ಕುಂಬಳೆ: ಭಕ್ತಿಯಿಲ್ಲದೆ ಕುಯುಕ್ತಿಯಿಂದ ಶಬರಿಮಲೆಗೆ ಯುಕ್ತಿವಾದಿಗಳೆಂಬ ಆಕ್ಟಿವಿಸ್ಟ್ ಮಹಿಳೆಯರಿಗೆ ಪೊಲೀಸರ ಹೆಲ್ಮೆಟ್ ಮತ್ತು ಜಾಕೆಟ್ ನೀಡಿ ಬಲವಂತವಾಗಿ ಪ್ರವೇಶಿಸಲು ವಿಫಲ ಯತ್ನ ನಡೆಸಿ ಅಪಮಾನಕ್ಕೊಳಗಾದ ಕೇರಳದ ನಾಸ್ತಿಕ ಎಡರಂಗ ಸರಕಾರದ ಸಿ.ಎಂ.ಪಿಣರಾಯಿ ವಿಜಯನ್ ಅಭಿನವ ಹಿರಣ್ಯಕಶುಪು ಪಾತ್ರಧಾರಿಯಾಗಿದ್ದಾರೆ.ಎಂದು ಬಿ.ಜೆ.ಪಿ.ಜಿಲ್ಲಾಧ್ಯಕ್ಷ ,ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಶ್ರೀಕಾಂತ್ ಆರೋಪಿಸಿದರು.
ಶಬರಿಮಲೆ ಅಯ್ಯಪ್ಪ ಕರ್ಮ ಸಮಿತಿ ವತಿಯಿಂದ ಕುಂಬಳೆ ಪೊಲೀಸ್ ಠಾಣೆಗೆ ನಡೆಸಿದ ಮಾರ್ಚ್ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಬರಿಮಲೆ ಕ್ಷೇತ್ರದ ಪಾವಿತ್ರ್ಯತೆಯನ್ನು ಯಾವುದೇ ಬೆಲೆ ತೆತ್ತಾದರೂ ಕಾಪಾಡುವುದಾಗಿ ಹೇಳಿದರು.
ಶಬರಿಮಲೆ ಕ್ಷೇತ್ರದಲ್ಲಿ ಹತ್ತರಿಂದ ಐವತ್ತರೊಳಗಿನ ಪ್ರಾಯದ ಭಕ್ತ ಮಹಿಳೆಯರಿಗೆ ಮಾತ್ರ ನಿರ್ಬಂಧ ಹೇರಿರುವುದಲ್ಲದೆ ಮಹಿಳೆ ಯರ ಪ್ರವೇಶಕ್ಕೆ ಎಂದೂ ತಡೆ ಒಡ್ಡಿಲ್ಲ.ಕ್ಷೇತ್ರದ ಪಾವಿತ್ರ್ಯತೆಗೆ ಅಪಚಾರ ವೆಸಗಲು ಸರಕಾರ ಯತ್ನಿಸಿದ ಕೃತ್ಯವನ್ನು ಅಪಾರಸಂಖ್ಯೆಯಲ್ಲಿ ಭಕ್ತ ಮಹಿಳೆಯರೇ ಮುಂದಾಗಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಅನೇಕ ಭಕ್ತರು ಎಡರಂಗ ಸರಕಾರದ ಪ್ರಾಯೋಜಿತ ಪೊಲೀಸರ ಹಿಂಸೆಯನ್ನು ಸಹಿಸಿಯೂ ಎದೆಗುಂದದೆ ಪ್ರತಿಭಟನೆ ನಡೆಸಿ ಯಶಸ್ವಿಯಾಗಿದ್ದಾರೆ. ಕೇರಳದ ಪೊಲೀಸರು ಕಾನೂನನ್ನು ಪಾಲಿಸ ಬೇಕಾದವರು ಸರಕಾರ ಹಿಡನ್ ಎಜೆಂಡಾದ ಮೂಲಕ ಅಯ್ಯಪ್ಪ ಭಕ್ತರನ್ನು ಸದೆ ಬಡಿಯಲು ಮುಂದಾಗಿದ್ದಾರೆ ಎಂದರು.
ಅಯ್ಯಪ್ಪ ಕರ್ಮ ಸಮಿತಿ ನಾಯಕ ಪವಿತ್ರನ್ ಪರವನಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಿ.ಜೆ.ಪಿ.ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ,ಉಪಾಧ್ಯಕ್ಷ ವಿನೋದನ್ ಕಡಪ್ಪುರ,ರಾಜ್ಯ ಸಮಿತಿ ಸದಸ್ಯ ಪಿ.ಸುರೇಶ್ ಕುಮಾರ್ ಶೆಟ್ಟಿ,ಜಿಲ್ಲಾ ಉಪಾಧ್ಯಕ್ಷ ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಎಚ್.ಸತ್ಯಶಂಕರ ಭಟ್, ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್, ಕಾರ್ಯದರ್ಶಿ ಮಣಿಕಂಠ ರೈ, ಸಂಘಪರಿವಾರದ ನಾಯಕರಾದ ನ್ಯಾಯವಾದಿ ರಾಮಪಾಟಾಳಿ, ವಸಂತಿ,ಸುರೇಶ್ ಶಾಂತಿಪ್ಪಳ್ಳ,ದಿನೇಶ್ ಆರಿಕ್ಕಾಡಿ,ಸಂದೀಪ್ ಗಟ್ಟಿ, ಅಯ್ಯಪ್ಪ ಭಕ್ತ ಮಹಿಳೆಯರು ನೇತೃತ್ವ ನೀಡಿದರು.ಪ್ರತಿಭಟನೆಗೆ ಮುನ್ನ ಅಯ್ಯಪ್ಪ ನಾಮ ಜಪದೊಂದಿಗೆ ಪೇಟೆಯಲ್ಲಿ ಮೆರವಣಿಗೆ ನಡೆಯಿತು.