ಗದಗ: ಕಳೆದ ಒಂದೂವರೆ ತಿಂಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 12 ಪ್ರಕರಣಗಳು ಕಂಡು ಬಂದಿದ್ದು, ಸದ್ಯ ಏಳು ಪ್ರಕರಣಗಳು ಸಕ್ರಿಯವಾಗಿವೆ. ಆದರೆ, ಜನಹಿತಕ್ಕಾಗಿ ಲಾಕ್‌ಡೌನ್ ಸಡಿಲಿಕೆ ನೀಡಿದೆ ಎಂಬುದನ್ನೂ ಮರೆತು ವ್ಯಾಪಾರ-ವಹಿವಾಟಿಗೆ ಜನರು ಮುಗಿಬೀಳುತ್ತಿದ್ದಾರೆ. ಕೆಲವರು ಮುಖಕ್ಕೆ ಮಾಸ್ಕ್ ಧರಿಸುವುದಕ್ಕೆ ಅಸಡ್ಡೆ ತೋರುತ್ತಿರುವುದು ಅಪಾಯಕ್ಕೆ ಆಹ್ವಾನಿಸುವಂತಿದ್ದು, ದೊಡ್ಡ ತಲೆನೋವಾಗಿದೆ.
3ನೇ ಹಂತದ ಲಾಕ್‌ಡೌನ್ ಅವಧಿ ಯಲ್ಲಿ ದಿನದಿಂದ ದಿನಕ್ಕೆ ಮಾರುಕಟ್ಟೆ ಪ್ರದೇಶದಲ್ಲಿ ಜನ ಸಂದಣಿ ಹೆಚ್ಚುತ್ತಿದೆ. ರವಿವಾರ ಗದಗ-ಬೆಟಗೇರಿ ಅವಳಿ ನಗರ ಹಾಗೂ ಶಿರಹಟ್ಟಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಮಾರುಕಟ್ಟೆಯಲ್ಲಿ ಹೆಚ್ಚಿನ ಜನ ಸಂದಣಿ ಕಂಡುಬಂತು. ಈ ಮಧ್ಯೆ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ನಗರ-ಪಟ್ಟಣಗಳಲ್ಲಿ ಜನ ಸುರಕ್ಷಿತ ಅಂತರ ಕಾಯ್ದುಕೊಳ್ಳದೇ, ಮುಖಕ್ಕೆ ಮಾಸ್ಕ್ ಧರಿಸುವುದನ್ನೂ ಮರೆತಂತಿದೆ.
ಕೋವಿಡ್ ಸೋಂಕಿನಿಂದ ಮುಕ್ತಿಯಾಗದಿದ್ದರೂ ಸರ್ಕಾರ, ಆರ್ಥಿಕ ಉತ್ತೇಜನ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕೆಲವು ಕ್ಷೇತ್ರಗಳಿಗೆ ವಿನಾಯ್ತಿ ಘೋಷಿಸಿದ್ದರಿಂದ ಮಾರ್ಕೆಟ್ ಪ್ರದೇಶ ಸಂಪೂರ್ಣವಾಗಿ ತೆರೆದುಕೊಂಡಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 3 ಗಂಟೆವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿದೆ. ಆದರೆ, ಕೆಲವರು ಸಡಿಲಿಕೆಯನ್ನೇ ಸ್ವೇಚ್ಛಾಚಾರದಂತೆ ನಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ.
ಸಾಮಾಜಿಕ ಅಂತರ-ಮಾಸ್ಕ್ ಮರೆತ ಜನ: ಇದಾದ ಕೆಲ ದಿನಗಳ ನಂತರ ಜಿಲ್ಲೆಯಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಏರುಮುಖವಾಗಿವೆ. ಗುಜರಾತ್‌ನಿಂದ ಆಗಮಿಸಿದ ಐವರಿಗೆ ಹಾಗೂ ಗಂಜೀಬಸವೇಶ್ವರ ಸರ್ಕಲ್ ಭಾಗದ ಪಿ-512 ವ್ಯಕ್ತಿಯಿಂದ ಇಬ್ಬರಿಗೆ ಸೋಂಕು ಹರಡಿದ್ದರಿಂದ ಆತಂಕ ಸೃಷ್ಟಿಸಿದೆ. ಆದರೆ, ಇದೆಲ್ಲದರ ಮಧ್ಯೆಯೂ ಕೆಲವೆಡೆ ಅಂಗಡಿ-ಮುಂಗಟ್ಟುಗಳಿಗೆ ಜನ ಮುಗಿಬೀಳುವುದು, ಮಾಸ್ಕ್ ಇಲ್ಲದೇ ಮಾರುಕಟ್ಟೆ ಪ್ರದೇಶದಲ್ಲಿ ಸಂಚರಿಸುತ್ತಿದ್ದಾರೆ. ಬಿಸಿಲಿನ ಝಳ ಹೆಚ್ಚಿದೆ ಎಂಬ ನೆಪವೊಡ್ಡುವ ಮೂಲಕ ಮಾಸ್ಕ್ಗಳನ್ನು ಕುತ್ತಿಗೆ ಭಾಗದಲ್ಲಿ ಎಳೆ ಬಿಡುತ್ತಿರುವುದು ಕಳವಳಕಾರಿ ಸಂಗತಿ.
ಎಚ್ಚೆತ್ತುಕೊಳ್ಳಬೇಕಿದೆ ಜಿಲ್ಲಾಡಳಿತ: ಮೂರನೇ ಹಂತದ ಆರಂಭಿಕ ದಿನಗಳಲ್ಲಿ ಮಾಸ್ಕ್ ಇಲ್ಲದೇ ಹೊರ ಬರುವವರಿಗೆ ನಗರಸಭೆಯಿಂದ ದಂಡ ವಿಧಿ ಸಿ, ಮಾಸ್ಕ್ ವಿತರಿಸುವ ಮೂಲಕ ಸಾರ್ವಜನಿಕರಿಗೆ ಬಿಸಿ ಮುಟ್ಟಿಸುತ್ತಿತ್ತು. ಆದರೆ, ಒಂದರೆಡು ದಿನಗಳ ನಂತರ ಈ ಅಭಿಯಾನ ಬಹುತೇಕ ಸ್ಥಗಿತಗೊಂಡಂತಿದೆ. ಅಲ್ಲದೇ, ನಗರದ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕೆಲವೆಡೆ ಬ್ಯಾರಿಕೇಡ್ ಅಳವಡಿಸಿದ್ದು, ಆಯಾ ಭಾಗದಲ್ಲಿ ಮಾತ್ರ ಪೊಲೀಸರು ಕಂಡು ಬರುತ್ತಿದ್ದಾರೆ. ಹೀಗಾಗಿ ಕೋವಿಡ್ ಸೋಂಕು ತಡೆಯುವ ನಿಬಂಧನೆ ಬಗ್ಗೆ ಅಸಡ್ಡೆ ತೋರುವವರಿಗೆ ಹೇಳುವರು-ಕೇಳುವವರು ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯ.
ಮಹಾಮಾರಿ ಕೋವಿಡ್ ನಿಯಂತ್ರಿಸಲು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಮತ್ತು ಮುಖಕ್ಕೆ ಮಾಸ್ಕ್ ಧರಿಸುವುದೇ ಪ್ರಮುಖ ಅಸ್ತ್ರವಾಗಿವೆ. ಜನ ಜೀವನ ಅಸ್ತವ್ಯಸ್ತವಾಗದಿರಲಿ ಎಂದು ಜನ ಹಿತಕ್ಕಾಗಿ ಸರ್ಕಾರ ಲಾಕ್ ಡೌನ್‌ನಿಂದ ವ್ಯಾಪಾರ-ವಹಿವಾಟಿಗೆ ಷರತ್ತು ಬದ್ಧ ಸಡಿಲಿಕೆ ನೀಡಿವೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. –
ರಾಘವೇಂದ್ರ ಯಳವತ್ತಿ, ನಗರಸಭೆ ಮಾಜಿ ಸದಸ್ಯ
ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಸೋಂಕು ತಡೆಗೆ ಕೋವಿಡ್ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಕೆಲವರು ಮುಖಕ್ಕೆ ಮಾಸ್ಕ್ ಧರಿಸದೇ, ಓಡಾಡುತ್ತಿದ್ದಾರೆ. ಅಂತವರಿಗೆ ಅಧಿಕಾರಿಗಳು 500, 1000 ರೂ. ದಂಡ ಹಾಕಬೇಕು. ಮಾಸ್ಕ್ ಧರಿಸದ ಅಂಗಡಿಕಾರರ ಅಂಗಡಿ ಸೀಜ್ ಮಾಡಬೇಕು.
-ಮಹಾಲಕ್ಷ್ಮೀ ಡಂಬಳ, ಸ್ಥಳೀಯರು