Advertisement

ರಫೇಲ್‌ ಡೀಲ್‌ ರದ್ದಾಗಲ್ಲ : ಕೇಂದ್ರ ವಿತ್ತ ಸಚಿವ ಜೇಟ್ಲಿ ಸ್ಪಷ್ಟನೆ

01:35 PM Sep 24, 2018 | Team Udayavani |

ಹೊಸದಿಲ್ಲಿ: ರಫೇಲ್‌ ಡೀಲ್‌ ಬಗ್ಗೆ ಫ್ರಾನ್ಸ್‌ ಮಾಜಿ ಅಧ್ಯಕ್ಷ ಫ್ರಾನ್ಸ್ ಒಲಾಂದ್‌ ಆಡಿರುವ ಮಾತುಗಳಲ್ಲೇ ಭಿನ್ನತೆಯಿದೆ. ಯಾವುದೇ ಕಾರಣಕ್ಕೂ ಡೀಲ್‌ ರದ್ದು ಪಡಿಸುವ ಮಾತೇ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ‘ಎಎನ್‌ಐ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಫ್ರಾನ್ಸ್‌ ಮಾಜಿ ಅಧ್ಯಕ್ಷರ ಹೇಳಿಕೆಯಲ್ಲಿ ಹೊಂದಾಣಿಕೆ ಕಂಡುಬರುತ್ತಿದೆ ಎಂದಿದ್ದಾರೆ. ‘ಆ.30ರಂದು ರಾಹುಲ್‌ ಟ್ವೀಟ್‌ ಮಾಡಿ ರಫೇಲ್‌ ಡೀಲ್‌ ಬಗ್ಗೆ ಫ್ರಾನ್ಸ್‌ನಲ್ಲಿ ಬಾಂಬ್‌ ಸ್ಫೋಟವಾಗುತ್ತದೆ’ ಎಂದು ಬರೆದುಕೊಂಡಿದ್ದರು. ಅವರಿಗೆ ಮಾಜಿ ಅಧ್ಯಕ್ಷರ ಮಾತುಗಳ ಬಗ್ಗೆ ಮೊದಲೇ ಹೇಗೆ ತಿಳಿದುಬಂತು? ಅವರಿಬ್ಬರ ನಡುವಿನ ಹೇಳಿಕೆಗಳು ಪೂರ್ವನಿರ್ಧರಿತವೇ ಎಂಬ ಸಂಶಯವಿದೆ ಎಂದಿದ್ದಾರೆ ಜೇಟ್ಲಿ.

Advertisement

ಈ ಬಗ್ಗೆ ನನ್ನ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ ಫ್ರಾನ್ಸ್‌ ಮಾಜಿ ಅಧ್ಯಕ್ಷ ಮೊದಲು ಒಂದು ಹೇಳಿಕೆ ನೀಡಿ, ನಂತರ ತಮ್ಮ ಹೇಳಿಕೆ ತಿದ್ದಿಕೊಂಡರು. ಎಲ್ಲದಕ್ಕಿಂತ ಹೆಚ್ಚಾಗಿ 20 ದಿನಗಳ ಮೊದಲೇ ರಾಹುಲ್‌ಗೆ ಈ ಬಗ್ಗೆ ಹೇಗೆ ಮಾಹಿತಿ ಸಿಕ್ಕಿತ್ತು ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ. ಅಲ್ಲದೆ, ವಿವಾದದ ಕಾರಣಕ್ಕಾಗಿ ಡೀಲ್‌ ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದ ಜೇಟ್ಲಿ ‘ರಕ್ಷಣಾ ಪಡೆಗಳಿಗೆ ಅವುಗಳು ಅಗತ್ಯವಿದೆ. ರಫೇಲ್‌ ಯುದ್ಧ ವಿಮಾನಗಳು ನಮ್ಮ ರಕ್ಷಣಾ ಪಡೆಗಳಿಗಾಗಿ ಬರಬೇಕು ಮತ್ತು ಬಂದೇ ಬರುತ್ತವೆ’ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಫೇಸ್‌ ಬುಕ್‌ ನಲ್ಲಿ ಬರೆದುಕೊಂಡ ಜೇಟ್ಲಿ, ಕಾಂಗ್ರೆಸ್‌ ನಾಯಕರು ಅತ್ಯಂತ ಕೆಟ್ಟ ಭಾಷೆ ಬಳಕೆ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವುದೆಂದರೆ ನಗೆಪಾಟಲಿಗೆ ಈಡಾಗುವುದಲ್ಲ ಎಂದಿದ್ದರು.
 
