Advertisement

ತ್ರಿವಳಿ ಪ್ರೇಮದಲ್ಲಿದೆ ಮಹಾಕಾವ್ಯದ ಬೀಜ

06:50 PM Aug 12, 2019 | mahesh |

ರಾಮಾಯಣದಲ್ಲೊಂದು ಸೂಕ್ಷ್ಮ ಗಮನಿಸಿದ್ದೀರಾ? ಅಲ್ಲಿ ನೂರಾರು ರೂಪಗಳಲ್ಲಿ ಪ್ರೇಮ ತೆರೆದುಕೊಳ್ಳುತ್ತದೆ. ಸೌಂದರ್ಯಕ್ಕೆ, ಶೌರ್ಯಕ್ಕೆ, ವ್ಯಾಮೋಹಕ್ಕೆ, ಆಸರೆಗೆ, ಅನುಕಂಪಕ್ಕೆ, ಅನಿವಾರ್ಯತೆಗೆ, ಭಕ್ತಿಗೆ, ಸ್ನೇಹಕ್ಕೆ…ಹೀಗೆ ಭಿನ್ನ ಆಯಾಮಗಳು ಪ್ರೇಮದ ರೂಪ ತಳೆಯುತ್ತವೆ. ಇಲ್ಲಿನ ಪ್ರೇಮದ ಪ್ರತಿಯೊಂದು ಆಯಾಮವೂ; ಪರಸ್ಪರ ಬೆಸುಗೆ ಹಾಕಿಕೊಂಡು, ಮಹಾಮಹಾ ಚರಿತ್ರೆಯನ್ನು ಸೃಷ್ಟಿಸುತ್ತವೆ. ಹೀಗೊಂದು ತ್ರಿವಳಿ ಪ್ರೇಮದಲ್ಲೇ ರಾಮಾಯಣದ ಬೀಜವಿದೆ. ದಶರಥನಿಗೆ ಕೈಕೇಯಿಯ ಮೇಲೆ, ಕೈಕೇಯಿಗೆ ತನ್ನನ್ನು ತಾಯಿಯಂತೆ ಬೆಳೆಸಿದ ಸೇವಕಿ ಮಂಥರೆಯ ಮೇಲೆ, ಮಂಥರೆಗೆ ಪುತ್ರಿಯಂತಿದ್ದ ಕೈಕೇಯಿಯ ಮೇಲೆ ಪ್ರೀತಿ.

