ವಾಷಿಂಗ್ಟನ್: ನಿಷೇಧಿತ ಆರು ಮುಸ್ಲಿಂ ದೇಶಗಳು ಮತ್ತು ಎಲ್ಲ ನಿರಾಶ್ರಿತ ವೀಸಾ ಅರ್ಜಿದಾರರಿಗೆ ಅಮೆರಿಕದ ಟ್ರಂಪ್ ಆಡಳಿತೆಯು ಅಮೆರಿಕ ಪ್ರವೇಶಕ್ಕೆ ಸಂಬಂಧಿಸಿ ಹೊಸ ಅರ್ಹತೆಗಳನ್ನು ನಮೂದಿಸಿದ್ದು ಅಮೆರಿಕದ ವಿದೇಶಾಂಗ ಇಲಾಖೆಯು ಈ ನೂನತ ಮಾರ್ಗದರ್ಶಿ ನಿಯಮಗಳನ್ನು ಪ್ರಕಟಿಸಿದೆ.
ಅಮೆರಿಕ ಪ್ರವೇಶ ನಿಷೇಧಕ್ಕೆ ಗುರಿಯಾಗಿರುವ ಆರು ಮುಖ್ಯ ಮುಸ್ಲಿಂ ದೇಶಗಳೆಂದರೆ ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್.
ಈ ಆರು ಮುಸ್ಲಿಂ ದೇಶಗಳ ಮೇಲಿನ ಅಮೆರಿಕ ಪ್ರವೇಶದ ಟ್ರಂಪ್ ನಿಷೇಧಾಜ್ಞೆಯು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿತ್ತಲ್ಲದೆ ಅಮೆರಿಕದ ಉನ್ನತ ನ್ಯಾಯಾಂಗವು ಈ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.
ಇದೀಗ ಅಮೆರಿಕದ ಸುಪೀಂ ಕೋರ್ಟ್, ಟ್ರಂಪ್ ನಿಷೇಧಾಜ್ಞೆಯನ್ನು ಪುನರ್ ಸ್ಥಾಪಿಸಿರುವ ಕಾರಣ ನಿಷೇಧಿತ ಆರು ಮುಸ್ಲಿಂ ರಾಷ್ಟ್ರಗಳ ಹಾಗೂ ನಿರಾಶ್ರಿತರ ವೀಸಾ ಅರ್ಜಿಗಳಿಗೆ ಹೊಸ ಅರ್ಹತಾ ನಿಯಮಗಳನ್ನು ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಟಿಸಿದೆ.
ಅಮೆರಿಕ ಪ್ರವೇಶ ಬಯಸುವ ವೀಸಾ ಅರ್ಜಿದಾರರು ತಮ್ಮೊಂದಿಗೆ ಕರೆತರಬಹುದಾದ ನಿಕಟ ಬಂಧುಗಳು ಯಾರು ಎಂಬುದನ್ನು ಈ ಹೊಸ ಅರ್ಹತಾ ನಿಯಮಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಆ ಪ್ರಕಾರ ಹೆತ್ತವರು, ಗಂಡ-ಹೆಂಡತಿ, ಮಕ್ಕಳು, ಪ್ರಾಯಪ್ರಬುದ್ಧ ಮಗ-ಮಗಳು, ಅಳಿಯ, ಸೊಸೆ ಅಥವಾ ಅವರ ಮಕ್ಕಳು (ಮಲ ಮಕ್ಕಳು ಮತ್ತು ಮಲ ಕಟುಂಬ ಸಂಬಂಧಿಗಳು ಸೇರಿ) ಈ ವ್ಯಾಖ್ಯಾನಕ್ಕೆ ಒಳಪಟ್ಟಿದ್ದಾರೆ.
ಯಾರು ಅರ್ಜಿದಾರರ ನಿಕಟ ಸಂಬಂಧಿಗಳಲ್ಲ ಎಂಬ ವ್ಯಾಖ್ಯಾನದ ವ್ಯಾಪ್ತಿಗೆ, ಅಜ್ಜ-ಅಜ್ಜಿ, ಮೊಮ್ಮಕ್ಕಳು, ಚಿಕ್ಕಮ್ಮ, ಚಿಕ್ಕಪ್ಪ, ಸೋದರ ಸಂಬಂಧಿಗಳು, ಭಾವ, ನಾದಿನಿ, ಭಾವೀ ಪತಿ – ಪತ್ನಿ ಮತ್ತು ವಿಸ್ತರಿತ ಕುಟುಂಬ ಸದಸ್ಯರು ಸೇರುತ್ತಾರೆ.
ವಿದೇಶಾಂಗ ಇಲಾಖೆಯ ಈ ಹೊಸ ನೀತಿ-ನಿಯಮಗಳ ಸವಿವರ ಮಾಹಿತಿಯನ್ನು ಅಮೆರಿಕದ ಎಲ್ಲ ರಾಜತಂತ್ರಜ್ಞ ಹುದ್ದೆಗಳಿಗೆ ಮತ್ತು ರಾಯ್‌ಟರ್ ಹಾಗೂ ಅಸೋಸಿಯೇಟೆಡ್ ಸುದ್ದಿ ಸಂಸ್ಥೆಗೆ ತಲುಪಿಸಿದೆ.