ಕನ್ನಡದಲ್ಲಿ ಕಳೆದ ವರ್ಷ “ಟ್ರಂಕ್’ ಎಂಬ ಚಿತ್ರ ಬಂದಿದ್ದು ನೆನಪಿರಬಹುದು. ರಿಷಿಕಾ ಶರ್ಮಾ ನಿದೇಶನದಲ್ಲಿ ನಿಹಾಲ್ ನಾಯಕರಾಗಿ ನಟಿಸಿದ್ದರು. ಈಗ ಇವರ ಕಾಂಬಿನೇಷನ್‌ನಲ್ಲಿ ಹೊಸದೊಂದು ನಿರ್ಮಾಣ ಸಂಸ್ಥೆ ಹುಟ್ಟುಕೊಂಡಿದೆ. ಹೌದು, ರಿಷಿಕಾ ಹಾಗು ನಿಹಾಲ್ ಇಬ್ಬರೂ ಸೇರಿ ಇರಾ ಫಿಲಂಸ್ ಹೆಸರಿನ ನಿರ್ಮಾಣ ಸಂಸ್ಥೆ ಶುರುಮಾಡಿದ್ದಾರೆ. ಇತ್ತೀಚೆಗೆ ಮಾಜಿ ಸಚಿವ ಸಂತೋಷ್ ಎಸ್.ಲಾಡ್ ಅವರು ನೂತನ ಇರಾ ಫಿಲಂಸ್ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿ, ಶುಭಹಾರೈಸಿದ್ದಾರೆ.
ತಮ್ಮ ನೂತನ ನಿರ್ಮಾಣ ಸಂಸ್ಥೆ ಇರಾ ಫಿಲಂಸ್ ಕುರಿತು ನಿಹಾಲ್ ಹೇಳಿದ್ದಿಷ್ಟು. “2018 ರಲ್ಲಿ ನಾವು ಮಾಡಿದ “ಟ್ರಂಕ್’ ಸಿನಿಮಾಗೆ ನಿಮ್ಮೆಲ್ಲರ ಬೆಂಬಲ ಚೆನ್ನಾಗಿತ್ತು. ಈಗ ನಿರ್ದೇಶಕಿ ರಿಷಿಕಾ ಶರ್ಮ ಅವರ ಜೊತೆಗೂಡಿ ಇರಾ ಫಿಲಂಸ್ ನಿರ್ಮಾಣ ಸಂಸ್ಥೆ ಮಾಡಿದ್ದೇನೆ. ಈ ಸಂಸ್ಥೆ ಮೂಲಕ ಸಿನಿಮಾಗಳ ನಿರ್ಮಾಣ, ವಿತರಣೆ, ಪ್ರಚಾರ ಕಾರ್ಯ ಹೀಗೆ ಸಿನಿಮಾಗೆ ಸಂಬಂಧಿಸಿದ ಕೆಲಸಗಳನ್ನು ಮಾಡಲಾಗುತ್ತದೆ.
ಕನ್ನಡ ಸಿನಿಮಾಗಳ ಜೊತೆಯಲ್ಲಿ ತೆಲುಗು, ತಮಿಳು, ಹಿಂದಿ ಭಾಷೆಯ ಚಿತ್ರಗಳನ್ನೂ ನಮ್ಮ ಸಂಸ್ಥೆ ಮೂಲಕ ವಿತರಣೆ ಮಾಡಲಾಗುವುದು. ಈಗ 140 ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ನಮ್ಮ ಸಂಸ್ಥೆ ಗುರುತಿಸಿದ್ದು, ಅವುಗಳ ಜೊತೆ ಮಾತುಕತೆ ನಡೆಸಲಾಗಿದೆ. ಕಳೆದ ಒಂದುವರೆ ವರ್ಷದಿಂದಲೂ ಒಂದು ತಂಡ ಕಟ್ಟಿಕೊಂಡು ಈ ಸಂಸ್ಥೆ ಹುಟ್ಟುಹಾಕಿದ್ದೇವೆ. ಇನ್ನು, ನಮ್ಮ ಸಂಸ್ಥೆ ಮೂಲಕ ಜನವರಿ ಅಥವಾ ಫೆಬ್ರವರಿಯಲ್ಲಿ ನಾಲ್ಕು ಹೊಸ ಪ್ರಾಜೆಕ್ಟ್ಗಳು ಶುರುವಾಗಲಿವೆ.