Advertisement

ದಶರಥನ ನಿಜ ಹೆಸರು ನೇಮಿ. ಆತನಿಗೆ ರಥವನ್ನು ಹತ್ತೂ ದಿಕ್ಕಿನಲ್ಲಿ ನಡೆಸಬಲ್ಲ ಅಸಾಮಾನ್ಯ ಕೌಶಲ್ಯವಿರುತ್ತದೆ. ಅದಕ್ಕೆ ಆತ ದಶರಥ. ಕೌಸಲ್ಯೆಯಲ್ಲಿ ಮಕ್ಕಳಾಗಲಿಲ್ಲವೆಂದು ಈತ ಕೇಕೆಯ ರಾಜ ಅಶ್ವಪತಿಯ ಪುತ್ರಿ, ಸುಂದರಿ ಕೈಕೇಯಿಯನ್ನು ವಿವಾಹವಾಗುತ್ತಾನೆ. ಈ ವಿವಾಹವೇ ಮುಂದಿನ ಎಲ್ಲ ಘಟನೆಗಳಿಗೆ ಕಾರಣವೆಂದರೆ ಯಾರೂ ಅನ್ಯಥಾ ಭಾವಿಸಬಾರದು. ಕೈಕೇಯಿ ಚಿಕ್ಕ ವಯಸ್ಸಿನಲ್ಲಿ ತಾಯಿಯ ಆಶ್ರಯದಿಂದ ವಂಚಿತಳಾಗಿ, ಸೇವಕಿ ಮಂಥರೆಯ ಆರೈಕೆಯಲ್ಲಿ ಬೆಳೆಯುತ್ತಾಳೆ. ಆದ್ದರಿಂದ ಮಂಥರೆಯೆಂದರೆ ಅವಳಿಗೆ ಅಷ್ಟು ಮಮತೆ. ಹಾಗೆಯೇ ಮಂಥರೆಗೂ. ಕೈಕೇಯಿ ಎಲ್ಲೆಲ್ಲಿ ಹೋಗುತ್ತಾಳ್ಳೋ, ಅಲ್ಲೆಲ್ಲ ಈಕೆ ಹಿಂಬಾಲಿಸಿಕೊಂಡು ಬರುತ್ತಾಳೆ. ಇವರಿಬ್ಬರ ನಡುವಿನ ಪ್ರೀತಿಗೆ ನೀವು ಯಾವುದೇ ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ. ನಮಗೆ ನಿಮಗೆ ಅದು ಸ್ವಾರ್ಥವೆಂದು ಕಾಣಿಸಿದರೂ, ಪರಸ್ಪರರ ಯೋಗಕ್ಷೇಮದ ಬಗ್ಗೆ ಅಷ್ಟು ತೀವ್ರತರವಾದ ಕಾಳಜಿ ಹೊಂದಿದ್ದ ಅವರಿಗೆ ಅದು ಯಾವತ್ತೂ ಸ್ವಾರ್ಥವೆಂಬ ಭಾವ ಹುಟ್ಟಿರಲಿಕ್ಕಿಲ್ಲ.

ಕೈಕೇಯಿಯ ತಂದೆ ಅಶ್ವಪತಿಗೆ ಅಶ್ವಪತಿಗೆ ಪಕ್ಷಿಗಳ ಭಾಷೆ ಅರಿಯುವ ಶಕ್ತಿಯಿರುತ್ತದೆ. ಆದರೆ ಪಕ್ಷಿಗಳು ಏನು ಮಾತನಾಡಿಕೊಳ್ಳುತ್ತವೆನ್ನುವುದನ್ನು ಅವನು ಯಾರಿಗೂ ತಿಳಿಸುವ ಹಾಗಿರುವುದಿಲ್ಲ. ತಿಳಿಸಿದರೆ ಸಾವೇ ಗತಿ. ಹಾಗೊಮ್ಮೆ ಅವನ ಪತ್ನಿ ಇಂದುಮತಿಯೊಂದಿಗೆ ಉದ್ಯಾನವನದಲ್ಲಿ ಹೋಗುವಾಗ ಎರಡು ಹಂಸಪಕ್ಷಿಗಳು ಮಾತನಾಡಿಕೊಳ್ಳುವುದು ಕೇಳುತ್ತದೆ. ಅವುಗಳ ಸಂಭಾಷಣೆ ಕೇಳಿ ಅವನು ಗಹಗಹಿಸಿ ನಗುತ್ತಾನೆ. ಯಾಕೆ ಹಾಗೆ ನಕ್ಕಿದ್ದೆಂದು ಇಂದುಮತಿ ಒತ್ತಾಯಿಸಿ, ಒತ್ತಾಯಿಸಿ ಕೇಳುತ್ತಾಳೆ. ಅದನ್ನು ಹೇಳುವ ಹಾಗಿಲ್ಲ, ಹೇಳಿದರೆ ತನ್ನ ಸಾವಾಗುತ್ತದೆ ಎಂದರೂ ಆಕೆ ಒತ್ತಾಯಿಸುತ್ತಾಳೆ. ಸಿಟ್ಟಿಗೆದ್ದ ರಾಜ ಆಕೆಯನ್ನು ತವರಿಗೆ ಕಳಿಸಿಬಿಡುತ್ತಾನೆ. ಹೀಗೆ ಕೈಕೇಯಿ ತಬ್ಬಲಿಯಾಗುತ್ತಾಳೆ. ಮಂಥರೆಯೇ ಎಲ್ಲವೂ ಆಗಿಬಿಡುತ್ತಾಳೆ. ಇಬ್ಬರ ನಡುವಿನ ಬಂಧುರತೆಗೆ ಇದು ಕಾರಣ.

