Advertisement

ಜನರ ಮನಸ್ಥಿತಿ ಬದಲಾಯಿಸುವ ಪ್ರಯತ್ನ: ಉಪೇಂದ್ರ

10:00 PM Apr 02, 2019 | Team Udayavani |

ಮೈಸೂರು: ಚುನಾವಣೆ ಎಂದರೆ ಗೆಲುವು-ಸೋಲು ಮುಖ್ಯವಲ್ಲ. ಗೆಲುವು -ಸೋಲೇ ಮುಖ್ಯ ಎಂಬ ಜನರ ಮನಸ್ಥಿತಿ ಬದಲಾಯಿಸುವುದು ನಮ್ಮ ಪ್ರಯತ್ನ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ತಿಳಿಸಿದರು.

Advertisement

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಆಶಾರಾಣಿ ಪರ ಪ್ರಚಾರಕ್ಕಾಗಿ ಮಂಗಳವಾರ ಮೈಸೂರಿಗೆ ಆಗಮಿಸಿದ್ದ ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವ ದೃಷ್ಟಿಯಿಂದ ಉತ್ತಮ ಪ್ರಜಾಕೀಯ ಪಾರ್ಟಿ ಸ್ಥಾಪಿಸಲಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ 14 ಕ್ಷೇತ್ರಗಳಲ್ಲೂ ಪ್ರಜಾಕೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.

ರಾಜ್ಯದ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, 2ನೇ ಹಂತದಲ್ಲಿ ಚುನಾವಣೆ ನಡೆಯುವ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಏ.6 ಅಥವಾ 7ರಂದು ಬಿಡುಗಡೆ ಮಾಡುವುದಾಗಿ ಹೇಳಿದರು.

ವೃತ್ತಿಪರತೆ: ಇವತ್ತು ಪ್ರಜಾಪ್ರಭುತ್ವವೆಂದರೆ ಹಣಬಲ, ಜಾತಿ ಬಲ ಇರುವವರಿಗೆ ಒಂದು ದಿನ ಮತ ಹಾಕಿ 5 ವರ್ಷ ಅವರನ್ನು ಮಹಾರಾಜರಂತೆ ಮೆರೆಸುವುದಾಗಿದೆ. ಈ ವ್ಯವಸ್ಥೆ ಬದಲಾಗಬೇಖು ಶಿಸ್ತು ಬದ್ಧವಾಗಿ ವ್ಯಾಪಾರೀಕರಣದಿಂದ ರಾಜಕಾರಣವನ್ನು ತೆಗೆದು ವೃತ್ತಿಪರತೆಗೆ ತರಲು ಈ ಪ್ರಯತ್ನ ಮಾಡಲಾಗುತ್ತಿದೆ.

Advertisement

ಜಾತಿ, ಹಣಕ್ಕೆ ಬದಲಾಗಿ ವಿಚಾರಗಳಿಗೆ ಜನ ಮತ ನೀಡುವಂತಾಗಬೇಕು. 500 ಮತ ಬರಲಿ, ಸಾವಿರ ಮತ ಬರಲಿ ನಮ್ಮ ಪ್ರಯತ್ನವನ್ನು ಬಿಡುವುದಿಲ್ಲ. ಹಣವಿಲ್ಲದೆ, ಅಬ್ಬರದ ಪ್ರಚಾರವಿಲ್ಲದೆಯೂ ಜನರನ್ನು ತಲುಪಬಹುದು,

ರ್ಯಾಲಿ, ಸಮಾವೇಶಗಳಿಂದಲ್ಲ ವಿಚಾರಗಳಿಂದ ಜನರನ್ನು ತಲುಪಬೇಕು. ಬಾಯಿಂದ ಬಾಯಿಗೆ ಸತ್ಯ ತಲುಪಿಸುವ ಪ್ರಜಾಕೀಯ ಮಾಡುತ್ತಿದ್ದೇವೆ. ಚುನಾವಣೆಗೆ ಫ‌ಂಡ್‌ ಬರದೆ ರಾಜಕೀಯ ಪಕ್ಷಗಳವರು ಹೊರಗೇ ಬರುವುದಿಲ್ಲ.

ಮಧ್ಯವರ್ತಿಗಳಿಲ್ಲದ ಪ್ರಜಾಕೀಯ: ಜಾತಿ ಉಳಿದಿರುವುದೇ ರಾಜಕಾರಣದಿಂದ, ಒಡೆದಾಳುವುದೇ ರಾಜಕೀಯ- ಒಂದುಗೂಡಿಸುವುದೇ ಪ್ರಜಾಕೀಯ. ಮಧ್ಯವರ್ತಿಗಳಿಲ್ಲದ ಪ್ರಜಾಕೀಯ ನಮ್ಮದು. ನಾನೊಬ್ಬ ಬದಲಾದರೆ ಏನು ಪ್ರಯೋಜನ ಎಂಬ ಆದರೆ ಯನ್ನು ಮನಸ್ಸಿನಿಂದ ತೆಗೆದುಹಾಕಿ ನಾನೊಬ್ಬ ಬದಲಾದರೆ ನಿಧಾನಕ್ಕೆ ಸಮಾಜವು ಬದಲಾಗುತ್ತದೆ.

ನಮ್ಮ ಈ ಪ್ರಯತ್ನದಲ್ಲಿ 500 ಮತ ಬಂದರೆ 500 ಜನ ಗೆದ್ದ ಹಾಗೆ, 5 ಲಕ್ಷ ಮತ ಬಂದರೆ 5 ಲಕ್ಷ ಜನರು ಗೆದ್ದ ಹಾಗೆ ಎಂದರು. ರಾಜಕೀಯದಿಂದ ಶೇ.20ರಷ್ಟು ಜನರಿಗೆ ಅನುಕೂಲ ಆಗುತ್ತಿದ್ದು, ಇನ್ನುಳಿದ ಶೇ.80ರಷ್ಟು ಜನರಿಗೆ ತೊಂದರೆ ಆಗುತ್ತಿದೆ. ಇದು ಬದಲಾಗಿ ಶೇ.80ರಷ್ಟು ಜನರಿಗೆ ಅನುಕೂಲವಾದರೆ, ಇನ್ನುಳಿದ ಶೇ.20ರಷ್ಟು ಜನರಿಗೆ ತಾನೇ ತಾನಾಗಿ ಅನುಕೂಲವಾಗಲಿದೆ ಎಂದು ಹೇಳಿದರು.

ರಾಜಕೀಯ ಪಕ್ಷಗಳು ಚುನಾವಣೆಗೆ ಮುನ್ನ ಹೊರಡಿಸುವ ಪ್ರಣಾಳಿಕೆಗಳಿಗೆ ಬೆಲೆ ಇಲ್ಲದಂತಾಗಿದೆ. ಕಾನೂನಿಗೆ ತಿದ್ದುಪಡಿ ತಂದು ಪ್ರಣಾಳಿಕೆ ಪದ್ಧತಿ ಬದಲಾಗಬೇಕು ಎಂದರು. ಮೈಸೂರು-ಕೊಡಗು ಕ್ಷೇತ್ರದ ಪಕ್ಷದ ಅಭ್ಯರ್ಥಿ ವಿ.ಆಶಾರಾಣಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಸುಮಲತಾ, ಪ್ರಕಾಶ್‌ರಾಜ್‌ ಅವರಾಗೇ ನಮ್ಮ ವಿಚಾರ ಒಪ್ಪಿ ಬರಬೇಕು. ನಾವು ಅವರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆಯುವುದು ರಾಜಕೀಯವಾಗುತ್ತದೆ. ಹೀಗಾಗಿ ಸಹಜವಾಗಿ ಪ್ರಜಾಕೀಯದಲ್ಲಿ ನಂಬಿಕೆ ಇರುವವರು ಬರಬೇಕು.
-ಉಪೇಂದ್ರ, ನಟ

Advertisement

Udayavani is now on Telegram. Click here to join our channel and stay updated with the latest news.

Next