ಪಾಕ್‌ ಜತೆಗೆ ಮಹಾಮೈತ್ರಿಯೇ?
ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಟ್ವೀಟ್‌ ಮಾಡಿ, ‘ರಾಹುಲ್‌ ಜತೆ ಪಾಕಿಸ್ಥಾನವೂ ಮೋದಿ ಹಟಾವೋ ಎಂದು ಹೇಳುತ್ತಿದೆ. ಪ್ರಧಾನಿ ವಿರುದ್ಧದ ಆಧಾರರಹಿತ ಆರೋಪದಲ್ಲಿ ಪಾಕಿಸ್ಥಾನ ಕೂಡ ಬೆಂಬಲ ನೀಡುತ್ತಿದೆ. ಕಾಂಗ್ರೆಸ್‌ ಪಾಕಿಸ್ಥಾನ ಜತೆ ಸೇರಿಕೊಂಡು ಪ್ರಧಾನಿ ವಿರುದ್ಧ ಅಂತಾರಾಷ್ಟ್ರೀಯ ಮಹಾಮೈತ್ರಿ ಕೂಟ ರಚಿಸಿಕೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.

ಫ್ರಾನ್ಸ್‌ ಆತಂಕ: ಈ ನಡುವೆ, ಮಾಜಿ ಅಧ್ಯಕ್ಷ ಒಲಾಂದ್‌ ರಫೇಲ್‌ ಡೀಲ್‌ ಬಗ್ಗೆ ನೀಡಿರುವ ಹೇಳಿಕೆಯಿಂದ ಭಾರತದ ಜತೆಗೆ ಹೊಂದಿರುವ ಬಾಂಧವ್ಯಕ್ಕೆ ಧಕ್ಕೆ ಉಂಟಾಗಬಹುದು ಎಂದು ಫ್ರಾನ್ಸ್‌ ಆತಂಕ ವ್ಯಕ್ತಪಡಿಸಿದೆ.

ಸತ್ಯ ಗೊತ್ತಾಗಲಿ
ಸಚಿವ ಜೇಟ್ಲಿ ಲೇಖನಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ‘ಪ್ರಧಾನಿ ಮೋದಿ ಹಾಗೂ ಸಚಿವ ಜೇಟ್ಲಿ ಅವರೇ, ಸುಳ್ಳು ಹೇಳುವುದನ್ನು ನಿಲ್ಲಿಸಿ. ರಫೇಲ್‌ ಡೀಲ್‌ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಿ, ಸತ್ಯ ಹೊರಬರುವಂತೆ ಮಾಡಲಿ’ ಎಂದು ಆಗ್ರಹಿಸಿದ್ದಾರೆ. ‘ಸಮರ್ಥಿಸಿಕೊಳ್ಳಲು ಅನರ್ಹವಾದದ್ದನ್ನೂ ಸಮರ್ಥಿಸಿಕೊಳ್ಳುವಂಥ ಕ್ರೋಧದ ಮೂಲಕ 2 ಸತ್ಯ ಅಥವಾ ಸುಳ್ಳುಗಳನ್ನು ತಿರುಚುವ ಸಾಮರ್ಥ್ಯ ಜೇಟ್ಲಿಗಿದೆ. ಸುಳ್ಳು ಹೇಳುವುದನ್ನು ನಿಲ್ಲಿಸುವ ಸಮಯ ಬಂದಿದೆ’ ಎಂದೂ ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next