Advertisement

ಟ್ರಿಪ್‌ ಹೋಗ್ತಾ ಇದೀರಾ?ಇಲ್ಲೊಂದಿಷ್ಟು ಟಿಪ್ಸ್‌ ಇವೆ,ನೋಡ್ಕಂಡ್‌ ಹೋಗಿ

09:45 AM Feb 22, 2017 | |

ರಜೆ ಹತ್ತಿರ ಬರುತ್ತಿದೆ. ಒಂದು ಫ್ಯಾಮಿಲಿ ಟ್ರಿಪ್‌ ಹೋಗೋಣವೇ? ಮನೆಯ ಒಬ್ಬ ಸದಸ್ಯನಿಂದ ಇಂಥದ್ದೊಂದು ಪ್ರಸ್ತಾಪ ಕೇಳಿ ಬಂದರಾಯ್ತು, ಮಕ್ಕಳು ಸೇರಿದಂತೆ ಮನೆ ಮಂದಿಗೆಲ್ಲಾ ಖುಷಿಯೋ ಖುಷಿ. ಎಲ್ಲರೂ ಹೊರಟೇ ಬಿಡುತ್ತಾರೆ. ಆದರೆ, ಇಡೀ ಮನೆಯ ಜವಾಬ್ದಾರಿ ಹೊತ್ತಿರುವ ಅಮ್ಮಂದಿರಿಗೆ, ಪಿಕ್‌ನಿಕ್‌- ಟೂರ್‌ ಕೂಡ ಪ್ರಯಾಸದ ಕೆಲಸವೇ. ಎಲ್ಲರನ್ನೂ, ಎಲ್ಲವನ್ನೂ ರೆಡಿ ಮಾಡಬೇಕು, ಲಗೇಜ್‌ ತುಂಬಬೇಕು,  ಬೇಕು-ಬೇಡಗಳನ್ನು ನೋಡಿಕೊಳ್ಳಬೇಕು. ಈ ತರಾತುರಿಯಲ್ಲಿ ಏನೇನನ್ನೋ ಮರೆತು, ಗೊಂದಲಕ್ಕೀಡಾಗಬಾರದು ಅಲ್ಲವೇ? ಅದಕ್ಕಾಗಿಯೇ ಕೆಲವು ಟಿಪ್ಸ್‌ ಇಲ್ಲಿದೆ.

Advertisement

1. ಪ್ರದೇಶದ ಬಗ್ಗೆ ಅರಿಯಿರಿ
ಮೊದಲು ನೀವು ಹೋಗುತ್ತಿರುವ ಪ್ರದೇಶ ಫ್ಯಾಮಿಲಿ ಫ್ರೆಂಡ್ಲಿಯೇ ಎಂಬುದನ್ನು ಅರಿಯಿರಿ. ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ಆ ಪ್ರದೇಶಕ್ಕೆ ಹೋದವರ ಅನುಭವಗಳನ್ನು ಓದಿಕೊಂಡು, ಆ ಊರಿನ ಪರಿಸರ, ಅಲ್ಲಿನ ವಾತಾವರಣ ನಿಮ್ಮ 
ಮನೆಯ ಸದಸ್ಯರಿಗೆ ಸರಿಹೊಂದುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ.

2. ಮುನ್ನೆಚ್ಚರಿಕೆ ವಹಿಸಿ
ಪ್ರವಾಸ ಹೋದಾಗ ಆಕಸ್ಮಿಕವಾಗಿ ಜೊತೆಯಾಗಬಹುದಾದ ಎಲ್ಲ ರೀತಿಯ ಅಪಾಯಗಳು, ವಿದ್ಯಮಾನಗಳನ್ನು ಊಹಿಸಿಕೊಳ್ಳಿ. ಅಪ್ಪ-ಅಮ್ಮನಿಗೆ ಏನಾದರೂ ತೊಂದರೆಯಾದರೆ, ಗುಂಪಿನಿಂದ ಪ್ರತ್ಯೇಕವಾದರೆ, ಅಪರಿಚಿತ ವ್ಯಕ್ತಿಗಳಿಂದ ಸಮಸ್ಯೆ ಎದುರಾದರೆ ಏನು ಮಾಡಬೇಕು, ಹೇಗೆ ವರ್ತಿಸಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಿ.

