ತಿರುಪತಿ : ವಿಶ್ವ ವಿಖ್ಯಾತ ತಿರುಪತಿ ತಿರುಮಲ ದೇವಸ್ಥಾನವನ್ನು ಮುಂದಿನ ಆಗಸ್ಟ್ ತಿಂಗಳಲ್ಲಿ ಆರು ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚುವ ನಿರ್ಧಾರವನ್ನು ದೇವಸ್ಥಾನದ ಆಡಳಿತ ಮಂಡಳಿ (TTD) ಹಿಂದೆಗೆದುಕೊಂಡಿದೆ.
ತಿರುಪತಿ ತಿರುಮಲ ದೇವಸ್ಥಾನವನ್ನು ಆರು ದಿನಗಳ ಕಾಲ ಮುಚ್ಚುವ ನಿರ್ಧಾರಕ್ಕೆ ವ್ಯಾಪಕ ಆಕ್ಷೇಪ, ಅಸಮಾಧಾನ ವ್ಯಕ್ತವಾದ ಕಾರಣ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ದೇವಳದ ಮೂಲಗಳು ತಿಳಿಸಿವೆ.
ದೇವಸ್ಥಾನಕ್ಕೆ ಭೇಟಿ ನೀಡುವವರು ಈಗಿನ್ನು ಆಗಸ್ಟ್ 11 ಮತ್ತು 12ರಂದು ಸಣ್ಣ ಸಣ್ಣ ತಂಡಗಳಲ್ಲಿ ದೇವಳವನ್ನು ಸಂದರ್ಶಿಸಬಹುದಾಗಿದೆ ಎಂದು ತಿಳಿದುಬಂದಿದೆ.
ಈ ಮೊದಲು ದೇವಸ್ಥಾನದ ಆವರಣವನ್ನು ಧಾರ್ಮಿಕವಾಗಿ ಶುದ್ಧೀಕರಿಸುವ ಮಹಾ ಸಂಪ್ರೋಕ್ಷಣ ವಿಧಿಯನ್ನು ನೆರವೇರಿಸುವುದಕ್ಕಾಗಿ ಆರು ದಿನಗಳ ಆಗಸ್ಟ್‌ನಲ್ಲಿ ದೇವಳ ಸಂಕೀರ್ಣವನ್ನು ಸಂಪೂರ್ಣವಾಗಿ ಮುಚ್ಚುವ ನಿರ್ಧಾರವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವಿಶ್ವಸ್ಥ ಮಂಡಳಿ ತೆಗೆದುಕೊಂಡಿತ್ತು. ಹಾಗೆ ಮಾಡಿದಲ್ಲಿ ಅದು ಇದೇ ಮೊದಲ ಬಾರಿಗೆ ದೇವಳವನ್ನು ಆರು ದಿನಗಳ ಕಾಲ ಮುಚ್ಚಿದಂತಾಗುತ್ತಿತ್ತು.
ಆದರೆ ಟಿಟಿಡಿ ಯ ಈ ನಿರ್ಧಾರಕ್ಕೆ ಭಕ್ತಾದಿಗಳಿಂದ ಭಾರೀ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿತ್ತು. ಮಾತ್ರವಲ್ಲದೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಕೂಡ ಟಿಟಿಡಿ ತನ್ನ ಈ ನಿರ್ಧಾರವನ್ನು ಪುನರ್ ಚಿಂತಿಸುವಂತೆ ಆಗ್ರಹಿಸಿದ್ದರು.