ಮಂಥರೆಯ ಮಾತನ್ನು ಕೈಕೇಯಿ ಎಷ್ಟು ನಂಬುತ್ತಾಳೆಂದರೆ, ಅದರಲ್ಲಿ ಸರಿ ಯಾವುದು, ತಪ್ಪು ಯಾವುದು ಎನ್ನುವುದನ್ನು ಆಕೆ ವಿಶ್ಲೇಷಿಸುವುದಿಲ್ಲ. ಸ್ವರ್ಗದ ಅಧಿಪತಿ ಇಂದ್ರನ ವೈರಿ ಶಂಬಾಸುರನೊಂದಿಗೆ ದಶರಥ ಯುದ್ಧ ಮಾಡುವಾಗ ತನ್ನನ್ನು ಜೊತೆಗೊಯ್ಯುವಂತೆ ಕೈಕೇಯಿ ಕೇಳಿಕೊಳ್ಳುತ್ತಾಳೆ. ಇದಕ್ಕೂ ಕಾರಣ ಮಂಥರೆ. ಯುದ್ಧದ ವೇಳೆ ದಶರಥನ ರಥ ಚಕ್ರವೊಂದು ಮುರಿಯುತ್ತದೆ. ಶಂಬಾಸುರನ ಬಾಣ, ಕವಚವನ್ನು ಭೇದಿಸಿ ದಶರಥನ ಎದೆಗೆ ಚುಚ್ಚಿಕೊಳ್ಳುತ್ತದೆ. ಇಂತಹ ಇಕ್ಕಟ್ಟಿನಲ್ಲಿ ಕೈಕೇಯಿ ತನ್ನ ಚಾಕಚಕ್ಯತೆ ತೋರುತ್ತಾಳೆ. ಕೂಡಲೇ ಅವಳು ರಥದ ಚಕ್ರವನ್ನು ಸರಿಪಡಿಸಿ, ತಾನೇ ಸಾರಥಿಯಾಗಿ ದಶರಥನಿದ್ದ ರಥವನ್ನು ರಣಾಂಗಣದಿಂದ ದೂರಕ್ಕೆ ಒಯ್ಯುತ್ತಾಳೆ. ದಶರಥನ ಪ್ರಾಣ ಉಳಿಯುತ್ತದೆ. ಈ ಕೃತಜ್ಞತೆಗೆ ನೀನು ಕೇಳಿದ್ದು ಕೊಡುತ್ತೇನೆ, ಕೇಳಿಕೊ ಎನ್ನುತ್ತಾನೆ. ಕೈಕೇಯಿ ತನಗೆ ಈಗ ಬೇಡ, ಬೇಕಾದಾಗ ಕೇಳಿಕೊಳ್ಳುತ್ತೇನೆ ಎಂದು ಸುಮ್ಮನಾಗುತ್ತಾಳೆ. ರಾಮನಿಗೆ ಯುವರಾಜನೆಂದು ಪಟ್ಟಾಭಿಷೇಕ ಮಾಡುವ ಮುನ್ನಾದಿನ ಈ ವರವನ್ನು ನೆನಪು ಮಾಡಿಕೊಡುವವಳು ಮಂಥರೆ. ರಾಮನಿಗಿಂತ ಭರತನೇ ದೊಡ್ಡವನೆಂದು ನೆನಪು ಮಾಡಿಕೊಡುವವಳೂ ಅವಳೇ. ಮುಂದೇನು ನಡೆಯುತ್ತದೆಯೆನ್ನುವುದು ನಿಮಗೇ ಗೊತ್ತು.

-ನಿರೂಪ

Advertisement
Advertisement

Udayavani is now on Telegram. Click here to join our channel and stay updated with the latest news.

Next