ವಿಟ್ಲ: ಸರಕಾರಿ ವೈದ್ಯರೋರ್ವರ ನಕಲಿ ಸಹಿ ಹಾಗೂ ಸೀಲ್ ಬಳಸಿ ಸರಕಾರಕ್ಕೆ ವಂಚಿಸಲು ಪ್ರಯತ್ನಿಸಿದ ಆರೋಪಿ ಸಿಕ್ಕಿ ಬಿದ್ದು ಜೈಲು ಸೇರಿದ ಪ್ರಕರಣ ನಡೆದಿದೆ.
ವಿಟ್ಲ ಶಾಲಾ ರಸ್ತೆ ನಿವಾಸಿ ಶೇಖ್ ಫಿರೋಜ್ ಆದಂ (26) ಬಂಧಿತ ಆರೋಪಿ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವೇದಾವತಿ ಅವರ ದೂರಿನ ಮೇಲೆ ಈತನನ್ನು ಬಂಧಿಸಲಾಗಿದೆ.
ಆರೋಪಿ ಫಿರೋಜ್ ಆದಂ ವಿಟ್ಲ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನ್ಯಾಶನಲ್ ಡ್ರೈವಿಂಗ್ ಸ್ಕೂಲ್ ಮಾಲಕ ಅಬ್ದುಲ್ ಖಾದರ್ ಅವರ ಪುತ್ರ. ಆತ ಗ್ರಾಹಕನೋರ್ವನ ಫಿಟ್‌ನೆಸ್‌ಗಾಗಿ ವೈದ್ಯರ ನಕಲಿ ಸಹಿ ಬಳಸಿದ್ದಾನೆ ಎನ್ನುವ ಆರೋಪದಲ್ಲಿ ಪೋಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇಸುಬು ಎನ್ನುವ ವ್ಯಕ್ತಿ ಲೈಸನ್ಸ್ ಮರು ನವೀಕರಣ ಮಾಡಲು ನ್ಯಾಶನಲ್ ಡ್ರೈವಿಂಗ್ ಸ್ಕೂಲ್‌ಗೆ ಅರ್ಜಿ ಸಲ್ಲಿಸಿದರು. ಆದರೆ ಲೈಸನ್ಸ್ ಮರು ನವೀಕರಣಕ್ಕೆ ವೈದ್ಯರ ಫಿಟ್‌ನೆಸ್ ಸರ್ಟಿಫಿಕೇಟ್ ಬೇಕು ಎಂಬುದು ಇಲಾಖೆಯ ನಿಯಮ. ಆದರೆ ಈ ಡ್ರೈವಿಂಗ್ ಸ್ಕೂಲ್ ಮಾಲಕನ ಮಗ ವೈದ್ಯರ ಸಹಿ ಹಾಗೂ ಸೀಲ್ ನಕಲಿ ಮಾಡಿ ಲೈಸನ್ಸ್ ನವೀಕರಣ ಮಾಡಲು ಮೆಲ್ಕಾರ್ ಆರ್‌ಟಿಒ ಕಚೇರಿಗೆ ಕಳುಹಿಸಿಕೊಟ್ಟಿದ್ದರು.
ಅಲ್ಲಿ ವಿಟ್ಲ ಸರಕಾರಿ ವೈದ್ಯರ ಒರಿಜಿನಲ್ ಸಹಿ ಹಾಗೂ ನ್ಯಾಶನಲ್ ಡ್ರೈವಿಂಗ್ ಸ್ಕೂಲ್‌ನವರು ಕಳುಹಿಸಿದ ಫಿಟ್‌ನೆಸ್ ಅರ್ಜಿಯಲ್ಲಿರುವ ವೈದ್ಯರ ಸಹಿ ತಾಳೆ ಮಾಡಿದಾಗ ವ್ಯತ್ಯಾಸ ಕಂಡು ಬಂದಿತ್ತು.
ಈ ಹಿನ್ನೆಲೆಯಲ್ಲಿ ಆರ್‌ಟಿಒ ಇನ್‌ಸ್ಪೆಕ್ಟರ್ ಅವರು ವಿಟ್ಲ ವೈದ್ಯರಿಗೆ ಪರಿಶೀಲನೆಗಾಗಿ ಕಳುಹಿಸಿಕೊಟ್ಟಿದ್ದು, ಆರೋಗ್ಯಾಧಿಕಾರಿ ಅದನ್ನು ಪರಿಶೀಲಿಸಿ ದಾಗ ನಕಲಿ ಸಹಿ ಹಾಕಿದ್ದು ಬೆಳಕಿಗೆ ಬಂದಿತ್ತು. ಅನಂತರ ತನಿಖೆಗಾಗಿ ವಿಟ್ಲ ಪೋಲಿಸರಿಗೆ ದೂರು ನೀಡಲಾಗಿತ್ತು.
ಈ ದೂರಿನ ಮೇಲೆ ತನಿಖೆ ಮಾಡಿದ ವಿಟ್ಲ ಇನ್‌ಸ್ಪೆಕ್ಟರ್ ನಾಗರಾಜ್ ಎಚ್.ಇ. ಅವರು ಆರಂಭದಲ್ಲಿ ಲೈಸನ್ಸ್ ನವೀಕರಣ ಮಾಡಲು ಅರ್ಜಿ ನೀಡಿದ ಇಸುಬು ವಶಕ್ಕೆ ಪಡೆದು ವಿಚಾರಿಸಿದಾಗ ಆತ ನ್ಯಾಶನಲ್ ಡ್ರೈವಿಂಗ್ ಸ್ಕೂಲ್ ನಲ್ಲಿ ಅರ್ಜಿ ನೀಡಿದ ಬಗ್ಗೆ ಮಾಹಿತಿ ನೀಡಿದ್ದ. ಅನಂತರ ಫಿರೋಜ್ ಆದಂನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಸತ್ಯ ಸಂಗತಿ ಬಯಲಾಗಿತ್ತು.
ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.