ಮುಧೋಳ: ಗಂಡ -ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಗುತ್ತಿಗೆದಾರ ಹಾಗೂ ಬಿಎಸ್‌ಎನ್‌ಎಲ್ ಅಧಿಕಾರಿಗಳ ಮದ್ಯದ ಗುದ್ದಾಟಕ್ಕೆ ಹೊರ ಗುತ್ತಿಗೆ ನೌಕರರು ಸಂಬಳವಿಲ್ಲದೇ ಸೇವೆ ಸಲ್ಲಿಸುವ ಪರಿಸ್ಥಿತಿ ಎದುರಾಗದೆ.
ಅಧಿಕಾರಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಮುಧೋಳ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 32 ಜನ ಹೊರಗುತ್ತಿಗೆ ನೌಕರರು, ಕಳೆದ ಎಂಟು ತಿಂಗಳಿಂದ ಸಂಬಳವಿಲ್ಲದೆ ದುಸ್ತರ ಜೀವನ ನಡೆಸುತ್ತಿದ್ದಾರೆ.
ಟೆಲಿಕಾಂ ರಂಗದಲ್ಲಿನ ಪೈಪೋಟಿ ಎದುರಿಸುತ್ತಿರುವ ಬಿಎಸ್‌ಎನ್‌ಎಲ್‌ಗೆ ತನ್ನ ಸಿಬ್ಬಂದಿಗೆ ಸಂಬಳ ನೀಡುವುದು ಸಹ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿಜಯಪುರದ ಶ್ರೀ ಸರ್ವಿಸ್ ಕಂಪನಿಯವರು ಬಿಎಸ್‌ಎನ್ ಎಲ್‌ಗೆ ಹೊರಗುತ್ತಿಗೆ ನೌಕರರನ್ನು ನೀಡಿದೆ. ಕೆಲಸ ನೀಡಿರುವ ಕಂಪನಿ 8 ತಿಂಗಳಿಂದ ಸಂಬಳ ನೀಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲದಿದ್ದರೆ ಕೆಲಸವನ್ನು ಬಿಟ್ಟುಬಿಡಿ ಎಂದು ಹೇಳುತ್ತಾರೆ ಎಂಬುದು ನೌಕರರ ಗೋಳು.
ಗುತ್ತಿಗೆದಾರ ಹೇಳ್ಳೋದೇನು: ನಾವು ಮೊದಲು ನೌಕರರಿಗೆ ಪ್ರತಿ ತಿಂಗಳು ಸಂಬಳ ನೀಡುತ್ತಿದ್ದೆವು. ಆದರೆ 8 ತಿಂಗಳಿಂದ ಸಂಬಳ ನೀಡಲು ಸಾಧ್ಯವಾಗಿಲ್ಲ. ಒಪ್ಪಂದದ ಪ್ರಕಾರ ನಾವು ಕಾರ್ಮಿಕರಿಗೆ ಸಂಬಳ ನೀಡಿದ ಮೂರು ತಿಂಗಳೊಳಗೆ ನಮಗೆ ಹಣ ಬಿಡುಗಡೆ ಮಾಡಬೇಕು. ಆದರೆ ಬಿಎಸ್‌ಎನ್‌ಎಲ್ ನವರು ಕಳೆದ 12 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಕೇಳಿದರೆ ಇಂದು ನಾಳೆ ಹಣ ಬರುತ್ತೆ ಎಂಬ ಉತ್ತರ ನೀಡುತ್ತಾರೆ. ನಮಗೂ ಸಾಕಾಗಿದೆ.
ನೌಕರರಿಗೆ ಕೆಲಸ ಬಂದ್ ಇಡು ಎಂದು ಹೇಳಿದರೂ ಕೇಳುತ್ತಿಲ್ಲ. ನೌಕರರಿಗೆ ಸಂಬಳ ನೀಡಲು ಹಣ ನೀಡಿ ಎಂದು ಗೋಗರೆದರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು. ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರ ನೇಮಕ ರದ್ದು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಂಗಳ ಹಿಂದೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಅವರ ಮಾತು ಕಾರ್ಯರೂಪಕ್ಕೆ ಬರುತ್ತಿಲ್ಲ. ಒಟ್ಟಿನಲ್ಲಿ ಅಧಿಕಾರಿ ಹಾಗೂ ಗುತ್ತಿಗೆದಾರರ ತಿಕ್ಕಾಟದಲ್ಲಿ ಕಾರ್ಮಿಕರಿಗೆ ಇನ್ನಿಲ್ಲದ ಕಿರಿಕಿರಿಯುಂಟಾಗುತ್ತಿರುವುದಂತೂ ಸುಳ್ಳಲ್ಲ.
ಅನಿವಾರ್ಯ ಕಾರಣದಿಂದ ಗುತ್ತಿಗೆ ನೌಕರರಿಗೆ ನೀಡಲು ಹಣ ಇನ್ನೂ ಬಂದಿಲ್ಲ. ಇನ್ನೆರಡು ತಿಂಗಳಲ್ಲಿ ಹಣ ಬರಲಿದ್ದು, ಸಿಬ್ಬಂದಿಗೆ ವೇತನ ನೀಡಲಾಗುವುದು.
–ಹೆಸರು ಹೇಳಲಿಚ್ಚಿಸದ ಬಿಎಸ್‌ಎನ್‌ಎಲ್ ಅಧಿಕಾರಿ
ಬಿಎಸ್‌ಎನ್‌ಎಲ್ ನವರು ನಮಗೆ ಹಣ ನೀಡಿಲ್ಲ. ಹಣ ನೀಡಿದ ಕೂಡಲೇ ನೌಕರರಿಗೆ ಹಣ ಪಾವತಿಸುತ್ತೇವೆ. ಹುಸೇನ್ ಪಿರಜಾದೆಸಾಯಿ,
–ಶ್ರೀ ಸರ್ವಿಸ್ ವಿಜಯಪುರ
-ಗೋವಿಂದಪ್ಪ ತಳವಾರ