Advertisement

ಮೈತ್ರಿ ನಂಬಿ ಕೆಟ್ಟೆವು, ಸಿದ್ದು ವಿರುದ್ಧ ಕಿಡಿ

09:26 PM Jun 22, 2019 | Team Udayavani |

ಚಿಕ್ಕಬಳ್ಳಾಪುರ: ಮೈತ್ರಿ ನಂಬಿ ನಾವೆಲ್ಲಾ ಕೆಟ್ಟು ಹೋದೆವು. ಯಾವ ಕ್ಷೇತ್ರದಲ್ಲೂ ಮೈತ್ರಿ ಕೆಲಸ ಮಾಡಲಿಲ್ಲ. ಈ ಮೈತ್ರಿ ಸರ್ಕಾರದ ಬಗ್ಗೆಯೇ ರಾಜ್ಯದ ಮತದಾರರಲ್ಲಿಯೇ ಒಳ್ಳೆಯ ಅಭಿಪ್ರಾಯವಿಲ್ಲ. ಆ ಕಾರಣಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಹೇಳಿದರು.

Advertisement

ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಚದಲುಪುರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ಹಂಚಿಕೆ, ನೇಮಕಾತಿಗಳಲ್ಲಿ ನಾಯಕರ ಮೇಲುಗೈ ಸಾಧಿಸಿದರೆ ಸಾಲದು, ಕಾರ್ಯಕರ್ತರು ಮೇಲುಗೈ ಸಾಧಿಸಬೇಕೆಂದು ಹೇಳಿದರು.

ಮೈತ್ರಿಯಿಂದ ನಮಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ಸಿಗಲಿಲ್ಲ. ಕೆಲವೊಂದು ಕಡೆ ನಮ್ಮ ಪಕ್ಷದ ನಾಯಕರು, ಮುಖಂಡರು ಕೂಡ ಕೆಲಸ ಮಾಡಲಿಲ್ಲ ಎಂದು ತಮ್ಮ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿದರು.

ಅಭಿವೃದ್ಧಿ ಪರ ಇರಲಿ: ಕಾಂಗ್ರೆಸ್‌ ಪಕ್ಷ ಎಂದೂ ಕೂಡ ಅಧಿಕಾರ ಕೇಂದ್ರೀಕೃತ ಅಥವಾ ಮಂತ್ರಿಮಂಡಲ ಕೇಂದ್ರೀಕೃತ ಪಕ್ಷವಾಗಬಾರದು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಸರ್ಕಾರವನ್ನು ಉಳಿಸುವ ಕೆಲಸ ಆಗಬಾರದು. ಸಂಪುಟ ಉಳಿಸಿಕೊಳ್ಳುವ ಕೆಲಸ ಮಾಡುವುದರ ಜೊತೆಗೆ ಜನರ ಅಭಿವೃದ್ಧಿ ಪರವಾಗಿ ಇರಬೇಕೆಂದರು.

ಮುಖ್ಯಮಂತ್ರಿಗಳು, ಮಂತ್ರಿಗಳು ತಮ್ಮ ಸ್ಥಾನಮಾನ ಉಳಿಸಿಕೊಳ್ಳಲ್ಲಷ್ಟೆ ಕೆಲಸ ಮಾಡಬಾರದು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಪರೋಕ್ಷವಾಗಿ ಮೈತ್ರಿ ಸರ್ಕಾರದ ಕಾರ್ಯವೈಖರಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

Advertisement

ಸಿದ್ದರಾಮಯ್ಯ ವಿರುದ್ಧ ಕಿಡಿ: ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲಿನ ಬಗ್ಗೆ ಪ್ರದೇಶ ಕಾಂಗ್ರೆಸ್‌ ಗಂಭೀರ ಚಿಂತನೆ ನಡೆಸಬೇಕಿದೆ. ವೈಯಕ್ತಿಕವಾಗಿ ನಾನು ಯಾರ ಮೇಲೆಯು ಅಪಾದನೆ ಹೊರೆಸಲ್ಲ. ಸೋಲಿನ ಬಗ್ಗೆ ಪ್ರದೇಶ ಕಾಂಗ್ರೆಸ್‌ ಹಾಗೂ ಎಐಸಿಸಿ ನಿರ್ಣಯ ಮಾಡಬೇಕೆಂದರು.

ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆಂದು ಕೇಳಿ ಬರುತ್ತಿರುವ ಮಾತಿನ ಬಗ್ಗೆ ತೀಕ್ಷಣ ಪ್ರತಿಕ್ರಿಯೆ ನೀಡಿದ ಮೊಯ್ಲಿ, ನಾಯಕರು ಮೇಲುಗೈ ಸಾಧಿಸುತ್ತಿರುವುದರಿಂದಲೇ ಪಕ್ಷ ಈ ರೀತಿ ಹೀನಾಯವಾಗಿ ಸೋಲುತ್ತಿದೆ. ನಾಯಕರು ಮೇಲುಗೈ ಸಾಧಿಸುವುದಿಕ್ಕಿಂತ ಕಾರ್ಯಕರ್ತರು ಮೇಲುಗೈ ಸಾಧಿಸಬೇಕು. ಆಗ ಪಕ್ಷಕ್ಕೆ ಉಳಿಗಾಲ ಇರುತ್ತದೆ ಎಂದರು.

ಸಿದ್ದು ಮಾತು ನಂಬಿ ಸೋಲಾಯಿತು: ಮಧ್ಯಂತರ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಬಹುಮತ ಬರುತ್ತದೆಯೆಂಬ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೂ ತೀವ್ರ ಗರಂ ಆದ ಮೊಯ್ಲಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಆದ ಸೋಲಿನ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳದ ಪರಿಣಾಮ ನಾವು ಲೋಕಸಭಾ ಚುನಾವಣೆಯಲ್ಲಿ ಸೋತೆವು ಎಂದರು.

ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಹೆಸರು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮೊಯ್ಲಿ, ಸಿದ್ದರಾಮಯ್ಯ ಹಾಗೂ ಖರ್ಗೆ ನಡುವೆ ಏನು ಪೈಪೋಟಿ ಇದೆ ಎಂದು ನನಗೆ ಗೊತ್ತಿಲ್ಲ. ಪ್ರದೇಶ ಕಾಂಗ್ರೆಸ್‌ ಸಮಿತಿಯಲ್ಲಿ ಸಮಗ್ರ ಬದಲಾವಣೆ ಆಗಬೇಕೆಂದರಲ್ಲದೇ ಎಲ್ಲಾ ಘಟಕಗಳ ವಿಸರ್ಜನೆಯನ್ನು ಸಮರ್ಥಿಸಿಕೊಂಡರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ, ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಳ್ಳಿ ರಮೇಶ್‌, ಅವುಲುರೆಡ್ಡಿ, ಮರಿಯಪ್ಪ, ರಾಯಪ್ಪ, ರಫೀಕ್‌ ಉಪಸ್ಥಿತರಿದ್ದರು.

ದೇವೇಗೌಡರ ಮಾತು ನಂಬಲಿಕ್ಕೆ ಆಗಲ್ಲ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತೋ ಎನ್ನುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಮಧ್ಯಂತರ ಚುನಾವಣೆ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಹೆಚ್‌.ಡಿ.ದೇವೇಗೌಡ ಹೇಳಿಕೆ ಪ್ರತಿಕ್ರಿಯೆ ನೀಡಿದ ಎಂ.ವೀರಪ್ಪ ಮೊಯ್ಲಿ, ಅವರು ಒಂದೊಂದು ದಿನ ಒಂದೊಂದು ಹೇಳಿಕೆ ನೀಡುತ್ತಾರೆ.

ಅವರ ಬಗ್ಗೆ ಏನು ಹೇಳಕ್ಕೆ ಆಗುವುದಿಲ್ಲ. ನಾವು ಏನಾದರೂ ಹೇಳಿಕೆ ನೀಡಿದರೆ ಅದಕ್ಕೆ ಬದ್ಧರಾಗಿರುತ್ತೇವೆ. ಆದರೆ ದೇವೇಗೌಡರ ವಿಚಾರದಲ್ಲಿ ಆಗಲ್ಲ. ಅವರು ಸಮಯ, ಸಂದರ್ಭ ನೋಡಿ ಹೇಳಿಕೆ ಕೊಡುತ್ತಾರೆ. ಅವರು ದೊಡ್ಡವರು ಎಂದು ಹೇಳುವ ಮೂಲಕ ದೇವೇಗೌಡರ ಹೇಳಿಕೆ ಕುರಿತು ಗೇಲಿ ಮಾಡಿದರು.

