ದೇವನಹಳ್ಳಿ: ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿ ಕೊಟ್ಟಿದ್ದು, ಅದರ ನೆನಪಿಗಾಗಿ ಸರ್ಕಾರ ಹರ ಘರ್ ತಿರಂಗಾ ಕಾರ್ಯಕ್ರಮ ಆಯೋಜಿಸಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ಪಟ್ಟಣದ ತಾಲೂಕು ಬಿಜೆಪಿ ಕಚೇರಿ ಆವರಣದಲ್ಲಿ ಬಿಜೆಪಿ ವತಿಯಿಂದ ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಮನೆಗಳ ಮೇಲೂ ತಿರಂಗಾ ಧ್ವಜ ಹಾರಾಟ ಮಾಡಬೇಕು. ಸ್ವಾತಂತ್ರ್ಯೋತ್ಸವದ ಇತಿಹಾಸವನ್ನು ನಾವೆಲ್ಲರೂ ಅರಿತುಕೊಳ್ಳಬೇಕು.
ಅಂದಿನ ಜನರ ತ್ಯಾಗ, ಬಲಿದಾನದಿಂದ ನಮಗೆಲ್ಲಾ ಸ್ವಾತಂತ್ರ್ಯ ಲಭಿಸಿದೆ. ಹೋರಾಟಗಳ ಘಟನೆಗಳ ಮಾಹಿತಿ ಮುಂದಿನ ಪೀಳಿಗೆಗೆ ದೊರಕುವಂತೆ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ. ನಾರಾಯಣಸ್ವಾಮಿ ಮಾತನಾಡಿ, ಸಮಾಜ ಅಭಿವೃದ್ಧಿಯಾಗಬೇಕು. ಎಲ್ಲರೂ ಉತ್ತಮ ದಾರಿಯಲ್ಲಿ ಸಾಗಬೇಕು. ತಮ್ಮ ಮನೆಗಳ ಮೇಲೆ ಪಕ್ಷ ಭೇದ ಮರೆತು ರಾಷ್ಟ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳ ಸ್ವಾತಂತ್ರ್ಯ ಹಾಗೂ ಅಮೃತ ಮಹೋತ್ಸವ ದಿನದ ಅಂಗವಾಗಿ ಮನೆ ಮನೆಗೆ ತಿರಂಗಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ನಿವಾಸಿಗಳಿಗೆ ಕರೆ ನೀಡಿದ್ದಾರೆ ಎಂದರು.
ತಾಲೂಕಾದ್ಯಂತ ಬೈಕ್ ರ್ಯಾಲಿ: ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಇಡೀ ದೇಶದ ಜನತೆಗೆ ಹರ್ ಘರ್ ತಿರಂಗಾ ಎಂಬ ವಿಶೇಷ ಕಾರ್ಯಕ್ರಮ ನೀಡಿದ್ದಾರೆ. ತಾಲೂಕಾದ್ಯಂತ ಬೈಕ್ ರ್ಯಾಲಿ ಮೂಲಕ ಪ್ರತಿ ಜನರಲ್ಲೂ ರಾಷ್ಟ್ರಧ್ವಜದ ಜೊತೆಗೆ ಅರಿವು ಮೂಡಿಸಲಾಗುತ್ತಿದೆ. ಮೋದಿ ನೇತೃತ್ವದ ಭಾರತವನ್ನು ಇಡೀ ಜಗತ್ತೇ ಸಂತೋಷ ಪಟ್ಟಿದೆ ಎಂದರು.
ವಿಧಾನಪರಿಷತ್ ಸದಸ್ಯ ಕೇಶವಪ್ರಸಾದ್, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಖಜಾಂಚಿ ಕೆ.ನಾಗೇಶ್, ತಾಪಂ ಮಾಜಿ ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಸುನಿಲ್, ಪ್ರಧಾನ ಕಾರ್ಯದರ್ಶಿ ನೀಲೇರಿ ಮಂಜುನಾಥ್, ರವಿಕುಮಾರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಂ. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ರಾಜ್ಯಪರಿಷತ್ ಸದಸ್ಯ ದೇಸು ನಾಗರಾಜ್, ಪುರಸಭಾ ಸದಸ್ಯ ಬಾಂಬೆ ನಾರಾಯಣಸ್ವಾಮಿ, ಜಿಲ್ಲಾ ಮಾಧ್ಯಮ ಪ್ರಮುಖ್ ಎಸ್.ರಮೇಶ್ ಕುಮಾರ್, ತಾಲೂಕು ಉಪಾಧ್ಯಕ್ಷ ರಾಮಕೃಷ್ಣ ಹೆಗ್ಗಡೆ, ಪುನೀತಾ, ಜಿಲ್ಲಾ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ನಾಗವೇಣಿ, ತಾಲೂಕು ಮಹಿಳಾ ಮೋರ್ಚ ಅಧ್ಯಕ್ಷೆ ವಿಮಲಾ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ, ಜಿಲ್ಲಾ ಎಸ್ .ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್ ಬಾಬು ಹಾಗೂ ಮತ್ತಿತರರು ಇದ್ದರು.