ಬೆಂಗಳೂರು: ಸತತ ಮೂರನೇ ಬಾರಿಗೆ ಲಾಕ್‌ಡೌನ್ ವಿಸ್ತರಣೆ ಜತೆಗೆ ಡೆಲಿವರಿ ಬಾಯ್ ಒಬ್ಬನಿಗೆ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ “ಇ- ಕಾಮರ್ಸ್’ನಲ್ಲಿ ವ್ಯಾಪಾರ-ವಹಿವಾಟು ಇಳಿಮುಖವಾಗಿದ್ದು, ಈ ಕ್ಷೇತ್ರವನ್ನು ಅವಲಂಬಿಸಿದ ಡೆಲಿವರಿ ಬಾಯ್‌ಗಳ ಜೀವನ ನಿರ್ವಹಣೆಗೆ ಸಂಕಷ್ಟ ಎದುರಾಗಿದೆ.
21 ದಿನಗಳ ಕಾಲ ಮೊದಲ ಲಾಕ್‌ಡೌನ್ ಅವಧಿಯಲ್ಲಿ ಡೆಲಿವರಿ ಬಾಯ್‌ಗಳಿಗೆ ಭರ್ಜರಿ ಬೇಡಿಕೆ ಇತ್ತು. ಮನೆಯಲ್ಲಿ ಕುಳಿತ ಗ್ರಾಹಕರು, ಮೊಬೈಲ್‌ಗಳಲ್ಲಿ ತರಾವರಿ ಖಾದ್ಯಗಳನ್ನು ಬುಕಿಂಗ್ ಮಾಡುತ್ತಿದ್ದರು. ಇದರಿಂದ ಡೆಲಿವರಿ ಬಾಯ್‌ಗಳಿಗೆ ತುಸು ಕಮೀಷನ್ ಸಿಗುತ್ತಿತ್ತು. ನಿತ್ಯ ಹೆಚ್ಚು-ಕಡಿಮೆ ಸಾವಿರ ರೂ. ದುಡಿಯುತ್ತಿದ್ದರು. ಆದರೆ, ವಾರದಿಂದ 600 ರೂ. ದುಡಿಯುವುದೂ ಕಷ್ಟವಾಗಿದೆ. ಇದಕ್ಕೆ ಕಾರಣ “ಲಾಕ್‌ಡೌನ್ 3.0′!
ಮೊದಲ ಅವಧಿಯಲ್ಲಿ ಲಾಕ್‌ಡೌನ್ ವಿಸ್ತರಣೆಯಾಗುವ ಯಾವುದೇ ಸೂಚನೆಗಳಿರಲಿಲ್ಲ. ಹಾಗಾಗಿ, ಗ್ರಾಹಕರು ದೊಡ್ಡ ದೊಡ್ಡ ಹೋಟೆಲ್‌ಗಳಿಂದ ಬೇಕಾದ ಆಹಾರ, ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡುತ್ತಿದ್ದರು. ಆದರೆ, ಮತ್ತೆ ಎರಡನೇ ಹಂತಕ್ಕೆ ಮತ್ತೆ 19 ದಿನಗಳ ವಿಸ್ತರಿಸಲಾಯಿತು. ಇನ್ನೇನೂ ಲಾಕ್‌ಡೌನ್‌ಗೆ ತೆರೆಬಿತ್ತು ಎಂಬ ನಿರೀಕ್ಷೆಯಲ್ಲಿದ್ದಾಗ, ಇನ್ನೊಮ್ಮೆ ಎರಡು ವಾರಗಳ ಮಟ್ಟಿಗೆ “ಬಂದ್’ ಮುಂದುವರಿಯಿತು. ಈ ಮಧ್ಯೆ ಮತ್ತೂಂದೆಡೆ ವೇತನ ಕಡಿತ, ಕೆಲಸಕ್ಕೆ ಕತ್ತರಿ ಹಾಕುವ ಆಂತಕ ಎದುರಾಗಿದೆ. ಇದರಿಂದ ಜನ “ಲೆಕ್ಕಾಚಾರ ಜೀವನ’ಕ್ಕೆ ಮೊರೆಹೋಗಿದ್ದಾರೆ. ಉಳಿತಾಯದ ಲೆಕ್ಕಾಚಾರ: “ಮೊದಲೆಲ್ಲಾ ಸತತ ಮೂರು ಬಾರಿ ಲಾಕ್ ಡೌನ್ ಮಾಡಲಾಯಿತು. ಬಹುತೇಕರಿಗೆ ಸಂಪೂರ್ಣ ವೇತನ ಪಾವತಿಯಾಗಿಲ್ಲ. ಇನ್ನು ಕೆಲವರಿಗೆ ವೇತನವೇ ಆಗಿಲ್ಲ. ಹಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಾಗಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಸಾಧ್ಯವಾದಷ್ಟು ಉಳಿತಾಯ ಮಾಡುತ್ತಿದ್ದಾರೆ. ಉದಾಹರಣೆಗೆ 40 ರೂ. ಮೊತ್ತದ ಫುಡ್ ಅನ್ನು ಆ್ಯಪ್ ನಲ್ಲಿ ಆರ್ಡರ್ ಮಾಡಿದರೆ, 20 ರೂ. ಸೇವಾ ಶುಲ್ಕವೇ ಆಗುತ್ತದೆ. ಖುದ್ದು ಬಂದು ತೆಗೆದುಕೊಂಡು ಹೋದರೆ, ಆ 20 ರೂ. ಉಳಿಸಬಹುದು ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ. ಇನ್ನೂ ಕೆಲವರು ಮನೆ ಊಟವೇ ಮೇಲು ಎಂಬ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮತ್ತೂಬ್ಬ ಡೆಲಿವರಿ ಬಾಯ್ ಮಲ್ಲೇಶ್ವರದ ಮೋಹನ್ ತಿಳಿಸುತ್ತಾರೆ.
ಲಾಕ್‌ಡೌನ್‌ನಿಂದ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಸಹಜವಾಗಿ ಜನರ ಆದ್ಯತೆ ಉಳಿತಾಯವೇ ಆಗಿರುತ್ತದೆ. ಈ ಮೊದಲು ಮೋರ್ ಅಥವಾ ಸೂಪರ್ ಮಾರ್ಕೆಟ್‌ಗೆ ಹೋದಾಗ, ಅಗತ್ಯಕ್ಕಿಂತ ಹೆಚ್ಚು ಚಿಪ್ಸ್, ಸಾಫ್ಟ್ ಡ್ರಿಂಕ್ಸ್‌ನಂತಹ ಅನಗತ್ಯ ವಸ್ತುಗಳ ಕಡೆಗೆ ಗ್ರಾಹಕರ ಗಮನ ಕೇಂದ್ರೀಕೃತವಾಗಿರುತ್ತಿತ್ತು. ಈಗ ಆ ಧೋರಣೆ ಬದಲಾಗಿದೆ. ಇದೇ ಮನಃಸ್ಥಿತಿ ಮೊಬೈಲ್‌ನಲ್ಲಿ ಬುಕಿಂಗ್ ಮಾಡುವ ಫುಡ್‌ಗೂ ಅನ್ವಯ ಆಗುತ್ತದೆ ಎಂದು ತಜ್ಞರೊಬ್ಬರು ತಿಳಿಸಿದರು.