ಸೋತ ಮಾತ್ರಕ್ಕೆ ಸುಮ್ಮನಿರಲ್ಲ: ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಸುಮ್ಮನೆ ಕೂರುವ ಪ್ರಶ್ನೆ ಇಲ್ಲ. ಈ ಭಾಗದ ರೈತಾಪಿ ಜನತೆಗೆ ನೀರು ಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರಿಸುತ್ತೇವೆ. ಮೈತ್ರಿ ಸರ್ಕಾರದ ಮೇಲೆ ಒತ್ತಡ ಹೇರಿ ಎತ್ತಿನಹೊಳೆ ಹಾಗೂ ಹೆಬ್ಟಾಳ ನಾಗವಾರ ತ್ಯಾಜ್ಯ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೋರಾಡುತ್ತೇನೆ ಎಂದು ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದರು.

ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವ ಕೆಲಸಕ್ಕೆ ಮುಂದಾಗುತ್ತೇನೆ. ಪ್ರತಿ ಶನಿವಾರ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪಕ್ಷದ ಸಂಘಟನೆ ಮಾಡುವುದಾಗಿ ತಿಳಿಸಿದರು. ಹೆಚ್‌.ಎನ್‌ ವ್ಯಾಲಿ ಯೋಜನೆಗಿದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ. ಈ ಬಗ್ಗೆ ಎರಡು ದಿನಗಳ ಹಿಂದೆಯಷ್ಟೇ ನಾನು ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದೇನೆ.

ಈ ಭಾಗಕ್ಕೆ ಒಂದರೆಡು ತಿಂಗಳಲ್ಲಿ ಹೆಬ್ಟಾಳ, ನಾಗವಾರ ನೀರಾವರಿ ಈ ಭಾಗದ ಕೆರೆಗಳಿಗೆ ಹರಿಯಲಿದೆ ಎಂದು ಹೇಳಿದರು. ಕೆಲವರು ಅಧಿಕಾರ, ಹಣದ ಆಸೆಗೆ ಬಿದ್ದು ನನ್ನ ವಿರುದ್ದ ಕೆಲಸ ಮಾಡಿದರು. ಆ ಕಾರಣಕ್ಕಾಗಿ ನನಗೆ ಸೋಲಾಗಿದೆ. ನಮ್ಮ ಜೊತೆಯಲ್ಲಿ ಇದ್ದವರೇ ನಮಗೆ ಮೋಸ ಮಾಡಿದ್ದಾರೆಂದರು.

ಕ್ಷೇತ್ರದ ವ್ಯಾಪ್ತಿಗೆ ಬರುವ ಪಕ್ಷದ ಎಲ್ಲಾ ಶಾಸಕರಿಗೂ ಮೈತ್ರಿ ಸರ್ಕಾರದಲ್ಲಿ ಒಂದಲ್ಲ ಒಂದು ಅಧಿಕಾರ ಸಿಕ್ಕಿದೆ. ಶಾಸಕ ಸುಧಾಕರ್‌ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಸೌಜನ್ಯಕ್ಕೂ ನನಗೆ ಥ್ಯಾಕ್ಸ್‌ ಕೂಡ ಹೇಳಿಲ್ಲ. ಅವರಿಗೆ ಸಿದ್ದರಾಮಯ್ಯ ಬಗ್ಗೆ ಬಲವಾದ ನಂಬಿಕೆ ಇದೆ. ಹಾಗಾಗಿ ಅವರಿಗೆ ಥ್ಯಾಕ್ಸ್‌ ಹೇಳಿದ್ದಾರೆ.
-ಎಂ.ವೀರಪ್ಪ ಮೊಯ್ಲಿ, ಮಾಜಿ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next