3. ವೈದ್ಯಕೀಯ ತುರ್ತು ಅಗತ್ಯಗಳು
ಪ್ರವಾಸಕ್ಕಲ್ಲವೇ ಎಂದು ಹಾಗೇ ಎದ್ದು ಹೋಗುವುದು ಸರಿಯಲ್ಲ. ಬಟ್ಟೆ-ಬರೆಗಳನ್ನು ಪ್ಯಾಕ್‌ ಮಾಡುವಾಗ ಅದರೊಂದಿಗೆ ಜ್ವರ, ತಲೆನೋವು, ನೆಗಡಿ, ಸಣ್ಣಪುಟ್ಟ ಗಾಯಗಳಿಗೆ ಬೇಕಾದ ಔಷಧಗಳು, ಬ್ಯಾಂಡೇಡ್‌ಗಳನ್ನೂ ಕಟ್ಟಿಕೊಳ್ಳಿ. ನಿಮ್ಮಲ್ಲಿ ಯಾರಿಗಾದರೂ ಅನಾರೋಗ್ಯ ಕಂಡುಬಂದರೆ ಗೊಂದಲಕ್ಕೀಡಾಗುವುದು ತಪ್ಪುತ್ತದೆ.

4. ಗಾಢ ಬಣ್ಣದ ಉಡುಪು
ಜನಜಂಗುಳಿ ಹೆಚ್ಚಿರುವ ಪ್ರದೇಶಕ್ಕೆ ಹೋಗುವುದಾದರೆ, ಮಕ್ಕಳಿಗೆ ಗಾಢ ಬಣ್ಣದ ಉಡುಪನ್ನು ಧರಿಸಿರಿ. ಒಂದು ವೇಳೆ, ಜನರ ನಡುವೆ ಮಕ್ಕಳೇನಾದರೂ ಕಳೆದುಹೋದರೆ, ಅವರನ್ನು ಹುಡುಕಲು ಸುಲಭವಾಗುತ್ತದೆ. ಆದಷ್ಟು, ಎಲ್ಲಿ ಹೋಗುವುದಿದ್ದರೂ ಎಲ್ಲರೂ ಒಟ್ಟಾಗಿ ಹೋಗಿರಿ. ಮಕ್ಕಳು, ಹಿರಿಯರ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.

Advertisement

5. ಎಲ್ಲವನ್ನೂ ಶೇರ್‌ ಮಾಡಬೇಡಿ
ಟೂರ್‌ ಹೋಗುವುದೇನೋ ಸರಿ. ಆದರೆ, ಹೋದಲ್ಲೆಲ್ಲ ತೆಗೆಸಿಕೊಂಡ ಫ್ಯಾಮಿಲಿ ಫೋಟೋವನ್ನು ಅಪ್‌ಲೋಡ್‌ ಮಾಡುವುದು, ನಾವೆಲ್ಲ ಇಂತಿಷ್ಟು ದಿನ ಟೂರ್‌ ಹೋಗುತ್ತಿದ್ದೇವೆ, ಇಂಥ ದಿನವೇ ವಾಪಸ್‌ ಬರುತ್ತೇವೆ ಎಂಬೆಲ್ಲ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅಭ್ಯಾಸ ಬೇಡ. ಏಕೆಂದರೆ, ಕಳವು ಮಾಡಲು ಹೊಂಚುಹಾಕುವವರಿಗೆ ನೀವು ಮನೆಯಲ್ಲಿಲ್ಲ ಎಂಬ ಮಾಹಿತಿಯನ್ನು ನೀವೇ ಕೊಟ್ಟಂತಾಗುತ್ತದೆ.

– ದಿಯಾ
 

Advertisement

Udayavani is now on Telegram. Click here to join our channel and stay updated with the latest news.

Next