ಆನ್‌ಲೈನ್ ಆರ್ಡರ್ ಶೇ.30-40ರಷ್ಟು ಕುಸಿತ : “ದೆಹಲಿಯಲ್ಲಿ ಈ ಹಿಂದೆ ಡೆಲಿವರಿ ಬಾಯ್‌ಗೆ ಸೋಂಕು ತಗುಲಿತ್ತು. ಬುಧವಾರ ಬೆಂಗಳೂರಲ್ಲಿನ ಡೆಲಿವರಿ ಬಾಯ್‌ನಲ್ಲೂ ಸೋಂಕು ದೃಢಪಟ್ಟಿದೆ. ಅಪಾರ್ಟ್ ಮೆಂಟ್‌ಗಳಲ್ಲಿ ಇದ್ದವರು ಖುದ್ದು ಗೇಟ್‌ವರೆಗೆ ಹೋಗಿ ಆರ್ಡರ್ ಮಾಡಿದ ಪ್ಯಾಕೆಟ್ ತೆಗೆದುಕೊಂಡು ಬರಬೇಕಾಗುತ್ತದೆ. ಇದೆಲ್ಲವೂ ರಿಸ್ಕ್ ಆಗಿದ್ದು, ಪಕ್ಕದಲ್ಲಿರುವ ಕಿರಾಣಿ ಅಂಗಡಿಯೇ ಸೇಫ್ ಎಂಬ ಮನೋಭಾವ ಮೂಡಿದೆ. ಇದರಿಂದಾಗಿ ಅಂದಾಜು ಶೇ. 30-40ರಷ್ಟು ಫುಡ್ ಅಥವಾ ದಿನಸಿ ವಸ್ತುಗಳ ಆನ್‌ಲೈನ್ ಆರ್ಡರ್‌ಗಳು ಕಡಿತಗೊಂಡಿರುವ ಸಾಧ್ಯತೆ ಇದೆ’ ಎಂದು ಪಿಕ್ಸೆಲ್ ಸಾಫ್ಟ್ಟೆಕ್ ಪ್ರೈ.ಲಿ., ವ್ಯವಸ್ಥಾಪಕ ನಿರ್ದೇಶಕ ಪಿ.ವಿ. ರೈ ಅಭಿಪ್ರಾಯಪಡುತ್ತಾರೆ.
3 ಗಂಟೆಯಾದ್ರೂ ಮೂರೇ ಆರ್ಡರ್! : “ಕೇವಲ ಹತ್ತು ದಿನಗಳ ಹಿಂದೆ ನಾನು ಬೆಳಗ್ಗೆಯಿಂದ ಸಂಜೆ ವೇಳೆಗೆ ಸಾವಿರ ರೂ. ದುಡಿಯುತ್ತಿದ್ದೆ. ಆದರೆ, ವಾರದಿಂದ ಈಚೆಗೆ ಆರ್ಡರ್ ಗಳು ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ. ಬೆಳಗ್ಗೆ 10 ಗಂಟೆಗೆ ಲಾಗ್ ಇನ್ ಆಗಿದ್ದೇನೆ. ಮಧ್ಯಾಹ್ನ 1 ಗಂಟೆಯಾದರೂ 3 ಟಚ್ ಪಾಯಿಂಟ್ ಗಳನ್ನು ಅಟೆಂಡ್ ಮಾಡಿದ್ದೇನೆ. ಈ ಹಿಂದೆ ಇದೇ ಅವಧಿ ಯಲ್ಲಿ 5ರಿಂದ 6 ಆರ್ಡರ್ ಕವರ್ ಮಾಡುತ್ತಿದ್ದೆ. ಇದರಿಂದ 90 ರೂ. ಕಮೀಷನ್ ಬಂದಿದೆ ಅಷ್ಟೇ’ ಎಂದು ರಾಜಾಜಿನಗರ 2ನೇ ಬ್ಲಾಕ್‌ನ ಪದವಿ ವಿದ್ಯಾರ್ಥಿ ಹಾಗೂ ಸ್ವಿಗ್ಗಿ ಡೆಲಿವರಿ ಬಾಯ್ ಪ್ರಮೋದ್ ಬೇಸರ ವ್ಯಕ್ತಪಡಿಸುತ್ತಾರೆ.
–ವಿಜಯಕುಮಾರ್ ಚಂದರಗಿ