ಎರಡು ಸಿನಿಮಾ, ಒಂದು ಸೀರಿಯಲ್ ಹಾಗು ಒಂದು ವೆಬ್‌ಸೀರಿಸ್ ನಿರ್ಮಿಸುವ ಯೋಚನೆ ಇದೆ. ನಮ್ಮ ಬೆನ್ನೆಲುಬಾಗಿ, ಹಿತೈಷಿಗಳಾಗಿ ಸಂತೋಷ್ ಲಾಡ್ ಇದ್ದಾರೆ’ ಎಂದು ವಿವರ ಕೊಟ್ಟರು ನಿಹಾಲ್. ಇನ್ನು ಸಂಸ್ಥೆಯ ನಿರ್ದೇಶಕಿ ರಿಷಿಕಾ ಶರ್ಮಾ ಅವರು ಮಾತನಾಡಿ, “ನಾನು “ಟ್ರಂಕ್’ ಬಳಿಕ ಒಂದು ನಿರ್ಮಾಣ ಸಂಸ್ಥೆ ಕಟ್ಟುವ ಕೆಲಸದಲ್ಲಿ ಬಿಝಿಯಾದೆ. ಈಗ ಇರಾ ಫಿಲಂಸ್ ನಿರ್ಮಾಣ ಸಂಸ್ಥೆಗೆ ಚಾಲನೆ ಸಿಕ್ಕಿದೆ. ಇರಾ ಅಂದರೆ ಸಂಸ್ಕೃತ ಪದದಲ್ಲಿ ಸರಸ್ವತಿ ಎಂದರ್ಥ. ಹಾಗಾಗಿ ಈ ಹೆಸರಿನ ಸಂಸ್ಥೆ ಮೂಲಕ ಇಲ್ಲಿ ಸಿನಿಮಾ, ಸೀರಿಯಲ್, ವೆಬ್‌ಸೀರಿಸ್ ನಿರ್ಮಾಣ ಮಾಡುವ ಗುರಿ ಇದೆ.
ಈ ಸಂಸ್ಥೆಯಲ್ಲಿ 25 ಜನರ ತಂಡವಿದೆ. ಇಲ್ಲಿ ಬರವಣಿಗೆ ಕೆಲಸ ನಡೆಯುತ್ತದೆ. ಪ್ರಮೋಷನ್ ಕೆಲಸಗಳೂ ನಡೆಯಲಿವೆ. ವುಮೆನ್ ರೈಟರ್ ಕೂಡ ಇಲ್ಲಿದ್ದಾರೆ. ಕಥೆ, ಸಾಹಿತ್ಯ, ಸಂಭಾಷಣೆ ಹೀಗೆ ಬರವಣಿಗೆಯ ಕೆಲಸ ಇಲ್ಲಿ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಸಂಸ್ಥೆ ಮೂಲಕ ಎರಡು ಚಿತ್ರಗಳು ನಿರ್ಮಾಣಗೊಳ್ಳಲಿವೆ. ಅದಕ್ಕೆ ಈಗಾಗಲೇ ತಯಾರಿ ನಡೆದಿದೆ. ಕ್ರಿಯೆಟಿವ್ ವಿಷಯದಲ್ಲಿ ನಾನಿದ್ದರೆ, ಪ್ರಮೋಷನ್ಸ್, ಪ್ರೊಡಕ್ಷನ್ಸ್ ವಿಷಯವನ್ನು ನಿಹಾಲ್ ನೋಡಿಕೊಳ್ಳುತ್ತಾರೆ’ ಎಂದು ವಿವರ ಕೊಟ್ಟರು ರಿಷಿಕಾ.