಕಾರ್ಮಿಕರನ್ನು ತಪಾಸಣೆ ನಡೆಸಬೇಕು. ನಗರ ಕೊಳಚೆ ಪ್ರದೇಶ, ಹಳ್ಳಿಗಳಲ್ಲೆಲ್ಲ ಟಿಬಿ, ಎಚ್‌ ಐವಿ ಕುರಿತು ಜಾಗೃತಿ ಮೂಡಿಸಬೇಕು. ಈ ಆಂದೋಲನದ ಅಂಗವಾಗಿ ಪ್ರತಿ ವೈದ್ಯಕೀಯ ಮಹಾವಿದ್ಯಾಲಯ ಸೇರಿದಂತೆ ತಜ್ಞ ವೈದ್ಯರ ಸಮನ್ವಯದಿಂದ ಕಾರ್ಯಕ್ರಮ ಯಶಸ್ವಿಗೊಳಿಸಿ ಸಂಬಂಧಪಟ್ಟ ರೋಗಿಗಳಿಗೆ ಸಾಮಾಜಿಕ ಸೇವಾ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.

ಎಚ್‌ಐವಿ ಬಾಧಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ವಿದ್ಯಾರ್ಥಿ ನಿಲಯ ಸೌಲಭ್ಯ, ಆರ್‌ ಟಿಇ ಕಾಯ್ದೆಯಡಿ ಪ್ರವೇಶಾವಕಾಶ, ಸ್ವಂತ ಸೂರಿಲ್ಲದ ಸೋಂಕಿತರಿಗೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಮನೆ ನಿರ್ಮಾಣ ಸೇರಿದಂತೆ ಟಿಬಿ-ಎಚ್‌ಐವಿ ಕುರಿತು ಜಾಗೃತಿಗಾಗಿ ಪೊಲೀಸ್‌ ಸಿಬ್ಬಂದಿಗಳಿಗೆ ತರಬೇತಿ, ರಕ್ತದಾನ ಶಿಬಿರ, ಲೈಂಗಿಕ ಕಾರ್ಯಕರ್ತೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಆಗುವ ದೌರ್ಜನ್ಯಗಳ ಮೇಲೆ ನಿಗಾ ಇಡಲು ಪೊಲೀಸ್‌ ಇಲಾಖೆಗೆ ಸೂಚಿಸಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|ಜೈಬುನ್ನಿಸಾ ಬೀಳಗಿ ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಎಂ.ಸುಂದರೇಶಬಾಬು, ಡಿಎಚ್‌ಒ ಯಲಗಾರ, ಏಡ್ಸ್‌ ಸೊಸೈಟಿ ಉಪ ನಿರ್ದೇಶಕ ಡಾ| ಜಯರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next