“ಕೆಂಪೇಗೌಡ -2′ ಚಿತ್ರ ಆರಂಭವಾಗುತ್ತಿದೆ ಎಂಬ ಸುದ್ದಿ ಹರಡಿದ ದಿನದಿಂದಲೂ ಅನೇಕರಲ್ಲಿ ಒಂದು ಕುತೂಹಲವಿತ್ತು. ಅದೇನೆಂದರೆ “ಕೆಂಪೇಗೌಡ-2’ನಲ್ಲಿ ಯಾರು ನಟಿಸುತ್ತಾರೆ, ಸುದೀಪ್ ಇರುತ್ತಾರಾ ಎಂಬ ಪ್ರಶ್ನೆ ಅನೇಕರಲ್ಲಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುದೀಪ್ ಬದಲು “ಕೆಂಪೇಗೌಡ-2’ನಲ್ಲಿ ಕೋಮಲ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರ ಟೈಟಲ್ ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಈ ಹಿಂದೆ “ಕೆಂಪೇಗೌಡ’ ಚಿತ್ರ ನಿರ್ಮಿಸಿದ ಶಂಕರೇಗೌಡ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರಿಗೆ ಈ ಬಾರಿ ಶಂಕರ್ ರೆಡ್ಡಿ ಕೂಡಾ ಸಾಥ್ ನೀಡುತ್ತಿದ್ದಾರೆ. ಟ್ರೇಲರ್ ಹಾಗೂ ಶಂಕರೇಗೌಡ ಅವರ “ಎಸ್ ಕಂಪೆನಿ’ ಲಾಂಚ್‌ಗೆ ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಸೇರಿದಂತೆ ಅನೇಕರು ಅತಿಥಿಯಾಗಿ ಆಗಮಿಸಿದ್ದರು.
ಅಂದಹಾಗೆ, “ಕೆಂಪೇಗೌಡ-2′ ಚಿತ್ರವನ್ನು ರೋಶನ್ ಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಪಡೆದಿರುವ ರೋಶನ್ ಮೋಹನ್ ಅವರು ಈಗ “ಕೆಂಪೇಗೌಡ -2′ ಮಾಡುತ್ತಿದ್ದಾರೆ. ಸುದೀಪ್ ಅವರ “ಕೆಂಪೇಗೌಡ’ ತಮಿಳಿನ “ಸಿಂಗಂ’ ಚಿತ್ರದ ರೀಮೇಕ್ ಆಗಿತ್ತು. ಆ ನಂತರ “ಸಿಂಗಂ-2′ ಕೂಡಾ ಬಂತು. ಹಾಗಾಗಿ, ಇದು ಕೂಡಾ ರೀಮೇಕ್ ಸಿನಿಮಾನಾ ಎಂಬ ಪ್ರಶ್ನೆ ಬರೋದು ಸಹಜ. ಆದರೆ ಇದು ರೀಮೇಕ್ ಅಲ್ಲ. ಸ್ವಮೇಕ್ ಸಿನಿಮಾ.
ಚಿತ್ರದ ಬಗ್ಗೆ ಮಾತನಾಡುವ ಕೋಮಲ್, “ಇದು ರೀಮೇಕ್ ಸಿನಿಮಾ ಅಲ್ಲ. ಪಕ್ಕಾ ಒರಿಜಿನಲ್ ಸಿನಿಮಾ. ಅದೇ ಕಾರಣಕ್ಕೆ ಚಿತ್ರಕ್ಕೆ “ಪಕ್ಕಾ ಒರಿಜಿನಲ್’ ಎಂಬ ಟ್ಯಾಗ್‌ಲೈನ್ ಇದೆ. ತುಂಬಾ ಸಹಜವಾಗಿ, ಸಿನಿಮ್ಯಾಟಿಕ್ ಆಗಿಯೂ ಇರದೆ, ಈ ಸಿನಿಮಾ ಮೂಡಿಬರುತ್ತದೆ. ಡಿಜಿಟಲ್ ಇಂಡಿಯಾದಲ್ಲಿ ಸೈಬರ್ ಕ್ರಿಮಿನಲ್‌ಗಳು ಕೂಡಾ ಜಾಸ್ತಿಯಾಗುತ್ತಿದ್ದಾರೆ. ಬೇರೆ ಕ್ರಿಮಿನಲ್‌ಗಳಿಗಿಂತ ಆ ತರಹದ ಕ್ರಿಮಿನಲ್‌ಗಳನ್ನು ಹಿಡಿಯೋದು ಪೊಲೀಸ್ ಇಲಾಖೆಗೆ ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ನಾಯಕ ಯಾವ ತರಹ ಸೈಬರ್ ಕ್ರಿಮಿನಲ್ ಸೇರಿದಂತೆ ಇತರ ಕ್ರಿಮಿನಲ್‌ಗಳನ್ನು ಮಟ್ಟ ಹಾಕುತ್ತಾನೆ ಎಂಬ ಲೈನ್‌ನೊಂದಿಗೆ ಕಥೆ ಸಾಗುತ್ತದೆ. ತುಂಬಾ ಸಹಜವಾಗಿ, ನೈಜತೆಯೊಂದಿಗೆ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇವೆ. ಅದು ನಟನೆಯಿಂದ ಹಿಡಿದು ಕಾನೂನು ಅಂಶಗಳವರೆಗೂ. ಹಾಗಾಗಿಯೇ ಪೊಲೀಸ್ ಆಫೀಸರ್‌ಗಳಲ್ಲಿ ಮಾತನಾಡಿ, ಚಿತ್ರಕ್ಕೆ ಪೂರಕವಾದ ಕಾನೂನಿನ ಅರಿವು, ಕೇಸ್‌ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಯಾವುದೇ ಒಂದು ಅಂಶದಲ್ಲೂ ತಪ್ಪು ಕಾಣಬಾರದು. ಈಗ ಪ್ರೇಕ್ಷಕರು ತುಂಬಾ ಬುದ್ಧಿವಂತರು. ಏನೇ ತಪ್ಪಾದರೂ ಬೇಗನೇ ಗುರುತಿಸುತ್ತಾರೆ. ಹಾಗಾಗಿ, ಯಾವುದೇ ಆಭಾಸ ಆಗಬಾರದು ಎಂದು ಎಚ್ಚರ ವಹಿಸುತ್ತಿದ್ದೇವೆ’ ಎನ್ನುವುದು ಕೋಮಲ್ ಮಾತು.
ಈ ಚಿತ್ರಕ್ಕಾಗಿ ಕೋಮಲ್ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ ಕೂಡಾ.