ಬೆಂಗಳೂರು: ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಅನೇಕ ಉದ್ಯಾನವನಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ನೂರಾರು ಮರಗಳು ನೆಲಕಚ್ಚಿವೆ. ಕಬ್ಬನ್ ಪಾರ್ಕ್‌ನಲ್ಲಿ 40ಕ್ಕೂ ಹೆಚ್ಚು ಮರಗಳು ಬಿದ್ದಿದ್ದು, ಇನ್ನೂ ಅನೇಕ ಮರಗಳ ರೆಂಬೆ-ಕೊಂಬೆಗಳು ಮುರಿದು ಬಿದ್ದಿವೆ.
ಕೇಂದ್ರ ಗ್ರಂಥಾಲಯ, ಬ್ಯಾಂಡ್ ಸ್ಟಾಂಡ್ ಸೇರಿದಂತೆ ಕಬ್ಬನ್ ಪಾರ್ಕಿನ ವಿವಿಧ ಭಾಗಗಳಲ್ಲಿನ ಸುಮಾರು 30 ರಿಂದ 65 ವರ್ಷಗಳಷ್ಟು ಹಳೆಯದಾದ ಪೆಲ್ಟೋಫೋರಂ, ಫಿಕಸ್ ಬೆಂಜಮಿನ್, ಪೇಪರ್ ಮಲ್ಬರಿ, ಆರ್ಕ್, ಸಿಲ್ವರ್‌ಓಕ್, ಹಲಸು ಸೇರಿದಂತೆ ಮತ್ತಿತರರ ಜಾತಿಯ ಮರಗಳು ನೆಲಕ್ಕುರುಳಿವೆ.
ಪ್ರತಿ ವರ್ಷ ಮಳೆಗಾಲದಲ್ಲಿ ಗಾಳಿ-ಮಳೆಗೆ ಮರಗಳು ಬೀಳುವುದು ಸಹಜ. ತೋಟಗಾರಿಕೆ ಸಿಬ್ಬಂದಿಗೆ ಮಳೆ ನಿಂತ ನಂತರ ಬಿದ್ದ ಮರಗಳು, ಮುರಿದ ರೆಂಬೆ ಕೊಂಬೆಗಳನ್ನು ತೆರವು ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಸೋಮವಾರ ಬಹುತೇಕ ತೆರವು ಕಾರ್ಯ ಪೂರ್ಣಗೊಂಡಿದ್ದರೂ, ಉದ್ಯಾನವನ್ನು ಸ್ವಚ್ಛಗೊಳಿಸುವ ಕಾರ್ಯ ಮುಂದುವರೆಸಲಾಗಿದೆ. ಇನ್ನೂ ಯಾವೆಲ್ಲಾ ಮರಗಳು, ಎಷ್ಟು ವರ್ಷಗಳ ಮರಗಳು ಎಂಬ ನಿಖರವಾದ ಮಾಹಿತಿ ತಿಳಿಯಬೇಕಿದೆ.
ಬಿದ್ದ ಮರಗಳ ಜಾಗದಲ್ಲಿ ಬೇರೆ ಸಸಿಗಳನ್ನು ನಡೆಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಎಚ್.ಟಿ. ಬಾಲಕೃಷ್ಣ ಮಾಹಿತಿ ನೀಡಿದರು. ಮೂರು ತಿಂಗಳಿನಿಂದಲೇ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ಒಣಗಿದ ಮರಗಳು, ರೆಂಬೆಕೊಂಬೆಗಳನ್ನು ತೆರವುಗೊಳಿಸುವ ಕಾರ್ಯವನ್ನು ನಡೆಯುತ್ತಿದ್ದು, ಕೈಗೆಟುಕದ ಮತ್ತು ತುಂಬಾ ಎತ್ತರದಲ್ಲಿರುವ ಮರದ ಒಣಗಿದ ಕೆಲ ರೆಂಬೆಕೊಂಬೆಗಳನ್ನು ತೆರವು ಮಾಡಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಭಾನುವಾರ ಮಳೆಗಿಂತ ಗಾಳಿ ಹೆಚ್ಚಾಗಿದ್ದರಿಂದ ಒಣಗಿದ ರೆಂಬೆಗಳು ಸೇರಿದಂತೆ ಹಳೆಯ ಮರಗಳ ಹಸಿಯಾಗಿರುವ ರೆಂಬೆಕೊಂಬೆಗಳೂ ಮುರಿದು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
“ಅಭಿವೃದ್ಧಿ ಕಾರ್ಯಗಳಿಂದ ಬೇರುಗಳು ಸಡಿಲ’: ಕಬ್ಬನ್ ಪಾರ್ಕ್‌ನಲ್ಲಿ 150ಕ್ಕೂ ಹೆಚ್ಚು ಮರಗಳು ಬಿದ್ದಿದ್ದು, ಹಲವಾರು ಮರಗಳಿಗೆ ಹಾನಿಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಕಬ್ಬನ್ ಪಾರ್ಕ್ ಅನ್ನು ನಾಶಮಾಡುತ್ತಿದ್ದಾರೆ. ಇದರಿಂದಾಗಿ ಬೇರುಗಳು ಸಡಿಲಗೊಂಡು, ದೊಡ್ಡ ದೊಡ್ಡ ಮರಗಳೇ ಗಾಳಿ- ಮಳೆಗೆ ಬೀಳುತ್ತಿವೆ. ಇದರಿಂದಾಗಿ ಪರಿಸರ ಹಾಳಾ ಗುತ್ತಿದ್ದು, ವಾಯುವಿಹಾರಕ್ಕೆ ಬರುವ ಹಿರಿಯ ನಾಗರಿ ಕರಿಗೂ ತೊಂದರೆಯುಂಟಾಗಿದೆ ಎಂದು ಕಬ್ಬನ್ ಉದ್ಯಾನ ನಡಿಗೆದಾರರ ಸಂಘ ಆರೋಪಿಸಿದೆ.