Advertisement
ಇದೇ ವೇಳೆ, ತಿರುವನಂತಪುರದಲ್ಲಿ ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದಿರುವ ಅವರು, “”ಪ್ರಕರಣಗಳು ಹೆಚ್ಚಾಗಿದ್ದರಿಂದ ಬಿಗಿ ನಿಲುವು ತಳೆಯಲಾಗಿದೆ. ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಔಷಧಿ ಹಾಗೂ ವೈದ್ಯಕೀಯ ಸೇವೆಗಳಂಥ ಅಗತ್ಯ ಹಾಗೂ ತುರ್ತು ಸೇವೆಗಳಿಗಷ್ಟೇ ಅನುಮತಿ ನೀಡಲಾಗಿದೆ. ಇನ್ನು ಕಂಟೈನ್ಮೆಂಟ್ ವಲಯಗಳಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಆ ಪ್ರಾಂತ್ಯಗಳಲ್ಲಿ ಆಹಾರ ಡೆಲಿವರಿ ಬಾಯ್‌ಗಳನ್ನು ಸಮಗ್ರ ಪರೀಕ್ಷೆ ನಡೆಸಿದ ನಂತರವಷ್ಟೇ ವಲಯಗಳ ಒಳಗೆ ಪ್ರವೇಶ ಕಲ್ಪಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ. ಹೀಗಾಗಿ ಈ ಕಾಲಾವಧಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಕೇರಳ ವಿಶ್ವವಿದ್ಯಾಲಯ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಇದು ಮೂರು ಹಂತದ ಲಾಕ್‌ಡೌನ್. ಮೊದಲ ಹಂತದಲ್ಲಿ ಯಾವುದೇ ವಾಹನವನ್ನು ತಿರುವನಂತಪುರ ಕಾರ್ಪೊರೇಷನ್ ಸರಹದ್ದಿನ ಒಳಗೆ ಹಾಗೂ ಅದರೊಳಗಿನ ಹೊರಗೆ ಹೋಗಲು ಅವಕಾಶ ಕೊಡುವುದಿಲ್ಲ. ಎರಡನೇ ಹಂತದಲ್ಲಿ, ಕೊರೊನಾ ಪ್ರಕರಣಗಳು ಹೆಚ್ಚು ದಾಖಲಾಗಿರುವ ಕಡೆಗಳಲ್ಲಿ ಬಿಗಿ ಲಾಕ್‌ಡೌನ್ ಜಾರಿಗೊಳಿಸಿ, ಅಲ್ಲಿಂದ ಸೋಂಕು ಅಕ್ಕಪಕ್ಕದ ವಲಯಗಳಿಗೆ ಹರಡದಂತೆ ಎಚ್ಚರ ವಹಿಸಲಾಗುತ್ತದೆ. ಮೂರನೇ ಹಂತದಲ್ಲಿ, ಕೊರೊನಾ ಸೋಂಕು ದೃಢಪಟ್ಟಿರುವ ಮನೆಗಳನ್ನು ಕಟ್ಟುನಿಟ್ಟಾಗಿ ಸೀಲ್ ಮಾಡಲಾಗುತ್ತದೆ. ಆ ಮನೆಯಿಂದ ಸೋಂಕು ಅಕ್ಕಪಕ್ಕದ ಮನೆಗಳಿಗೆ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತದೆ.